ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆಗೆ ಬಾರದ ಮೇಕೆದಾಟು: ಲೋಕಸಭೆಗೆ ತಿಳಿಸಿದ ಕೇಂದ್ರ ಸರ್ಕಾರ

ಕಾವೇರಿ ಪ್ರಾಧಿಕಾರ: ರಾಜ್ಯಗಳ ಮಧ್ಯೆ ಮೂಡದ ಒಮ್ಮತ
Last Updated 16 ಡಿಸೆಂಬರ್ 2022, 2:38 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರಗಳು ಇಲ್ಲಿಯವರೆಗೆ ಒಮ್ಮತಕ್ಕೆ ಬಾರದ ಕಾರಣ ಮೇಕೆದಾಟು ಜಲಾಶಯ ನಿರ್ಮಾಣದ ವಿಚಾರವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ (ಸಿಡಬ್ಲ್ಯುಎಂಎ) ಚರ್ಚೆಗೆ ಬಂದಿಲ್ಲ ಎಂದು ಕೇಂದ್ರ ಸರ್ಕಾರವು ಲೋಕಸಭೆಗೆ ತಿಳಿಸಿದೆ.

ಸಂಸದ ಎ.ಗಣೇಶಮೂರ್ತಿ ಗುರುವಾರ ಕೇಳಿರುವ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಕೇಂದ್ರ ಜಲಶಕ್ತಿ ರಾಜ್ಯ ಸಚಿವ ಬಿಶ್ವೇಶ್ವರ ತುಡು, ‘ಮೇಕೆದಾಟು ಯೋಜನೆಯ ಕಾರ್ಯಸಾಧ್ಯತಾ ವರದಿಯನ್ನು ಕೇಂದ್ರ ಜಲ ಆಯೋಗಕ್ಕೆ ಕರ್ನಾಟಕ ಸರ್ಕಾರವು ಸಲ್ಲಿಸಿತ್ತು. ಕೆಲವು ಷರತ್ತುಗಳನ್ನು ವಿಧಿಸಿ ಜಲ ಆಯೋಗವು ಕಾರ್ಯಸಾಧ್ಯತಾ ವರದಿಗೆ ಒಪ್ಪಿಗೆ ನೀಡಿತ್ತು. ‘ಸುಪ್ರೀಂಕೋರ್ಟ್‌ ಮಾರ್ಪಾಡು ಮಾಡಿರುವ ಕಾವೇರಿ ಜಲವಿವಾದ ನ್ಯಾಯಾಧೀಕರಣದ ತೀರ್ಪಿನ ಅನ್ವಯವೇ ಈ ಯೋಜನೆ ಅನುಷ್ಠಾನ ಮಾಡಲಾಗುತ್ತದೆ ಎಂದು ಕಾರ್ಯಸಾಧ್ಯತಾ ವರದಿಯಲ್ಲಿ ತಿಳಿಸಲಾಗಿದೆ. ಯೋಜನೆಯ ಡಿಪಿಆರ್‌ಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಿಂದ ಒಪ್ಪಿಗೆ ಪಡೆಯಬೇಕು’ ಎಂದು ಜಲ ಆಯೋಗವು ಸೂಚಿಸಿತ್ತು’ ಎಂದಿದ್ದಾರೆ.

‘ಕರ್ನಾಟಕ ಸರ್ಕಾರವು ಜಲ ಆಯೋಗಕ್ಕೆ 2019ರ ಜನವರಿಯಲ್ಲಿ ಡಿಪಿಆರ್ ಸಲ್ಲಿಸಿತ್ತು. ಅದರ ಪ್ರತಿಯನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ನೀಡಲಾಗಿತ್ತು. ರಾಜ್ಯಗಳು ಒಮ್ಮತಕ್ಕೆ ಬಾರದ ಕಾರಣ ಸಭೆಯಲ್ಲಿ ಚರ್ಚೆಗೆ ಬಂದಿಲ್ಲ’ ಎಂದು ಸಚಿವರು ಉತ್ತರ ನೀಡಿದ್ದಾರೆ.

2022ರ ಅಕ್ಟೋಬರ್‌ 14ರಂದು ನಡೆದ ಪ್ರಾಧಿಕಾರದ 17ನೇ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿತ್ತು. ಆಗ ಕರ್ನಾಟಕ ಸರ್ಕಾರದ ಪ್ರತಿನಿಧಿ, ‘ಸಭೆಯ ಕಾರ್ಯಸೂಚಿಯಲ್ಲಿ ಮೇಕೆದಾಟು ವಿಚಾರ ಹಲವು ಸಲ ಸೇರ್ಪಡೆಯಾಗಿದೆ. ಬಳಿಕ ಅದನ್ನು ಕೈಬಿಡಲಾಗಿದೆ. 18ನೇ ಸಭೆಯ ಕಾರ್ಯಸೂಚಿಯಲ್ಲಿ ಮೇಕೆದಾಟು ವಿಷಯವನ್ನು ಸೇರ್ಪಡೆ ಮಾಡಬೇಕು’ ಎಂದು ಮನವಿ ಮಾಡಿದ್ದರು. ಹೀಗಾಗಿ ಸೇರ್ಪಡೆ ಮಾಡಲು ತೀರ್ಮಾನಿಸಲಾಗಿತ್ತು ಎಂದರು.

ಮೇಕೆದಾಟು ಯೋಜನೆಗೆ ಅನುಮೋದನೆ ನೀಡುವಂತೆ ಕರ್ನಾಟಕದ ವತಿಯಿಂದ ಕಳೆದ 15 ದಿನಗಳಲ್ಲಿ ಮೂರು ಬಾರಿ ಮನವಿ ಸಲ್ಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT