ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಬೈ ಹಿಟ್ ಅಂಡ್ ರನ್ ಕೇಸ್: ಶಿವಸೇನಾ ನಾಯಕ ರಾಜೇಶ್‌ಗೆ 14 ದಿನ ನ್ಯಾಯಾಂಗ ಬಂಧನ

Published 8 ಜುಲೈ 2024, 12:27 IST
Last Updated 8 ಜುಲೈ 2024, 12:27 IST
ಅಕ್ಷರ ಗಾತ್ರ

ಮುಂಬೈ: ನಗರದಲ್ಲಿ ಸಂಭವಿಸಿದ್ದ ಬಿಎಂಡಬ್ಲ್ಯು ಕಾರು ಅಪಘಾತ ಪ್ರಕರಣ ಸಂಬಂಧ ಶಿವಸೇನಾ ನಾಯಕ ರಾಜೇಶ್ ಶಾ ಅವರನ್ನು ಮುಂಬೈ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಪ್ರಕರಣದ ಮತ್ತೊರ್ವ ಆರೋಪಿ ರಾಜೇಂದ್ರ ಸಿಂಗ್ ಬಿಡಾವತ್ 1 ದಿನ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಮುಂಬೈನ ವರ್ಲಿಯ ಕೋಳಿವಾಡ ನಿವಾಸಿ ಕಾವೇರಿ ನಖವಾ (45) ಅವರು ತಮ್ಮ ಪತಿ ಪ್ರದೀಕ್‌ ನಖವಾ (50) ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ಅನ್ನಿ ಬೆಸೆಂಟ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಮಿಹಿರ್ ಶಾ ಚಲಾಯಿಸುತ್ತಿದ್ದ ಐಷಾರಾಮಿ ಕಾರು ಡಿಕ್ಕಿ ಹೊಡೆದಿತ್ತು. ಭಾನುವಾರ ಬೆಳಿಗ್ಗೆ 5.30ರ ಸುಮಾರಿಗೆ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಕಾವೇರಿ ನಖವಾ ಮೃತಪಟ್ಟಿದ್ದರು.

ಅಪಘಾತದ ನಂತರ ಮಿಹಿರ್ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಆರೋಪದ ಮೇಲೆ ಮಿಹಿರ್ ತಂದೆ ರಾಜೇಶ್ ಶಾ ಮತ್ತು ಅವರ ಚಾಲಕ ರಾಜೇಂದ್ರ ಸಿಂಗ್ ಬಿಡಾವತ್ ಅವರನ್ನು ಪೊಲೀಸರು ಬಂಧಿಸಿದ್ದರು.

‘ಜುಹುವಿನ ಬಾರ್‌ವೊಂದರಲ್ಲಿ ಗೆಳೆಯರ ಜತೆ ಮದ್ಯ ಕುಡಿದಿದ್ದ ಮಿಹಿರ್ ಅವರು ಕಾರಿನಲ್ಲಿ ಮನೆಯತ್ತ ಹೊರಟಿದ್ದರು. ತಾನೇ ಚಾಲನೆ ಮಾಡುತ್ತೇನೆ ಎಂದು ಮಿಹಿರ್‌ ಅವರು ಚಾಲಕನಿಗೆ ಹೇಳಿ ಕಾರು ಚಲಾಯಿಸಿದ್ದಾರೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಈ ಕಾರು ರಾಜೇಶ್ ಶಾ ಅವರ ಒಡೆತನದಲ್ಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಮಿಹಿರ್ ಶಾ ದೇಶದಿಂದ ಪಲಾಯನ ಮಾಡುವ ಸಾಧ್ಯತೆ ಇರುವುದರಿಂದ, ಮುಂಬೈ ಪೊಲೀಸರು ಆತನ ವಿರುದ್ಧ ಲುಕ್ ಔಟ್ ನೋಟಿಸ್‌ ಹೊರಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT