ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಎಎಲ್‌ನಲ್ಲಿ ವಿಮಾನ ಸ್ಫೋಟ: ಅಂದು ಏನಾಯಿತು?

ನಮ್ಮ ಪ್ರಾಣ ಪಣಕ್ಕಿಟ್ಟು ವಿಮಾನಗಳನ್ನು ಪರೀಕ್ಷಿಸಿರುತ್ತೇವೆ ಎನ್ನುತ್ತಾರೆ ಪರೀಕ್ಷಕ ಪೈಲಟ್‌
Last Updated 21 ಮಾರ್ಚ್ 2019, 6:37 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರಿನಲ್ಲಿ ಹಿಂದುಸ್ತಾನ್ ಏರೋನಾಟಿಕಲ್ ಲಿಮಿಟೆಡ್ (ಎಚ್ಎಎಲ್) ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ಸಂಭವಿಸಿದಮಿರಾಜ್ 2000 ವಿಮಾನ ದುರಂತದ ದೃಶ್ಯಾವಳಿಗಳನ್ನು ವಾಯು ಸಂಚಾರ ನಿಯಂತ್ರಣ ಕೇಂದ್ರದಿಂದ ಪಡೆದುಕೊಂಡಿರುವ ವಾಯುಪಡೆಯು, ಅದನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸುತ್ತಿದೆ. ಕೊನೆಯ ಕ್ಷಣದಲ್ಲಿ ಕಾಣಿಸಿಕೊಂಡಿರಬಹುದಾದ ತಾಂತ್ರಿಕ ದೋಷವು ದುರಂತಕ್ಕೆ ಕಾರಣವಾಗಿರಬಹುದು ಎಂದು ಊಹಿಸಲಾಗಿದೆ.

ವಿಮಾನಕ್ಕೆ ‘ಹೆವಿ ಡ್ರಾಪ್ ಟ್ಯಾಂಕ್’ ಅಳವಡಿಸಿ ಪರೀಕ್ಷಾರ್ಥ ಹಾರಾಟ ನಡೆಸುತ್ತಿದ್ದಾಗ ದುರಂತ ಸಂಭವಿಸಿತ್ತು. ಪೈಲಟ್‌ಗಳಾದ ಸಮೀರ್ ಅಬ್ರೋಲ್ ಹಾಗೂ ಸಿದ್ಧಾರ್ಥ್ ನೇಗಿ ಮೃತಪಟ್ಟಿದ್ದರು.

ಮೂಲಗಳ ಪ್ರಕಾರ ವಿಮಾನವು ಹಾರಾಟ ಆರಂಭಿಸಿದ ಕೆಲವೇ ಸೆಕೆಂಡ್‌ಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ದುರಂತಕ್ಕೆ ಸಂಬಂಧಿಸಿದ ಸಂಪೂರ್ಣ ಘಟನಾವಳಿಯು ವಿಡಿಯೊದಲ್ಲಿ ಸೆರೆಯಾಗಿದೆ. ಆದಾಗ್ಯೂ ನಿಖರ ಕಾರಣವನ್ನು ತಿಳಿಯಲು ವಿಮಾನದ ಕಪ್ಪುಪೆಟ್ಟಿಗೆಯನ್ನು ವಶಕ್ಕೆ ಪಡೆದು, ಅದರ ಪರಿಶೀಲನೆಗಾಗಿ ಫ್ರಾನ್ಸ್‌ಗೆ ಕಳುಹಿಸಿಕೊಡಲಾಗಿದೆ.

ವಿಡಿಯೊದಲ್ಲೇನಿದೆ?

ಸುಮಾರು 13 ಸೆಕೆಂಡ್‌ಗಳ ವರೆಗೆಚಕ್ರದ ಮೂಲಕ ಸಾಗಿದ ವಿಮಾನವು, ತನ್ನ ಬ್ರೇಕ್‌(ನಿಯಂತ್ರಣ)ಗಳನ್ನು ಕಳಚಿ ವೇಗ ಪಡೆದುಕೊಳ್ಳುತ್ತಾನಂತರದ 7 ಸೆಕೆಂಡ್‌ಗಳಲ್ಲಿ ಮೇಲೆ ಹಾರಿದೆ.

‘ವಿಮಾನವು ನೆಲದಿಂದ ಸುಮಾರು 5ಮೀಟರ್‌ನಷ್ಟು ಎತ್ತರದಲ್ಲಿ ಹಾರುತ್ತಿದ್ದಾಗ, ಮುಂಭಾಗವು ಕೆಳಮುಖವಾಗಿ ಕುಸಿಯಲು ಆರಂಭಿಸಿದೆ. ಮುಂಭಾಗ ಹಾಗೂ ಚಕ್ರಗಳು ರನ್‌ ವೇಗೆ ಅಪ್ಪಳಿಸಿವೆ. ಇದರಿಂದಾಗಿ ರನ್‌ ವೇಗೂ ಹಾನಿಯಾಗಿದ್ದು ಬೆಂಕಿ ಕಾಣಿಸಿಕೊಂಡಿದೆ’ ಎಂದು ಮೂಲಗಳು ತಿಳಿಸಿವೆ.

ಪರಿಣಾಮವಾಗಿ, ವಿಮಾನವು ಕುಸಿದಿದೆ.ಅಷ್ಟು ಹೊತ್ತಿಗೆ, ಬಾಲದ ಕೆಳಭಾಗಕ್ಕೂ ಹಾನಿಯಾಗಿದೆ. ಆದಾಗ್ಯೂ ವಿಮಾನವು ತನ್ನಎರಡು ರೆಕ್ಕೆಗಳ ಟ್ಯಾಂಕ್‌ ಮತ್ತು ಮುಂದಿನ ಚಕ್ರದೊಂದಿಗೆ ಮುಂದುವರಿದಿದೆ.‌ಈ ಹಂತದಲ್ಲಿ ಪೈಲಟ್‌ಗಳಿಗೆ ವಿಮಾನ ತಡೆಯಲು ಬೇರೆಯ ಬ್ರೇಕಿಂಗ್‌ ವ್ಯವಸ್ಥೆ ಇರಲಿಲ್ಲವಾದರೂ, ಟ್ಯಾಂಕ್‌ ನೆಲವನ್ನು ಉಜ್ಜುತ್ತಾ ಸಾಗುತ್ತಿದ್ದುದರಿಂದ ವಿಮಾನ ನಿಲ್ಲಬಹುದು ಎಂದುನಿರೀಕ್ಷಿಸಿದ್ದವು ಎಂದೂ ಹೇಳಿವೆ.

ಸಮೀರ್ ಅಬ್ರೋಲ್, ಸಿದ್ಧಾರ್ಥ್ ನೇಗಿ
ಸಮೀರ್ ಅಬ್ರೋಲ್, ಸಿದ್ಧಾರ್ಥ್ ನೇಗಿ

ಅರೆಸ್ಟರ್‌ ಬ್ಯಾರಿಯರ್‌ಗಳು(ರನ್‌ ವೇ ತುದಿಯಲ್ಲಿ ವಿಮಾನವನ್ನು ನಿಯಂತ್ರಿಸಲು ಇರುವ ಬಲೆಯಂತಹ ತಡೆಗೋಡೆ) ವಿಮಾನವನ್ನು ನಿಲ್ಲಿಸಲು ವಿಫಲವಾಗಿರುವುದು ಹಾಗೂ ರನ್‌ ವೇ ಬೌಂಡರಿ ಗೆರೆ ಬಳಿಯಿರುವ ಸುಮಾರು 10ಅಡಿ ಎತ್ತರದ ಗೋಡೆಗೆ ಸಮೀಪದಲ್ಲಿ ವಿಮಾನ ನೆಲಕ್ಕೆ ಅಪ್ಪಳಿಸಿ ಸ್ಫೋಟಗೊಂಡಿದೆ. ವಿಮಾನವು ಅಪಾಯದಲ್ಲಿರುವುದು ಹಾಗೂ ಅದನ್ನು ನೆಲಕ್ಕಿಳಿಸಲು ಪೈಲಟ್‌ಗಳು ಪ್ರಯತ್ನಿಸುತ್ತಿರುವುದೂವಿಡಿಯೊದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.

ವಿಮಾನವು ನೆಲಕ್ಕೆ ಅಪ್ಪಳಿಸುವ ವೇಳೆಗೆ ಎರಡು ಸೀಟ್‌ಗಳು(ಪೈಲಟ್‌ಗಳಿಬ್ಬರು) ವಿಮಾನದಿಂದ ಕಳಚಿಕೊಂಡು ಹೊರಬರುವುದು ದಾಖಲಾಗಿದೆಯಾದರೂ ಅದು ತುಂಬಾ ತಡವಾಗಿತ್ತು ಎಂದು ತಿಳಿಯಲಾಗಿದೆ. ಸದ್ಯ ವಶಕ್ಕೆ ಪಡೆದು ಪರಿಶೀಲನೆಗೆ ಕಳುಹಿಸಿಕೊಡಲಾಗಿರುವ ಬ್ಲಾಕ್‌ ಬಾಕ್ಸ್‌ನಿಂದ ಮಾತ್ರವೇ ದುರಂತಕ್ಕೆ ನಿಖರ ಕಾರಣವೇನು ಎಂಬುದನ್ನು ತಿಳಿಯಲು ಸಾಧ್ಯ.

ವಿಮಾನಗಳನ್ನು ನಮ್ಮ ಪ್ರಾಣ ಪಣಕ್ಕಿಟ್ಟು ಪರೀಕ್ಷಿಸಿರುತ್ತೇವೆ..

ವಿಮಾನ ದುರಂತ ಸಂಭವಿಸಿದ ನಂತರ ಎಚ್‌ಎಎಲ್‌ ನಿರ್ಮಿತ ವಿಮಾನಗಳ ಗುಣಮಟ್ಟ, ದಕ್ಷತೆಯ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿವೆ. ಆದರೆ, ಅಲ್ಲಿನ ಪೈಲಟ್‌ಗಳು ಹೇಳುವ ಪ್ರಕಾರ ದುರಂತಕ್ಕೀಡಾದ ವಿಮಾನದಲ್ಲಿ ಯಾವುದೇ ರೀತಿಯ ತಾಂತ್ರಿಕ ದೋಷಗಳು ಇರಲಿಲ್ಲ.

ಫ್ರಾನ್ಸ್‌ ಮೂಲದ ಕಂಪೆನಿಯೊಂದು ವಿನ್ಯಾಸ ಪಡಿಸಿರುವ ಮಿರಾಜ್‌ 2000 ವಿಮಾನವನ್ನು ಎಚ್‌ಎಎಲ್‌ ಪೈಲಟ್‌ಗಳು ಆರು ಬಾರಿ ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಿ ಪ್ರಮಾಣೀಕರಿಸಿದ್ದರು. ಆದರೆ, ವಾಯುಪಡೆಯ ಪೈಲಟ್‌ಗಳು ಮತ್ತೊಮ್ಮೆ ಪರೀಕ್ಷೆ ನಡೆಸುವ ವೇಳೆ ದುರಂತ ಸಂಭವಿಸಿತ್ತು.

ಕಾರ್ಗಿಲ್‌ ಯುದ್ಧದ ವೇಳೆ ಮಹತ್ವದ ಪಾತ್ರ ನಿರ್ವಹಿಸಿದ್ದ ಮಿರಾಜ್‌ ಯುದ್ಧ ವಿಮಾನಗಳ ಸಾಮರ್ಥ್ಯವನ್ನು ಮೇಲ್ದರ್ಜೆಗೇರಿಸುವ ಸಲುವಾಗಿ 2011–12ರ ಅವಧಿಯಲ್ಲಿ ₹ 17,547 ಕೋಟಿ ಮೊತ್ತದ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಫ್ರಾನ್ಸ್‌ ಮೂಲದ ಡಸಾಲ್ಟ್‌ ಕಂಪೆನಿಎರಡು ಯುದ್ಧ ವಿಮಾನಗಳ ವಿನ್ಯಾಸ ಮಾಡಿತ್ತು. ಆ ಸುಧಾರಿತ ತಂತ್ರಜ್ಞಾನವನ್ನು ಬಳಸಿ ಉಳಿದ 47 ವಿಮಾನಗಳನ್ನು ಎಚ್‌ಎಎಲ್‌ನಲ್ಲಿ ವಿನ್ಯಾಸಗೊಳಿಸಲಾಗಿದೆ.

‘ವಿಮಾನವು ವಾಯುಪಡೆಗೆ ಸೇರ್ಪಡೆಯಾಗುವ ಮುನ್ನ, ಅದರ ಗುಣಮಟ್ಟವನ್ನು ನಮ್ಮ ಪ್ರಾಣ ಪಣಕ್ಕಿಟ್ಟು ಪರೀಕ್ಷಿಸಲಾಗಿರುತ್ತದೆ. ವಾಯುಪಡೆಯ ಪ್ರತಿಯೊಬ್ಬ ಪೈಲಟ್‌ ಜೀವವೂ ನಮ್ಮ ತೀರ್ಮಾನದ ಮೇಲೆಯೇ ಅವಲಂಬಿತವಾಗಿರುತ್ತದೆ’ ಎಂದು ಹಸ್ತಾಂತರಿಸಲಾದ ಎಲ್ಲ ಮಿರಾಜ್‌ 2000 ಫೈಟರ್‌ ವಿಮಾನಗಳಪರೀಕ್ಷೆ ನಡೆಸಿದ್ದ ಎಚ್‌ಎಎಲ್‌ ಪೈಲಟ್‌ವೊಬ್ಬರು ಹೇಳಿದ್ದಾರೆ.

ಅದರಂತೆ ಎಚ್‌ಎಎಲ್‌ನಿಂದತಯಾರಿಸುವ ವಿಮಾನಗಳನ್ನು ವಾಯುಪಡೆಯವರು ಮುಟ್ಟುವ ಮುನ್ನ ಅದರ ಮಿತಿಯೊಳಗೆ ನಾವು ಸಾಕಷ್ಟು ಬಾರಿ ಹಾರಿಸಿ ಪರೀಕ್ಷೆ ನಡೆಸಿರುತ್ತೇವೆ ಎಂಬುದನ್ನು ನೆನಪಿಡಿ ಎಂದು ತಿಳಿಸಿದ್ದಾರೆ.

(ವಿಮಾನವನ್ನು ನಿಯಂತ್ರಿಸಲುಇರುವಅರೆಸ್ಟರ್‌ ಬ್ಯಾರಿಯರ್‌ ಕಾರ್ಯ ನಿರ್ವಹಿಸುವ ಬಗೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT