ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪುರ ಪ್ರಕರಣ ಸಂಬಂಧ ಎಚ್ಚರಿಕೆ: ಮಿಜೋರಾಂನಿಂದ ಪಲಾಯನ ಆರಂಭಿಸಿದ ಮೈತೇಯಿ ಸಮುದಾಯ

Published 22 ಜುಲೈ 2023, 16:24 IST
Last Updated 22 ಜುಲೈ 2023, 16:24 IST
ಅಕ್ಷರ ಗಾತ್ರ

ಐಜೋಲ್ (ಮಿಜೋರಾಂ): ಮಣಿಪುರದಲ್ಲಿ ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿಸಿದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದಕ್ಕೆ ಸಂಬಂಧಿಸಿದಂತೆ ಮಿಜೋರಾಂನ ಮಾಜಿ ಬಂಡುಕೋರರ ಸಂಘಟನೆ, ಮೈತೇಯಿ ಸಮುದಾಯದವರಿಗೆ ಗಂಭೀರ ಎಚ್ಚರಿಕೆ ನೀಡಿದೆ. ಹೀಗಾಗಿ ಮಿಜೋರಾಂನಲ್ಲಿರುವ ಮೈತೇಯಿ ಸಮುದಾಯದವರು ರಾಜ್ಯದಿಂದ ಶನಿವಾರ ಪಲಾಯನ ಮಾಡುತ್ತಿದ್ದಾರೆ.

ಶಾಂತಿ ಒಪ್ಪಂದದ ಮೇರೆಗೆ ಮಿಜೋರಾಂ ನ್ಯಾಷನಲ್‌ ಫ್ರಂಟ್‌ನಿಂದ ಮರಳಿದವರ ಸಂಘಟನೆ (ಪಿಎಎಂಆರ್‌ಎ) ಮೈತೇಯಿ ಸಮುದಾಯದವರಿಗೆ ಶನಿವಾರ ಎಚ್ಚರಿಕೆ ನೀಡಿತ್ತು. ಇದರ ಬೆನ್ನಲ್ಲೇ ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಸೇರಿದಂತೆ ಸುಮಾರು 60 ಮಂದಿ ಇಂದು (ಶನಿವಾರ) ಬೆಳಗ್ಗೆ ಮಣಿಪುರಕ್ಕೆ ತೆರಳಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಮಿಜೋರಾಂ ಗೃಹ ಇಲಾಖೆ ಆಯುಕ್ತ ಎಚ್‌. ಲಾಲೆಂಗ್ಮಾವಿಯಾ ಅವರು ಮಾಜಿ ಬಂಡುಕೋರರ ಸಂಘಟನೆ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದಾರೆ. 

ಮಿಜೋರಾಂನಲ್ಲಿರುವ ಮಣಿಪುರ ಸಮುದಾಯದವರನ್ನು ಬಳಿಕ ಭೇಟಿ ಮಾಡಿದ ಆಯಕ್ತರು ಸೂಕ್ತ ಭದ್ರತೆ ಒದಗಿಸುವುದಾಗಿ ಭರವಸೆ ನೀಡಿದ್ದು, ರಾಜ್ಯ ತೊರೆಯದಂತೆ ಮನವಿ ಮಾಡಿದ್ದಾರೆ.

ಮಿಜೋರಾಂ ಸರ್ಕಾರವು ರಾಜಧಾನಿ ಐಜೋಲ್‌ ಸೇರಿದಂತೆ ಮೈತೇಯಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳಿಗೆ ಮುನ್ನೆಚ್ಚರಿಕೆ ದೃಷ್ಟಿಯಿಂದ ರಕ್ಷಣಾ ಸಿಬ್ಬಂದಿಯನ್ನು ಶುಕ್ರವಾರವೇ ನಿಯೋಜಿಸಿದೆ.

ಇದನ್ನೂ ಓದಿ: ಮಹಿಳೆಯರನ್ನು ನಗ್ನಗೊಳಿಸುವ ಮುನ್ನ ಇಡೀ ಊರಿಗೆ ಬೆಂಕಿ ಹಚ್ಚಿದ ಉದ್ರಿಕ್ತರು: FIR

ಮಣಿಪುರದಲ್ಲಿ ಪರಿಶಿಷ್ಟ ಪಂಗಡ ಮೀಸಲಾತಿ ವಿಚಾರವಾಗಿ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವೆ ಮೇ 3ರಿಂದಲೂ ಹಿಂಸಾಚಾರ ನಡೆಯುತ್ತಿದೆ. ಈವರೆಗೆ 160ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ.

ಮಣಿಪುರದ ಕಾಂಗ್‌ಪೊಕ್ಪಿ ಜಿಲ್ಲೆಯ ಗ್ರಾಮವೊಂದಕ್ಕೆ ಮೇ 4ರಂದು ಮುತ್ತಿಗೆ ಹಾಕಿದ್ದ ಸಾವಿರಾರು ಜನರ ಗುಂಪು, ಮನೆಗಳನ್ನು ಲೂಟಿ ಮಾಡಿ ಇಡೀ ಊರಿಗೆ ಬೆಂಕಿ ಹಚ್ಚಿತ್ತು. ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿ, ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಬೆತ್ತಲೆ ಮೆರವಣಿಗೆ ನಡೆಸಲಾಗಿತ್ತು.

ಬಲವಂತದ ಮೆರವಣಿಗೆ, ಲೈಂಗಿಕ ಕಿರುಕುಳ ನೀಡಿದ ಹೇಯ ಕೃತ್ಯಕ್ಕೆ ಸಂಬಂಧಿಸಿದ ವಿಡಿಯೊಗಳು ಜುಲೈ 19ರಂದು ಎಲ್ಲೆಡೆ ಹರಿದಾಡಿದ್ದವು. ಬಳಿಕ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT