ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಚುನಾವಣೆ ಸೋಲಿನ ವಿಶ್ಲೇಷಣೆ: ಮೋದಿ, ಶಾ ಸದಾ ಗೆಲ್ಲಲಾಗದು

Last Updated 21 ಫೆಬ್ರುವರಿ 2020, 21:52 IST
ಅಕ್ಷರ ಗಾತ್ರ

ನವದೆಹಲಿ: ‘ರಾಜ್ಯಗಳ ಚುನಾವಣೆಯನ್ನು ಗೆಲ್ಲಲುಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರಿಂದಸದಾ ಸಾಧ್ಯವಿಲ್ಲ. ಬದಲಿಗೆ ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರನ್ನುಬೆಳೆಸಿ, ಪಕ್ಷವನ್ನು ಹೊಸದಾಗಿ ಕಟ್ಟಬೇಕು. ಬೇರೆ ಆಯ್ಕೆ ಇಲ್ಲ’ ಎಂದು ಆರ್‌ಎಸ್‌ಎಸ್‌ ಹೇಳಿದೆ.

ಆರ್‌ಎಸ್‌ಎಸ್‌ನ ಇಂಗ್ಲಿಷ್ ಭಾಷೆಯ ಮುಖವಾಣಿ ‘ಆರ್ಗನೈಜರ್‌’ನ ಸಂಪಾದಕೀಯದಲ್ಲಿ ಸಂಘಟನೆಯು, ಬಿಜೆಪಿಗೆ ಈ ಎಚ್ಚರಿಕೆ ನೀಡಿದೆ. ದೆಹಲಿ ಚುನಾವಣೆ ಫಲಿತಾಂಶ ಕುರಿತು ಪ್ರಕಟವಾದ ಸಂಪಾದಕೀಯದಲ್ಲಿ ಈ ಎಚ್ಚರಿಕೆ ಇದೆ.

‘ಅರವಿಂದ ಕೇಜ್ರಿವಾಲ್ ವಿರುದ್ಧ ಮತ್ತು ಅವರ ಸರ್ಕಾರದ ವಿರುದ್ಧವಾದ ಅಲೆ ಇರಲೇ ಇಲ್ಲ. ಉಚಿತ ವಿದ್ಯುತ್, ಉಚಿತ ನೀರಿನಂತಹ ಆಮಿಷವನ್ನು ಎಎಪಿ ನೀಡಿತ್ತು. ಇದಕ್ಕೆ ಪ್ರತಿಯಾಗಿ ಅಕ್ರಮ ಕಾಲೊನಿಗಳನ್ನು ಸಕ್ರಮಗೊಳಿಸಲು ಕೇಂದ್ರ ಸರ್ಕಾರ ಮುಂದಾಯಿತು. ಆದರೂ ಬಿಜೆಪಿ ಈ ಚುನಾವಣೆಯಲ್ಲಿ ಸೋಲು ಅನುಭವಿಸಬೇಕಾಯಿತು’ ಎಂದು ಆರ್‌ಎಸ್‌ಎಸ್ ಹೇಳಿದೆ.

‘ಅತ್ಯುತ್ತಮವಾಗಿ ಹೋರಾಡಿಯೂ ಈ ಯುದ್ಧದಲ್ಲಿ ಬಿಜೆಪಿ ಸೋಲುಕಂಡಿದೆ. 2015ರ ಸೋಲಿನ ನಂತರ ಪಕ್ಷವನ್ನು ತಳಮಟ್ಟದಲ್ಲಿ ಭದ್ರಪಡಿಸಲು ದೊರೆತಿದ್ದ ಅವಕಾಶವನ್ನು ಬಳಸಿಕೊಳ್ಳದೆ, ಯುದ್ಧದ ಸಂದರ್ಭದಲ್ಲಿ ಶಸ್ತ್ರಾಭ್ಯಾಸ ಆರಂಭಿಸಲಾಯಿತು.ಕೊನೆ ಕ್ಷಣದಲ್ಲಿ ಪ್ರಚಾರಕ್ಕೆ ತೊಡಗಿದ್ದೇ ಈ ಸೋಲಿಗೆ ಪ್ರಮುಖ ಕಾರಣ’ ಎಂದು ಸಂಪಾದಕೀಯದಲ್ಲಿ ವಿಶ್ಲೇಷಿಸಲಾಗಿದೆ.

‘ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧದ ಹೋರಾಟ ಮತ್ತು ಮುಸ್ಲಿಂ ಮೂಲಭೂತವಾದವು ಕೇಜ್ರಿವಾಲ್‌ಗೆ ಹೊಸ ಪರೀಕ್ಷೆಗಳನ್ನು ಒಡ್ಡಿದ್ದವು. ಈ ಅಪಾಯವನ್ನು ಕೇಜ್ರಿವಾಲ್ ಹೇಗೆ ಎದುರಿಸಿದರು? ಕೇಜ್ರಿವಾಲ್ ಅವರ ಹನುಮಾನ್ ಚಾಳೀಸ್‌ ಪಠಣ ಎಷ್ಟರಮಟ್ಟಿಗೆ ನಿಜವಾಗಿತ್ತು? ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಲೇ ಈ ಸ್ಥಾನಕ್ಕೆ ಬಂದಿರುವ ಕೇಜ್ರಿವಾಲ್, ಭ್ರಷ್ಟಾಚಾರವನ್ನು ಹತ್ತಿಕ್ಕಿದ್ದಾರೆಯೇ? ಈ ಪ್ರಶ್ನೆಗಳನ್ನು ದೆಹಲಿ ಜನರು ಕೇಳಬೇಕಿತ್ತು’ ಎಂದು ಸಂಪಾದಕೀಯದಲ್ಲಿ ಹೇಳಲಾಗಿದೆ.

‘ಸ್ಥಳೀಯ ವಿಷಯಗಳ ಆಧಾರದಲ್ಲಿ ಚುನಾವಣೆಯನ್ನು ಎದುರಿಸಬೇಕು. ಸ್ಥಳೀಯ ಮಟ್ಟದಲ್ಲಿ ನಾಯಕರನ್ನು ಬೆಳೆಸಬೇಕು. ಬಿಜೆಪಿಗೆ ಬೇರೆ ದಾರಿ ಇಲ್ಲ. ಇದಂತೂ ಸ್ಪಷ್ಟ’ ಎಂದು ಆರ್‌ಎಸ್‌ಎಸ್ ಹೇಳಿದೆ.

ಲೋಕಸಭೆ ಚುನಾವಣೆ ಬಳಿಕ ಹಿನ್ನಡೆ
ದೆಹಲಿ ಚುನಾವಣಾ ಪ್ರಚಾರವನ್ನು ಬಿಜೆಪಿ ಭರ್ಜರಿಯಾಗಿ ನಡೆಸಿತ್ತು. ಪ್ರಧಾನಿ ನರೇಂದ್ರ ಮೋದಿ ಹಲವು ರ‍್ಯಾಲಿಗಳನ್ನು ನಡೆಸಿದ್ದರು. ಚುನಾವಣಾ ಪ್ರಚಾರದ ಮುಂಚೂಣಿಯಲ್ಲಿದ್ದ ಅಮಿತ್ ಶಾ ಹತ್ತಾರು ರ‍್ಯಾಲಿಗಳನ್ನು ನಡೆಸಿದ್ದರು. ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ಬಿಜೆಪಿಯ 300ಕ್ಕೂ ಹೆಚ್ಚು ಸಂಸದರು ದೆಹಲಿಯಲ್ಲಿ ಪ್ರಚಾರ ನಡೆಸಿದ್ದರು. ಆದರೆ, ಬಿಜೆಪಿ 2015ಕ್ಕಿಂತ ಈ ಬಾರಿ ತನ್ನ ಸ್ಥಾನ ಉತ್ತಮಪಡಿಸಿಕೊಂಡಿತು ಅಷ್ಟೆ.

2019ರ ಲೋಕಸಭಾ ಚುನಾವಣೆಯ ಗೆಲುವಿನ ನಂತರ ಕೆಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆದಿದೆ. ಆದರೆ, ಒಂದರಲ್ಲೂ ಬಿಜೆಪಿ ಸರಳ ಬಹುಮತ ಪಡೆದಿಲ್ಲ.

ಅತಿಹೆಚ್ಚು ಸ್ಥಾನಗಳನ್ನು ಪಡೆದ ಪಕ್ಷವಾದರೂ, ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವಲ್ಲಿ ಬಿಜೆಪಿ ವಿಫಲವಾಯಿತು. ಹರಿಯಾಣದಲ್ಲಿ ಪ್ರಾದೇಶಿಕ ಪಕ್ಷದೊಂದಿಗೆ ಚುನಾವಣೋತ್ತರ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿತು. ಜಾರ್ಖಂಡ್ ಚುನಾವಣೆಯಲ್ಲಿ ಜೆಎಂಎಂ–ಕಾಂಗ್ರೆಸ್‌ ಮೈತ್ರಿಕೂಟದ ಎದುರು ಸೋಲು ಕಂಡಿತು.

*
ನೆಪ ಮಾತ್ರಕ್ಕೆ ಸ್ಪರ್ಧಿಸುವ ಮೂಲಕ ಕಾಂಗ್ರೆಸ್‌ ತನ್ನ ಮತಗಳನ್ನು ಎಎಪಿಗೆ ವರ್ಗಾಯಿಸಿತು ಎಂಬ ಮಾತಿದೆ. ಇದು ಸ್ವಲ್ಪಮಟ್ಟಿಗೆ ನಿಜವೂ ಹೌದು.
–ಪ್ರಫುಲ್ಲ, ಆರ್ಗನೈಜರ್ ಸಂಪಾದಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT