ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು ಅಣೆಕಟ್ಟು: ಡಿಕೆಶಿ ಹೇಳಿಕೆಗೆ ಎಐಎಡಿಎಂಕೆ, ಡಿಎಂಕೆ ಆಕ್ಷೇಪ

Published 1 ಜೂನ್ 2023, 16:30 IST
Last Updated 1 ಜೂನ್ 2023, 16:30 IST
ಅಕ್ಷರ ಗಾತ್ರ

ಚೆನ್ನೈ : ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂಬ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿಕೆಗೆ ತಮಿಳುನಾಡಿನ ಎಐಎಡಿಎಂಕೆ ಹಾಗೂ ಆಡಳಿತರೂಢ ಡಿಎಂಕೆ ಪಕ್ಷ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

‘ಕರ್ನಾಟಕ ಸರ್ಕಾರದ ಈ ನಿರ್ಧಾರದಿಂದ ತಮಿಳುನಾಡು ಭವಿಷ್ಯದಲ್ಲಿ ಮರುಭೂಮಿಯಾಗಲಿದೆ. ಹಾಗಾಗಿ, ಅಣೆಕಟ್ಟು ನಿರ್ಮಾಣದ ವಿರುದ್ಧ ತೀವ್ರ ಪ್ರತಿಭಟನೆ ನಡೆಸಲಾಗುವುದು’ ಎಂದು ಎಐಎಡಿಎಂಕೆ ವಿರೋಧ ಪಕ್ಷದ ನಾಯಕ ಕೆ. ಪಳನಿಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

‘ಕಾಂಗ್ರೆಸ್ ಸರ್ಕಾರವು ಕಾವೇರಿ ನದಿಯ ಕೊನೆ ತೀರದ ಜನರ ಹಿತಾಸಕ್ತಿಗೆ ವಿರುದ್ಧವಾಗಿ ಯಾವುದೇ ನಿರ್ಧಾರ ಕೈಗೊಳ್ಳಬಾರದು’ ಎಂದು ಒತ್ತಾಯಿಸಿದ್ದಾರೆ.

ಕಾವೇರಿ ಅಂತರರಾಜ್ಯ ನದಿ ವಿವಾದ ಕಾಯ್ದೆ 1956ರ ಅನ್ವಯ ನದಿಯ ಸ್ವರೂಪ ಬದಲಾಯಿಸುವ ಯಾವುದೇ ಹಕ್ಕು ಕರ್ನಾಟಕಕ್ಕೆ ಇಲ್ಲ. ಅಲ್ಲದೇ, ಕಾವೇರಿ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿ ನದಿ ನೀರು ಹಂಚಿಕೆಯ ರಾಜ್ಯಗಳ ಅನುಮತಿ ಇಲ್ಲದೆ ಹೊಸದಾಗಿ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳದಂತೆ ಅಂತಿಮ ತೀರ್ಪಿನಲ್ಲೂ ಸ್ಪಷ್ಟಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ತಮಿಳುನಾಡಿನ ವಿರೋಧದ ನಡುವೆಯೂ ಕರ್ನಾಟಕ ಸರ್ಕಾರ ಅಣೆಕಟ್ಟು ನಿರ್ಮಾಣ ಮಾಡುವುದಾಗಿ ಘೋಷಿಸಿದೆ. ಡ್ಯಾಂ ನಿರ್ಮಿಸಿದರೆ ನೀರಾವರಿ ಮತ್ತು ಕುಡಿಯುವ ನೀರಿಗೆ ಕಾವೇರಿ ನದಿ ಅವಲಂಬಿಸಿರುವ ತಮಿಳುನಾಡು ಮರುಭೂಮಿಯಾಗಲಿದೆ ಎಂದಿರುವ ಪಳನಿಸ್ವಾಮಿ, ‘ಅಣೆಕಟ್ಟು ನಿರ್ಮಾಣ ವಿರುದ್ಧದ ಹೋರಾಟದಲ್ಲಿ ಡಿಎಂಕೆ ಸರ್ಕಾರವನ್ನು ನಾವು ಅವಲಂಬಿಸುವುದಿಲ್ಲ’ ಎಂದಿದ್ದಾರೆ.

ಸಿಪಿಐ ರಾಜ್ಯ ಕಾರ್ಯದರ್ಶಿ ಆರ್‌. ಮುತರಸನ್ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದು, ‘ತಮಿಳುನಾಡು, ಪುದುಚೇರಿ ಮತ್ತು ಕೇರಳದ ಅನುಮತಿ ಇಲ್ಲದೆಯೇ ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ ಯಾವುದೇ ಯೋಜನೆ ಕೈಗೆತ್ತಿಕೊಳ್ಳುವಂತಿಲ್ಲ. ಈ ಬಗ್ಗೆ ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ’ ಎಂದಿದ್ದಾರೆ.

ಡಿಎಂಕೆಗೆ ಅಚ್ಚರಿ

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರ ಕೂಡ ಅಣೆಕಟ್ಟು ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದೆ. ಅಲ್ಲದೇ, ಅಧಿಕಾರಕ್ಕೆ ಬಂದ ತಕ್ಷಣವೇ ತಮಿಳುನಾಡನ್ನು ಟೀಕಿಸಿರುವ ಶಿವಕುಮಾರ್‌ ಧೋರಣೆಗೆ ಅಚ್ಚರಿ ವ್ಯಕ್ತಪಡಿಸಿದೆ.

‘ಕಾವೇರಿ ನ್ಯಾಯಮಂಡಳಿ ಅಥವಾ ಸುಪ್ರೀಂ ಕೋರ್ಟ್‌ನ ಅಂತಿಮ ತೀರ್ಪಿನಲ್ಲಿ ಉದ್ದೇಶಿತ ಮೇಕೆದಾಟು ಅಣೆಕಟ್ಟು ನಿರ್ಮಾಣದ ಬಗ್ಗೆ ಪ್ರಸ್ತಾಪವೇ ಇಲ್ಲ. ಈ ಬಗ್ಗೆ ಉಪ ಮುಖ್ಯಮಂತ್ರಿ ಶಿವಕುಮಾರ್‌ ಮೊದಲು ತಿಳಿದುಕೊಳ್ಳಬೇಕು’ ಎಂದು ಜಲ ಸಂಪನ್ಮೂಲ ಸಚಿವ ದುರೈಮುರುಗನ್ ಬುಧವಾರ ಪ್ರತಿಕ್ರಿಯಿಸಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT