ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕರ್ಮ ಯೋಜನೆ: ಮಹಿಳೆ, ಒಬಿಸಿಗೆ ₹ 15 ಸಾವಿರ ಕೋಟಿ- ಪ್ರಧಾನಿ ಮೋದಿ

ಒಬಿಸಿ ವರ್ಗದ ಕಲ್ಯಾಣಕ್ಕೆ ವಿಶ್ವಕರ್ಮ ಯೋಜನೆ, ನಗರ ವಸತಿ ಯೋಜನೆ ಪ್ರಕಟಿಸಿದ ಪ್ರಧಾನಿ ಮೋದಿ
Published 15 ಆಗಸ್ಟ್ 2023, 13:29 IST
Last Updated 15 ಆಗಸ್ಟ್ 2023, 13:29 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭೆಯ ಸಾರ್ವತ್ರಿಕ ಚುನಾವಣೆ ಹತ್ತಿರವಾಗುತ್ತಿರುವ ಬೆನ್ನಲ್ಲೇ, ಮಹಿಳೆಯರು ಮತ್ತು ಇತರೆ ಹಿಂದುಳಿದ ವರ್ಗಗಳ ಜನರನ್ನು ಓಲೈಸುವ ಯತ್ನವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ₹15 ಸಾವಿರ ಕೋಟಿ ವೆಚ್ಚದ ‘ವಿಶ್ವಕರ್ಮ ಯೋಜನೆ’ಯನ್ನು ಘೋಷಿಸಿದರು.

ಈ ಯೋಜನೆಯ ಕಾರ್ಯಕ್ರಮಗಳು ಹಣದುಬ್ಬರದ ಸಂದರ್ಭದಲ್ಲಿ ಜನರ ಮೇಲಿನ ಹೊರೆ ತಗ್ಗಿಸಲು ನೆರವಾಗಲಿದೆ ಎಂದು ತಿಳಿಸಿದರು. ಕೆಂಪು ಕೋಟೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ಮಾಡಿ ಅವರು ಮಾತನಾಡಿದರು.

15 ಸಾವಿರ ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್‌ ನಿರ್ವಹಣೆ, ದುರಸ್ತಿ ತರಬೇತಿ ನೀಡುವ ಯೋಜನೆ ಹಾಗೂ ನಗರಗಳಲ್ಲಿನ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗಾಗಿ ವಸತಿ ಯೋಜನೆ ಜಾರಿಗೊಳಿಸುವ ತೀರ್ಮಾನವನ್ನು ಪ್ರಧಾನಿ ಪ್ರಕಟಿಸಿದರು.

‘ವಿಶ್ವಕರ್ಮ ಜಯಂತಿಯಂದು ನಾವು ಈ ಸಂಬಂಧ ವಿವಿಧ ಯೋಜನೆಗಳನ್ನು ಪ್ರಕಟಿಸಲಿದ್ದೇವೆ. ಈ ಯೋಜನೆಗಳು ಕೌಶಲಯುಕ್ತ, ಸಾಂಪ್ರಾದಾಯಿಕ ಕುಶಲಕರ್ಮಿಗಳಿಗೆ ಮುಖ್ಯವಾಗಿ ಇತರೆ ಹಿಂದುಳಿದ ವರ್ಗಗಳ ಸಮುದಾಯವರಿಗೆ ನೆರವಾಗಲಿದೆ ಎಂದು ತಿಳಿಸಿದರು.

ನೇಯ್ಗೆದಾರರು, ಅಕ್ಕಸಾಲಿಗರು, ಕಂಬಾರರು, ಅಗಸರು, ಕ್ಷೌರಿಕರು ಹಾಗೂ ಇಂತಹ ವಿವಿಧ ವರ್ಗದ ಕುಟುಂಬಗಳ ಆರ್ಥಿಕ ಸಬಲೀಕರಣ ವಿಶ್ವಕರ್ಮ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯನ್ನು ಸೆಪ್ಟೆಂಬರ್‌ 17, 2023ರಂದು ಆರಂಭಿಸಲಾಗುವುದು ಎಂದು ಹೇಳಿದರು.

ವಿಶ್ವಕರ್ಮ ಜಯಂತಿ ದಿನದಂದು ಈ ಯೋಜನೆಗಳಿಗೆ ಚಾಲನೆ ನೀಡಲಾಗುವುದು ಎಂದು ಪ್ರಧಾನಿ ಪ್ರಕಟಿಸಿದರಾದರೂ, ಕಾಕತಾಳೀಯ ಎಂಬಂತೆ ಆ ದಿನ ಅವರ ಜನ್ಮದಿನವೂ ಆಗಿದೆ. ಸೆ. 17ರಂದು ಮೋದಿ 73ನೇ ವರ್ಷಕ್ಕೆ ಪದಾರ್ಪಣೆ ಮಾಡಲಿದ್ದಾರೆ.

ಮಹಿಳಾ ಸಂಘಗಳಿಗೆ ತರಬೇತಿ: ಮಹಿಳಾ ಮತದಾರರನ್ನು ಗುರಿಯಾಗಿಸಿಕೊಂಡು, ಮಹಿಳಾ ಸ್ವಸಹಾಯ ಗುಂಪುಗಳಿಗೆ (ಎಸ್ಎಚ್‌ಜಿ) ಡ್ರೋನ್ ತರಬೇತಿ ನೀಡುವ ಯೋಜನೆಯನ್ನು ಅವರು ಪ್ರಕಟಿಸಿದರು.

ಈ ಯೋಜನೆಯಡಿ 15,000 ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಾಲ ನೀಡಲಾಗುವುದು ಹಾಗೂ ಡ್ರೋನ್‌ನ ನಿರ್ವಹಣೆ ಮತ್ತು ದುರಸ್ತಿ ಕುರಿತು ತರಬೇತಿ ನೀಡಲಾಗುತ್ತದೆ ಎಂದು ಹೇಳಿದರು.

ಹಣದುಬ್ಬರ,ಬೆಲೆ ಏರಿಕೆ ಉಲ್ಲೇಖ: ಅಗತ್ಯವಸ್ತುಗಳ ಬೆಲೆ ಏರಿಕೆ ವಿಷಯವನ್ನು ಭಾಷಣದಲ್ಲಿ ಉಲ್ಲೇಖಿಸಿದ ಅವರು, ಹಣದುಬ್ಬರಕ್ಕೆ ಕಡಿವಾಣ ಹಾಕಲು ಸರ್ಕಾರ ಇನ್ನಷ್ಟು ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಹಣದುಬ್ಬರವನ್ನು ತಡೆಯಲು, ದೇಶವಾಸಿಗಳ ಮೇಲಿನ ಹೊರೆ ತಪ್ಪಿಸಲು ನಾನು ಇನ್ನಷ್ಟು ಕ್ರಮ ಕೈಗೊಳ್ಳಬೇಕಾಗಿದೆ. ಈ ಬಗ್ಗೆ ನನ್ನ ಪ್ರಯತ್ನ ಮುಂದುವರಿಯಲಿದೆ. ಹಣದುಬ್ಬರ ತಡೆಯುವ ವಿಷಯದಲ್ಲಿ ಹಿಂದಿನ ಅವಧಿಗೆ ಹೋಲಿಸಿದರೆ, ನಾವು ಸ್ವಲ್ಪ ಯಶಸ್ಸು ಕಂಡಿದ್ದೇವೆ ಎಂದರು.

ದೇಶದಲ್ಲಿ ಚಿಲ್ಲರೆ ಹಣದುಬ್ಬರ ದರವು ಈಗ ಗರಿಷ್ಠ ಮಟ್ಟವನ್ನು ಮೀರಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ ಪ್ರಕಟಿಸಿದ ಮಾರನೇ ದಿನವೇ ಈ ಅಂಶವನ್ನು ಅವರು ಪ್ರಮುಖವಾಗಿ ಉಲ್ಲೇಖಿಸಿದ್ದಾರೆ.

ಅಗತ್ಯ ವಸ್ತುಗಳ ದರ ಏರಿಕೆಗೆ ರಷ್ಯಾ –ಉಕ್ರೇನ್‌ ಯುದ್ಧ ಕಾರಣ ಎಂದು ಹೇಳಿದ ಅವರು, ಕೊರೊನಾದ ಪ್ರತಿಕೂಲ ಪರಿಣಾಮಗಳಿಂದ ಜಗತ್ತು ಇನ್ನೂ ಹೊರಬಂದಿಲ್ಲ. ಇದರ ಜೊತೆಗೆ ಯುದ್ಧ ಹೆಚ್ಚುವರಿ ಸಮಸ್ಯೆಯಗಳನ್ನು ಸೃಷ್ಟಿಸಿದೆ ಎಂದು ದೂರಿದರು.

ಇದು, ಇಡೀ ಜಗತ್ತು ಹಣದುಬ್ಬರ ಸಮಸ್ಯೆ ಎದುರಿಸುತ್ತಿದೆ. ಜಾಗತಿಕ ಆರ್ಥಿಕತೆಗೆ ಹಣದುಬ್ಬರ ಅಡ್ಡಿಯಾಗಿದೆ. ನಾವು ಕೆಲವು ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಏರಿಕೆಯಾಗಿರುವ ದರದಲ್ಲಿಯೇ ಇವುಗಳನ್ನು ಆಮದು ಮಾಡಿಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT