ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಾಜಿ ಪ್ರತಿಮೆ ಕುಸಿತ: ಎಂವಿಎ ಶಕ್ತಿ ಪ್ರದರ್ಶನ, ಬಿಜೆಪಿ ಪ್ರತಿಭಟನೆ

ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿದ ವಿಚಾರವೇ ‘ಅಸ್ತ್ರ’
Published 1 ಸೆಪ್ಟೆಂಬರ್ 2024, 15:08 IST
Last Updated 1 ಸೆಪ್ಟೆಂಬರ್ 2024, 15:08 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ರಾಜ್‌ಕೋಟ್‌ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿದು ಬಿದ್ದ ವಿಚಾರ ಮುಂದಿಟ್ಟುಕೊಂಡು ವಿಪಕ್ಷ ಒಕ್ಕೂಟ ಮಹಾ ವಿಕಾಸ ಅಘಾಡಿ (ಎಂವಿಎ) ಮುಂಬೈನಲ್ಲಿ ಭಾನುವಾರ ಬೃಹತ್‌ ಪ್ರತಿಭಟನೆ ನಡೆಸಿತು.

‘ಪ್ರತಿಮೆ ಕುಸಿದು ಬಿದ್ದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕ್ಷಮೆ ಯಾಚಿಸಿದ್ದನ್ನು ತಿರಸ್ಕರಿಸುತ್ತೇವೆ’ ಎಂದ ಎಂವಿಎ ನಾಯಕರು, ಆಡಳಿತಾರೂಢ ‘ಮಹಾ ಯುತಿ’ ನಾಯಕರ ಭಾವಚಿತ್ರಗಳಿದ್ದ ಪೋಸ್ಟರ್‌ಗೆ ‘ಚಪ್ಪಲಿಯಿಂದ ಹೊಡೆದು (ಜೋಡೆ ಮಾರಾ) ಪ್ರತಿಭಟನೆ’ ನಡೆಸಿದರು.

ಇನ್ನೊಂದೆಡೆ, ಪ್ರತಿಮೆ ಕುಸಿದು ಬಿದ್ದ ವಿಚಾರವಾಗಿ ಮಹಾ ವಿಕಾಸ ಅಘಾಡಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿ, ರಾಜ್ಯದಾದ್ಯಂತ ಬಿಜೆಪಿ ವತಿಯಿಂದಲೂ ಪ್ರತಿಭಟನೆ ನಡೆಯಿತು.

ಇದರೊಂದಿಗೆ, ಛತ್ರಪತಿ ಶಿವಾಜಿ ಮಹಾರಾಜ ಪ್ರತಿಮೆ ಕುಸಿದು ಬಿದ್ದಿರುವ ವಿಚಾರವು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ವಿಷಯವಾಗಲಿದೆ ಎಂಬ ಮುನ್ಸೂಚನೆಯನ್ನು ಭಾನುವಾರ ನಡೆದ ಪ್ರತಿಭಟನೆಗಳು ನೀಡಿವೆ.

‘ಸಂಯುಕ್ತ ಮಹಾರಾಷ್ಟ್ರ’ ಹೋರಾಟದಲ್ಲಿ ಹುತಾತ್ಮರಾದವರ ನೆನಪಿಗಾಗಿ ಹುತಾತ್ಮ ಚೌಕದಲ್ಲಿ ನಿರ್ಮಿಸಿರುವ ಸ್ಮಾರಕಕ್ಕೆ ಎಂವಿಎ ನಾಯಕರು ಪುಷ್ಪನಮನ ಸಲ್ಲಿಸಿ, ಪ್ರತಿಭಟನಾ ಮೆರವಣಿಗೆ ಆರಂಭಿಸಿದರು.

ಗೇಟ್‌ವೇ ಆಫ್‌ ಇಂಡಿಯಾ ಬಳಿಯ ‘ಹಿಂದೂ ಹೃದಯ ಸಾಮ್ರಾಟ ಬಾಳಾ ಸಾಹೇಬ ಠಾಕ್ರೆ’ ಚೌಕದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ ಪ್ರತಿಮೆ ಹತ್ತಿರ ಪ್ರತಿಭಟನಾ ಮೆರವಣಿಗೆ ಅಂತ್ಯಗೊಂಡಿತು.

ಈ ವೇಳೆ, ಪೋಸ್ಟರ್‌ನಲ್ಲಿದ್ದ ಮುಖ್ಯಮಂತ್ರಿ ಏಕನಾಥ ಶಿಂದೆ, ಉಪಮುಖ್ಯಮಂತ್ರಿಗಳಾದ ದೇವೇಂದ್ರ ಫಡಣವೀಸ್‌ ಮತ್ತು ಅಜಿತ್‌ ಪವಾರ್‌ ಅವರ ಭಾವಚಿತ್ರಗಳಿಗೆ ಎಂವಿಎ ಕಾರ್ಯಕರ್ತರು ಶೂಗಳಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು. ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ ಕೂಡ, ಶಿಂದೆ ಭಾವಚಿತ್ರಕ್ಕೆ ಶೂನಿಂದ ಹೊಡೆದರು.

ಪ್ರತಿಭಟನಕಾರರನ್ನು ಉದ್ಧೇಶಿಸಿ ಮಾತನಾಡಿದ ಉದ್ಧವ್‌ ಠಾಕ್ರೆ, ‘ಶಿವಾಜಿ ಮಹರಾಜರ ವಿರೋಧಿಗಳು ಈ ದಿನ ಎಂವಿಎ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಅವರು ತಮ್ಮ ಕೆಲಸ ಮಾಡಲಿ. ಆದರೆ, ನೀವು ಭಾರತ ಬಿಟ್ಟು ತೊಲಗಿ (ಗೆಟ್‌ ಔಟ್‌ ಆಫ್‌ ಇಂಡಿಯಾ) ಎಂಬುದಾಗಿ ಗೇಟ್‌ ವೇ ಆಫ್‌ ಇಂಡಿಯಾದಿಂದ ನಾವು ಹೇಳಲು ಬಯಸುತ್ತೇವೆ’ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

‘ಶಿವಾಜಿ ಮಹಾರಾಜರಿಗೆ ಅವಮಾನ ಆಗಿರುವುದನ್ನು ಮಹಾರಾಷ್ಟ್ರ ಜನರು ಎಂದಿಗೂ ಕ್ಷಮಿಸುವುದಿಲ್ಲ’ ಎಂದ ಠಾಕ್ರೆ, ‘ಯಾವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಕ್ಷಮೆ ಯಾಚಿಸಿದ್ದಾರೆ’ ಎಂದು ಪ್ರಶ್ನಿಸಿದರು.

‘ಎಂಟು ತಿಂಗಳ ಹಿಂದೆಯಷ್ಟೆ ಉದ್ಘಾಟಿಸಿದ್ದ ಪ್ರತಿಮೆ ಕುಸಿದಿದ್ದಕ್ಕಾಗಿಯೇ ಅಥವಾ ರಾಮ ಮಂದಿರ ಮತ್ತು ನೂತನ ಸಂಸತ್‌ ಭವನದಲ್ಲಿನ ಸೋರಿಕೆಗೆ ಕ್ಷಮೆ ಕೇಳುತ್ತಿದ್ದೀರಾ? ಎಂದ ಠಾಕ್ರೆ, ‘ಶಿವಾಜಿ ಮಹಾರಾಜರನ್ನು ಅವಮಾನಿಸಿರುವ ಶಕ್ತಿಗಳನ್ನು ಸೋಲಿಸಲು ಎಂವಿಎ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಬೇಕು’ ಎಂದರು.

ಎನ್‌ಸಿಪಿ (ಶರದ್‌ ಪವಾರ್‌ ಬಣ) ವರಿಷ್ಠ ಶರದ್‌ ಪವಾರ್‌, ‘ರಾಜ್‌ಕೋಟ್‌ ಕೋಟೆಯಲ್ಲಿ ಪ್ರತಿಮೆ ಕುಸಿದು ಬಿದ್ದಿರುವುದು ಈ ರಾಜ್ಯದಲ್ಲಿನ ಭ್ರಷ್ಟಾಚಾರಕ್ಕೆ ನಿದರ್ಶನ’ ಎಂದು ಟೀಕಿಸಿದರು.

‘ಶಿವಾಜಿ ಮಹಾರಾಜರ ಪ್ರತಿಮೆ ಜೋರಾಗಿ ಬೀಸಿದ ಗಾಳಿಯಿಂದಾಗಿ ಕುಸಿದಿದೆ ಎಂದು ಮುಖ್ಯಮಂತ್ರಿ ಏಕನಾಥ ಶಿಂದೆ ಹೇಳಿದ್ದಾರೆ. ಗೇಟ್‌ ವೇ ಆಫ್‌ ಇಂಡಿಯಾ ಎದುರು ಹಲವು ವರ್ಷಗಳಿಂದ ಪ್ರತಿಮೆ ಇದೆ. ರಾಜ್ಯದ ಹಲವೆಡೆಯ ಪ್ರತಿಮೆಗಳು ಈಗಲೂ ಸದೃಢವಾಗಿವೆ’ ಎಂದರು.

ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ರಾಜ್‌ಕೋಟ್‌ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿದು ಬಿದ್ದದ್ದನ್ನು ಖಂಡಿಸಿ ಮಹಾ ವಿಕಾಸ್‌ ಅಗಾಢಿ (ಎಂವಿಎ) ವತಿಯಿಂದ ಮುಂಬೈನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರು ಮುಖ್ಯಮಂತ್ರಿ ಏಕನಾಥ ಶಿಂದೆ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದರು

ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ರಾಜ್‌ಕೋಟ್‌ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿದು ಬಿದ್ದದ್ದನ್ನು ಖಂಡಿಸಿ ಮಹಾ ವಿಕಾಸ್‌ ಅಗಾಢಿ (ಎಂವಿಎ) ವತಿಯಿಂದ ಮುಂಬೈನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ ಅವರು ಮುಖ್ಯಮಂತ್ರಿ ಏಕನಾಥ ಶಿಂದೆ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದರು 

ಪಿಟಿಐ ಚಿತ್ರ  

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಮಾತ್ರ ಪ್ರಧಾನಿಯವರು ಕ್ಷಮೆ ಕೇಳಿದ್ದಾರೆ
ನಾನಾ ಪಟೋಲೆ ಕಾಂಗ್ರೆಸ್‌ನ ಮಹಾರಾಷ್ಟ್ರ ಘಟಕದ ಅಧ್ಯಕ್ಷ
ಪ್ರಧಾನಿ ನರೇಂದ್ರ ಮೋದಿ ಕ್ಷಮೆ ಕೇಳಿದ್ದಾರೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಾಗ ಎಂವಿಎ ಮುಖಂಡರು ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ
ಚಂದ್ರಶೇಖರ ಬವಾಂಕುಲೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ಮಹಾರಾಷ್ಟ್ರ ಜನರು ಬುದ್ಧಿವಂತರಿದ್ದು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಬರುವ ಚುನಾವಣೆಗಳಲ್ಲಿ ವಿಪಕ್ಷಗಳಿಗೆ ಜನರು ಶೂಗಳಿಂದ ಹೊಡೆಯುತ್ತಾರೆ
ಏಕನಾಥ ಶಿಂದೆ ಮುಖ್ಯಮಂತ್ರಿ

ಶಿವಾಜಿ ಹೆಸರು ಹೇಳುವುದು ಔರಂಗಜೇಬ್‌ ಕೃತ್ಯಗಳ ಅನುಕರಣೆ: ಶಿಂದೆ

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ವಿರುದ್ಧ ಭಾನುವಾರ ಟೀಕಾ ಪ್ರಹಾರ ನಡೆಸಿದ್ದಾರೆ. ‘ಛತ್ರಪತ್ರಿ ಶಿವಾಜಿ ಮಹಾರಾಜರ ಹೆಸರಿನಲ್ಲಿ ರಾಜಕಾರಣ ಮಾಡುವ ಉದ್ಧವ್‌ ಠಾಕ್ರೆ ಔರಂಗಜೇಬ್‌ ಮತ್ತು ಅಫ್ಜಲ್‌ ಖಾನ್‌ ಕೃತ್ಯಗಳನ್ನು ಅನುಕರಣೆ ಮಾಡುತ್ತಿದ್ದಾರೆ’ ಎಂದು ಶಿಂದೆ ಟೀಕಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಅವರ ಸ್ಥಾನ ಏನು ಎಂಬುದನ್ನು ರಾಜ್ಯದ ಜನರು ಎರಡು ವರ್ಷಗಳ ಹಿಂದೆಯೇ ತೋರಿಸಿದ್ದಾರೆ. ಈಗ ವಿಪಕ್ಷಗಳಿಗೆ ಮಹಾರಾಷ್ಟ್ರ ಜನರು ಮತ್ತೊಮ್ಮೆ ಪಾಠ ಕಲಿಸಲಿದ್ದಾರೆ’ ಎಂದರು. ‘ನೆರೆಯ ಕರ್ನಾಟಕದಲ್ಲಿ ಎರಡು ಜೆಸಿಬಿಗಳನ್ನು ಬಳಸಿ ಛತ್ರಪತಿ ಶಿವಾಜಿ ಮಹಾಜರಾಜರ ಪ್ರತಿಮೆಯನ್ನು ತೆರವು ಮಾಡಲಾಗಿದೆ’ ಎಂದರು. ‘ದುರದೃಷ್ಟಕರ’: ಶಿವಾಜಿ ಮಹಾರಾಜರ ಪ್ರತಿಮೆ ಕುಸಿದಿರುವುದನ್ನು ಮುಂದಿಟ್ಟುಕೊಂಡು ಎಂವಿಎ ರಾಜಕೀಯ ಮಾಡುತ್ತಿರುವುದು ದುರದೃಷ್ಟಕರ ಎಂದು ಎನ್‌ಸಿಪಿ–ಅಜಿತ್‌ ಪವಾರ್‌ ಬಣ ಹೇಳಿದೆ. ‘ಈ ವಿಚಾರವಾಗಿ ಪ್ರಧಾನಿ ಮೋದಿ ಮುಖ್ಯಮಂತ್ರಿ ಶಿಂದೆ ಇಬ್ಬರು ಉಪಮುಖ್ಯಮಂತ್ರಿಗಳು ಕ್ಷಮೆ ಯಾಚಿಸಿದ್ದಾರೆ. ಈ ಕುರಿತು ರಾಜಕೀಯ ಮಾಡುವುದು ಸರಿಯಲ್ಲ’ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸುನಿಲ್‌ ತತ್ಕರೆ ಹೇಳಿದ್ದಾರೆ.

ನೆಹರೂ ಲೇಖನ ಉಲ್ಲೇಖ: ಕಾಂಗ್ರೆಸ್‌ ಕ್ಷಮೆ ಯಾಚಿಸುವುದೇ?–ಬಿಜೆಪಿ

‘ಛತ್ರಪತಿ ಶಿವಾಜಿ ಮಹಾರಾಜ್‌ ಸೂರತ್‌ ನಗರ ಲೂಟಿ ಮಾಡಿದ್ದರು ಎಂಬುದಾಗಿ ಪಂಡಿತ ಜವಾಹರಲಾಲ್‌ ನೆಹರೂ ಅವರು ತಮ್ಮ ‘ದಿ ಡಿಸ್ಕವರಿ ಆಫ್‌ ಇಂಡಿಯಾ’ ಕೃತಿಯಲ್ಲಿ ಬರೆದಿದ್ದಾರೆ. ಇದಕ್ಕಾಗಿ ಕಾಂಗ್ರೆಸ್‌ ಪಕ್ಷ ಕ್ಷಮೆ ಕೇಳುವುದೇ’ ಎಂದು ಬಿಜೆಪಿ ಭಾನುವಾರ ಪ್ರಶ್ನಿಸಿದೆ. ‘ನೆಹರೂ ಅವರು ತಮ್ಮ ಕೃತಿಯಲ್ಲಿ ಶಿವಾಜಿ ಮಹಾರಾಜರನ್ನು ಅವಮಾನಿಸಿದ್ದಾರೆ. ಸ್ವಾತಂತ್ರ್ಯಾನಂತರವೂ ಶಿವಾಜಿ ಮಹಾರಾಜರು ಸೂರತ್‌ ನಗರ ಲೂಟಿ ಮಾಡಿದ್ದಾಗಿ ಕಾಂಗ್ರೆಸ್‌ ನಮಗೆ ಬೋಧಿಸಿದೆ. ಆದರೆ ಅವರು ಎಂದಿಗೂ ಸೂರತ್‌ ಲೂಟಿ ಮಾಡಿಲ್ಲ. ಸೂರತ್‌ ನಿವಾಸಿಗಳು ತಮ್ಮ ನಗರದಲ್ಲಿ ಶಿವಾಜಿ ಮಹಾರಾಜರ ಬೃಹತ್‌ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದಾರೆ. ಈ ಕುರಿತು ಕಾಂಗ್ರೆಸ್‌ ಕ್ಷಮೆ ಕೇಳುವುದೇ’ ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಪ್ರಶ್ನಿಸಿದ್ದಾರೆ. ಕಾಂಗ್ರೆಸ್‌ ತಿರುಗೇಟು: ಶಿವಾಜಿ ಮಹಾರಾಜರ ವಿಚಾರವಾಗಿ ಜವಾಹರಲಾಲ್‌ ನೆಹರೂ ಅವರ ಕೃತಿಯನ್ನು ಉಲ್ಲೇಖಿಸಿರುವುದಕ್ಕೆ ಕಿಡಿ ಕಾರಿರುವ ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಸೇರಿದಂತೆ ಬಿಜೆಪಿ ನಾಯಕರು ಸುಳ್ಳು ಸಂಕಥನಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ‘ನೆಹರೂ ಅವರು ತಮ್ಮ ಕೃತಿಯ ಮೊದಲ ಮುದ್ರಣವನ್ನು ಪರಿಷ್ಕರಣೆ ಮಾಡಿದ್ದರು. ಕೃತಿಯ ಪರಿಷ್ಕರಣೆಗೆ ಅಗತ್ಯವಿರುವ ಮಾಹಿತಿ ಒದಗಿಸುವಂತೆ 1936ರಲ್ಲಿ ನೆಹರೂ ಅವರು ಇತಿಹಾಸಕಾರರಿಗೆ ಪತ್ರ ಬರೆದಿದ್ದರು’ ಎಂದು ಖೇರಾ ಹೇಳಿದ್ದಾರೆ. ‘ನೆಹರೂ ದೊಡ್ಡ ವಿದ್ವಾಂಸರಾಗಿದ್ದರು. ತಮ್ಮ ಪುಸ್ತಕವನ್ನು ಜೈಲಿನಲ್ಲಿದ್ದಾಗ ಬರೆದಿದ್ದರು. ಆಗ ಕೆಲ ವಿಷಯಗಳ ಕುರಿತ ಆಕರ ಗ್ರಂಥಗಳು ಲಭ್ಯ ಇದ್ದಿರಲಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದರು ’ ಎಂದಿದ್ದಾರೆ. ‘ಛತ್ರಪತಿ ಶಿವಾಜಿ ಮಹಾರಾಜರನ್ನು ಸೋಲಿಸಲು ಮೊಘಲರಿಗೆ ಸಾಧ್ಯವಾಗಿರಲಿಲ್ಲ. ಮೊಘಲರಿಗೆ ಮಾಡಲು ಸಾಧ್ಯವಾಗದ್ದನ್ನು ಈ ಭ್ರಷ್ಟ ಸರ್ಕಾರ ಮಾಡಿದೆ’ ಎಂದೂ ಅವರು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT