ಭಾನುವಾರ, 3 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಜ್ಜಯಿನಿ: ಗಾಳಿಗೆ ಉರುಳಿದ ಸಪ್ತ ಋಷಿ ಮೂರ್ತಿಗಳು; ತನಿಖೆಗೆ ಕಾಂಗ್ರೆಸ್‌ ಪಟ್ಟು

Published 4 ಜೂನ್ 2023, 7:54 IST
Last Updated 4 ಜೂನ್ 2023, 7:54 IST
ಅಕ್ಷರ ಗಾತ್ರ

ಭೂಪಾಲ್‌ : ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದ ‘ಮಹಾಕಾಲ ಲೋಕ ಕಾರಿಡಾರ್‌‘ನಲ್ಲಿ ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಸಪ್ತ ಋಷಿಗಳ ಮೂರ್ತಿಗಳು ಬಿರುಗಾಳಿಗೆ ಮುರಿದು ಬಿದ್ದಿರುವ ಕುರಿತು ನ್ಯಾಯಾಂಗ ತನಿಖೆ ನಡೆಸುವಂತೆ ಕೋರಿ ಮಧ್ಯಪ್ರದೇಶ ಕಾಂಗ್ರೆಸ್‌ ಹೈಕೋರ್ಟ್‌ ಮೆಟ್ಟಿಲೇರಲಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಮೇ 28ರಂದು ಮಧ್ಯಪ್ರದೇಶದಲ್ಲಿ ಗಾಳಿ–ಮಳೆಯಾಗಿದ್ದು, ಬಿರುಗಾಳಿಗೆ ಕಾರಿಡಾರ್‌ನಲ್ಲಿದ್ದ ಆರು ಮೂರ್ತಿಗಳು ಉರುಳಿ ಬಿದ್ದಿದ್ದವು. ಬಹುಕೋಟಿ ವೆಚ್ಚದಲ್ಲಿ(ಸುಮಾರು ₹856 ಕೋಟಿ) ನಿರ್ಮಿಸಲಾಗಿದ್ದ ಮೂರ್ತಿಗಳು ಕೇವಲ ಒಂದು ಗಾಳಿಗೆ ಮುರಿದು ಬಿದ್ದಿದ್ದರ ಹಿಂದೆ ಭಾರಿ ಭ್ರಷ್ಟಾಚಾರ ಅಡಗಿದೆ ಎಂದು ಪ್ರತಿಪಕ್ಷಗಳು ಟೀಕೆ ಮಾಡಿದ್ದವು.

‘ಕಾರಿಡಾರ್‌ ವಿಷಯಕ್ಕೆ ಸಂಬಂಧಪಟ್ಟಂತೆ ಭ್ರಷ್ಟಾಚಾರದ ಕುರಿತು ನ್ಯಾಯಾಂಗ ತನಿಖೆ ನಡೆಸುವಂತೆ ಕೋರಿ ಹೈಕೋರ್ಟ್‌ಗೆ ಮನವಿ ಸಲ್ಲಿಸಲು ಎಲ್ಲ ತಯಾರಿ ನಡೆಸಿದ್ದೇವೆ. ಹಿರಿಯ ವಕೀಲರೊಬ್ಬರನ್ನು ನೇಮಿಸಲಾಗಿದೆ. ಅಂದುಕೊಂಡಂತೆ ನಡೆದರೆ ಮುಂದಿನ ವಾರವೇ ದೂರು ಸಲ್ಲಿಸಲಾಗುವುದು. ಘಟನೆಯ ಬಗ್ಗೆ ಹಾಲಿ ನ್ಯಾಯಾಧೀಶರೇ ನ್ಯಾಯಾಂಗ ತನಿಖೆ ನಡೆಸುವಂತೆ ಕೋರಲಾಗುವುದು. ಬಿಜೆಪಿಯವರು ದೇವರನ್ನು ಕೂಡ ಬಿಡುವುದಿಲ್ಲ‘ ಎಂದು ಮಧ್ಯಪ್ರದೇಶದ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ಕಾಂಗ್ರೆಸ್ ಮಾಡಿರುವ ಆಪಾದನೆಯನ್ನು ತಳ್ಳಿ ಹಾಕಿರುವ ಮಧ್ಯಪ್ರದೇಶ ಬಿಜೆಪಿ ನಾಯಕರು, ಮೂರ್ತಿಗಳು ಮುರಿದು ಬೀಳಲು ಗಾಳಿ ಕಾರಣವೇ ವಿನಃ ಭ್ರಷ್ಟಾಚಾರವಲ್ಲ ಎಂದು ಹೇಳಿದ್ದಾರೆ.

ಘಟನೆ ಕುರಿತಂತೆ ಮಧ್ಯಪ್ರದೇಶ ಲೋಕಾಯುಕ್ತವು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಲೋಕಾಯುಕ್ತದ ತಾಂತ್ರಿಕ ತಂಡ ತನಿಖೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT