ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಬೈಯಲ್ಲಿ ಹಿಟ್ ಅಂಡ್ ರನ್ ಪ್ರಕರಣ: ಬೈಕ್‌ಗೆ BMW ಕಾರು ಡಿಕ್ಕಿ, ಮಹಿಳೆ ಸಾವು

ಶಿವಸೇನಾ ಮುಖಂಡನ ಪುತ್ರ ಚಾಲನೆ ಮಾಡುತ್ತಿದ್ದ ಐಷಾರಾಮಿ ವಾಹನ
Published 7 ಜುಲೈ 2024, 10:42 IST
Last Updated 7 ಜುಲೈ 2024, 10:42 IST
ಅಕ್ಷರ ಗಾತ್ರ

ಮುಂಬೈ: ಶಿವಸೇನಾ ಪಕ್ಷದ ಸ್ಥಳೀಯ ಮುಖಂಡನ ಪುತ್ರ ಚಾಲನೆ ಮಾಡುತ್ತಿದ್ದ ಐಷಾರಾಮಿ ಬಿಎಂಡಬ್ಲ್ಯು ಕಾರು ಇಲ್ಲಿನ ವರ್ಲಿ ಪ್ರದೇಶದಲ್ಲಿ ಭಾನುವಾರ ಬೆಳಿಗ್ಗೆ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಮಹಿಳೆ ಸಾವನಪ್ಪಿದ್ದು, ಆಕೆಯ ಪತಿ ಗಾಯಗೊಂಡಿದ್ದಾರೆ.

ಮೃತರನ್ನು ವರ್ಲಿ ನಿವಾಸಿ ಕಾವೇರಿ ನಖವಾ (45) ಎಂದು ಗುರುತಿಸಲಾಗಿದ್ದು, ಅವರ ಪತಿ ಪ್ರದೀಕ್‌ ನಖವಾ (50) ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಈ ಘಟನೆಯು ಮಹಾರಾಷ್ಟ್ರದಲ್ಲಿ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.

ಮದ್ಯ ಕುಡಿದು ಕಾರು ಚಾಲನೆ ಮಾಡಿದ್ದು ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಇಂತಹದೇ ಘಟನೆಗಳು ಈ ಹಿಂದೆ ಪುಣೆ ಮತ್ತು ನಾಗ್ಪುರದಲ್ಲಿ ನಡೆದಿದ್ದವು. 

ಏಟ್ರಿಯಾ ಮಾಲ್‌ ಮತ್ತು ವರ್ಲಿ ನಡುವೆ ಮುಂಬೈ ಕೋಸ್ಟಲ್‌ ರಸ್ತೆಯಲ್ಲಿ ಬೆಳಿಗ್ಗೆ 5.30ಕ್ಕೆ ಅಪಘಾತ ಸಂಭವಿಸಿದೆ. ದಂಪತಿಯು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಕೊಲಾಬಾದ ಸಸೂನ್‌ ಧಕ್ಕೆಯಿಂದ ಮೀನು ಖರೀದಿಸಿ ವಾಪಸಾಗುತ್ತಿದ್ದರು. ಡಿಕ್ಕಿಯ ರಭಸಕ್ಕೆ ಕಾರು, ಮಹಿಳೆಯನ್ನು ಸುಮಾರು 100 ಮೀ. ದೂರದವರೆಗೆ ಎಳೆದೊಯ್ದಿದೆ.  

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಬಣದ ನಾಯಕ ರಾಜೇಶ್‌ ಶಾ ಅವರ ಪುತ್ರ ಮಿಹಿರ್‌ ಶಾ ಕಾರು ಚಾಲನೆ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ರಾಜೇಶ್‌ ಅವರು ಶಿವಸೇನಾದ ಪಾಲ್ಗರ್‌ ಜಿಲ್ಲಾ ಘಟಕದ ಉಪಾಧ್ಯಕ್ಷ. 

ಘಟನೆಯ ಬಳಿಕ ಮಿಹಿರ್‌ (24 ವರ್ಷ) ತಲೆಮರೆಸಿಕೊಂಡಿದ್ದಾರೆ. ವಿರೋಧ ಪಕ್ಷಗಳ ಮೈತ್ರಿಕೂಟ ಮಹಾ ವಿಕಾಸ್‌ ಆಘಾಡಿ ಮುಖಂಡರು ಸರ್ಕಾರವನ್ನು ಟೀಕಿಸಿದ್ದು, ಆರೋಪಿಗಳ ಶೀಘ್ರ ಬಂಧನಕ್ಕೆ ಆಗ್ರಹಿಸಿದ್ದಾರೆ. ಈಗ ನಡೆಯುತ್ತಿರುವ ಮಹಾರಾಷ್ಟ್ರ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಈ ಪ್ರಕರಣ ಪ್ರತಿಧ್ವನಿಸುವ ಸಾಧ್ಯತೆಯಿದೆ. 

ರಾಜೇಶ್‌ ಶಾ ಮತ್ತು ಅವರ ಚಾಲಕ ರಾಜೇಂದ್ರ ಸಿಂಗ್ ಬಿಡವೆ ಅವರನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ. ‘ಘಟನೆ ಸಂಬಂಧ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದು, ತನಿಖೆ ಪ್ರಗತಿಯಲ್ಲಿದೆ’ ಎಂದು ಡಿಸಿಪಿ ಕೃಷ್ಣಕಾಂತ್‌ ಉಪಾಧ್ಯಾಯ ತಿಳಿಸಿದ್ದಾರೆ. 

‘ಜುಹುವಿನ ಬಾರ್‌ವೊಂದರಲ್ಲಿ ಗೆಳೆಯರ ಜತೆ ಮದ್ಯ ಕುಡಿದಿದ್ದ ಮಿಹಿರ್ ಅವರು ಕಾರಿನಲ್ಲಿ ಮನೆಯತ್ತ ಹೊರಟಿದ್ದರು. ತಾನೇ ಚಾಲನೆ ಮಾಡುತ್ತೇನೆ ಎಂದು ಮಿಹಿರ್‌ ಅವರು ಚಾಲಕನಿಗೆ ಹೇಳಿ ಕಾರು ಚಲಾಯಿಸಿದ್ದಾರೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. 

ಈ ಅಪಘಾತವು ಪೋಶೆ ಕಾರು ಅಪಘಾತ ಘಟನೆಯನ್ನು ನೆನಪಿಸಿದೆ. ಮೇ 19ರಂದು ಪುಣೆಯ ಕಲ್ಯಾಣಿ ನಗರದಲ್ಲಿ ಪಾನಮತ್ತ ಬಾಲಕನು ಚಲಾಯಿಸುತ್ತಿದ್ದ ಪೋಶೆ ಕಾರು ಡಿಕ್ಕಿಹೊಡೆದು ಮಧ್ಯಪ್ರದೇಶದ ಇಬ್ಬರು ಟೆಕಿಗಳು ಮೃತಪಟ್ಟಿದ್ದರು.

ಕಾಂಗ್ರೆಸ್‌ನ ಮುಂಬೈ ಘಟಕದ ಅಧ್ಯಕ್ಷೆ, ಸಂಸದರೂ ಆಗಿರುವ ವರ್ಷಾ ಗಾಯಕ್ವಾಡ್‌, ‘ಅಮಾಯಕರೊಬ್ಬರು ಜೀವ ಕಳೆದುಕೊಂಡಿದ್ದಾರೆ. ಇದು ದುಃಖದ ಸಂಗತಿ. ಈ ಘಟನೆಯನ್ನು ರಾಜಕೀಯಗೊಳಿಸಲು ಬಯಸುವುದಿಲ್ಲ. ಆದರೆ ಸರ್ಕಾರವು ಈ ಪ್ರಕರಣದಲ್ಲಿ ತ್ವರಿತ ನ್ಯಾಯವನ್ನು ಖಾತರಿಪಡಿಸಬೇಕು. ಆರೋಪಿಯನ್ನು ಕೂಡಲೇ ಬಂಧಿಸಬೇಕು. ಕಳೆದೆರಡು ತಿಂಗಳಲ್ಲಿ ಮಹಾರಾಷ್ಟ್ರದಲ್ಲಿ ಇಂತಹ ಮೂರು ಘಟನೆಗಳು ನಡೆದಿವೆ. ಅಜಾಗರೂಕ ಮತ್ತು ಮಿತಿಮೀರಿದ ವೇಗದ ಚಾಲನೆ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ’ ಎಂದಿದ್ದಾರೆ. 

ನಿಷ್ಪಕ್ಷಪಾತ ತನಿಖೆ: ಶಿಂದೆ ಕಾರು ಅಪಘಾತದ ಬಗ್ಗೆ ಸಮಗ್ರ ತನಿಖೆ ನಡೆಸುವ ಭರವಸೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ನೀಡಿದ್ದಾರೆ. 

‘ನಡೆದಿರುವ ಘಟನೆ ತೀರಾ ದುರದೃಷ್ಟಕರ. ಕಾನೂನಿನಡಿ ಎಲ್ಲರೂ ಸಮಾನರು. ಅಪಘಾತದ ಬಗ್ಗೆ ಪೊಲೀಸರ ಜತೆ ಮಾತನಾಡಿದ್ದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ. 

ಶಿವಸೇನಾ (ಯುಬಿಟಿ) ಬಣದ ನಾಯಕರೂ ಆಗಿರುವ ವರ್ಲಿ ಕ್ಷೇತ್ರದ ಶಾಸಕ ಆದಿತ್ಯ ಠಾಕ್ರೆ ಅವರು ಆರೋಪಿಗಳ ವಿರುದ್ಧ ಶೀಘ್ರ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ‘ಹಿಟ್‌ ಆ್ಯಂಡ್‌ ರನ್ ಪ್ರಕರಣದ ಆರೋಪಿಯನ್ನು ಪೊಲೀಸರು ಶೀಘ್ರ ಬಂಧಿಸುತ್ತಾರೆ ಎಂದು ಭಾವಿಸಿದ್ದೇನೆ. ಸರ್ಕಾರವು ಆರೋಪಿಗಳಿಗೆ ರಕ್ಷಣೆ ನೀಡುವುದಿಲ್ಲ ಎಂಬ ಭರವಸೆ ಇದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT