ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶರದ್‌ ಯಾದವ್ ನಿಧನಕ್ಕೆ ಮೋದಿ ಸೇರಿ ರಾಜಕೀಯ ನಾಯಕರ ಶೋಕ: ಒಡನಾಟ ನೆನೆದ ದೇವೇಗೌಡ

Last Updated 13 ಜನವರಿ 2023, 2:31 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರದ ಮಾಜಿ ಸಚಿವ, ಸಂಯುಕ್ತ ಜನತಾದಳದ ಮಾಜಿ ಅಧ್ಯಕ್ಷ ಶರದ್ ಯಾದವ್‌ ಅವರು ಗುರುವಾರ ರಾತ್ರಿ ದೆಹಲಿಯಲ್ಲಿ ಕೊನೆಯುಸಿರೆಳೆದರು.

75 ವರ್ಷ ವಯಸ್ಸಿನ ಅವರು ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಗುರುಗ್ರಾಮದ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಶರದ್‌ ಯಾದವ್‌ ಅವರ ಪುತ್ರಿ ಸುಭಾಷಿಣಿ ಅವರು ರಾತ್ರಿ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ‘ಪಪ್ಪಾ ನಹೀ ರಹೇ’ ಎಂದು ಪೋಸ್ಟ್ ಹಾಕುವ ಮೂಲಕ ತಂದೆಯ ಅಗಲಿಕೆಯನ್ನು ದೃಢಪಡಿಸಿದ್ದಾರೆ.

ಸಮಾಜವಾದಿ ನಾಯಕ ಡಾ. ರಾಮಮನೋಹರ ಲೋಹಿಯಾ ಅವರ ವಿಚಾರಧಾರೆಗಳಿಂದ ಪ್ರಭಾವಿತರಾಗಿದ್ದ ಶರದ್‌ ಯಾದವ್‌ ಅವರ ನಿಧನಕ್ಕೆ ದೇಶದ ರಾಜಕೀಯ ರಂಗದ ಮೇರು ನಾಯಕರು ಕಂಬನಿ ಮಿಡಿದಿದ್ದಾರೆ.

ಶೋಷಿತರ ಪರವಾದ ಧ್ವನಿ:ರಾಷ್ಟ್ರಪತಿ ದ್ರೌಪದಿ ಮುರ್ಮು

‘ಶರದ್ ಯಾದವ್ ಅವರ ನಿಧನದ ಬಗ್ಗೆ ತಿಳಿದು ದುಃಖವಾಗಿದೆ. ಪ್ರಜಾಸತ್ತಾತ್ಮಕ ಮೌಲ್ಯಗಳಿಗಾಗಿ ಹೋರಾಡಿದ ಎಪ್ಪತ್ತರ ದಶಕದ ವಿದ್ಯಾರ್ಥಿ ನಾಯಕ ಶರದ್ ಅವರು ಸಂಸತ್ತಿನಲ್ಲಿ ಶೋಷಿತರ ಪರವಾದ ಧ್ವನಿಯಾಗಿದ್ದರು. ಅವರ ನಿಧನಕ್ಕೆ ಸಂತಾಪಗಳು.

***

ಲೋಹಿಯಾವಾದಿಯೊಂದಿಗಿನ ಸಂವಾದ ಗೌರವಿಸುವೆ: ಮೋದಿ

ಅವರ ನಿಧನದಿಂದ ನೋವಾಗಿದೆ. ತಮ್ಮ ಸುದೀರ್ಘ ಸಾರ್ವಜನಿಕ ಜೀವನದಲ್ಲಿ ಅವರು ಸಂಸತ್‌ ಸದಸ್ಯರಾಗಿ, ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಡಾ. ಲೋಹಿಯಾ ಆದರ್ಶಗಳಿಂದ ಪ್ರೇರಿತರಾಗಿದ್ದ ಅವರ ಮತ್ತು ನನ್ನ ನಡುವಿನ ಮಾತುಕತೆ, ಸಮಾಲೋಚನೆಗಳನ್ನು ಯಾವಾಗಲೂ ಗೌರವಿಸುತ್ತೇನೆ. ಕುಟುಂಬ ಮತ್ತು ಅಭಿಮಾನಿಗಳಿಗೆ ಶರದ್‌ ಯಾದವ್‌ ಅಗಲಿಕೆಯ ನೋವು ಭರಿಸುವ ಶಕ್ತಿ ಸಿಗಲಿ.

***

ನನ್ನ ಬಹುಕಾಲದ ಗೆಳೆಯ: ಎಚ್‌.ಡಿ ದೇವೇಗೌಡ

ನನ್ನ ಬಹುಕಾಲದ ಗೆಳೆಯ ಮತ್ತು ಜನತಾ ಪರಿವಾರದ ಒಡನಾಡಿ ಶರದ್ ಯಾದವ್ ಅವರ ನಿಧನದ ಬಗ್ಗೆ ತಿಳಿದು ತುಂಬಾ ದುಃಖವಾಗಿದೆ. ಅವರ ಆರೋಗ್ಯ ವಿಚಾರಿಸಲು ಕೆಲ ತಿಂಗಳ ಹಿಂದೆ ಅವರನ್ನು ಭೇಟಿಯಾಗಿದ್ದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.

***

ನಿಧನ ಸುದ್ದಿ ಕೇಳಿ ಮನಸ್ಸು ಭಾರವಾಗಿದೆ: ಮಮತಾ ಬ್ಯಾನರ್ಜಿ

ಶರದ್ ಯಾದವ್ ಅವರ ನಿಧನದ ಬಗ್ಗೆ ಕೇಳಿದ ಮೇಲೆ ಮನಸ್ಸು ಭಾರವಾಗಿದೆ. ಒಬ್ಬ ಧೀಮಂತ ರಾಜಕಾರಣಿ ಮತ್ತು ಗೌರವಾನ್ವಿತ ಸಹೋದ್ಯೋಗಿಯೊಬ್ಬರನ್ನು ಕಳೆದುಕೊಂಡಿದ್ದೇವೆ. ಅವರ ಪರಂಪರೆ ಶಾಶ್ವತವಾಗಿರಲಿದೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ ಮತ್ತು ಅನುಯಾಯಿಗಳಿಗೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ನಾನು ಪ್ರಾರ್ಥಿಸುತ್ತೇನೆ.

***

ನಾವೆಲ್ಲರೂ ಲೋಹಿಯವಾದಿಗಳು: ಲಾಲು ಪ್ರಸಾದ್‌ ಯಾದವ್‌

ಶರದ್‌, ದಿವಂಗತ ಮುಲಾಯಂ ಸಿಂಗ್ ಯಾದವ್, ನಿತೀಶ್ ಕುಮಾರ್ ಮತ್ತು ನಾನು ರಾಮ್ ಮನೋಹರ್ ಲೋಹಿಯಾ, ಕರ್ಪೂರಿ ಠಾಕೂರ್ ಅವರಿಂದ ಸಮಾಜವಾದದ ರಾಜಕೀಯವನ್ನು ಕಲಿತಿದ್ದೇವೆ. ಹಲವು ಸಂದರ್ಭಗಳಲ್ಲಿ ಶರದ್ ಯಾದವ್ ಮತ್ತು ನಾನು ಪರಸ್ಪರ ಜಗಳವಾಡಿದ್ದೇವೆ. ಆದರೆ ನಮ್ಮ ಭಿನ್ನಾಭಿಪ್ರಾಯಗಳು ಎಂದಿಗೂ ಯಾವುದೇ ಕಹಿಗಳಿಗೆ ಕಾರಣವಾಗಲಿಲ್ಲ.

***
ಭಾರತದ ರಾಜಕೀಯಕ್ಕೆ ತುಂಬಲಾರದ ನಷ್ಟ: ಮಲ್ಲಿಕಾರ್ಜುನ ಖರ್ಗೆ

ಶರದ್‌ ಯಾದವ್‌ ಅವರು ಭಾರತದ ಮೇಲ್ಪಂಕ್ತಿ ರಾಜಕಾರಣವನ್ನು ಬಲಪಡಿಸಿದವರು. ಯಾದವ್ ಅವರ ನಿಧನವು ಭಾರತದ ರಾಜಕೀಯಕ್ಕೆ ತುಂಬಲಾರದ ನಷ್ಟವಾಗಿದೆ

***

ಅವರಿಂದ ಬಹಳಷ್ಟು ಕಲಿತಿದ್ದೇನೆ: ರಾಹುಲ್‌ ಗಾಂಧಿ

ಸಮಾಜವಾದದ ನಾಯಕರಾಗಿದ್ದ ಅವರು, ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದರು. ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ. ಅವರ ಕುಟುಂಬ ಸದಸ್ಯರಿಗೆ ನೋವು ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ದೇಶಕ್ಕೆ ಅವರ ಕೊಡುಗೆ ಸದಾ ಸ್ಮರಣೀಯ.

***

ದುಃಖದ ಸುದ್ದಿ: ಅಮಿತ್‌ ಶಾ

ಶರದ್ ಯಾದವ್ ನಿಧನದ ದುಃಖದ ಸುದ್ದಿ ಬಂದಿದೆ. ಶರದ್ ಯಾದವ್ ಅವರು ಬಿಹಾರ ಮತ್ತು ಭಾರತದ ರಾಜಕೀಯಕ್ಕೆ ಅಮೂಲ್ಯ ಕೊಡುಗೆ ನೀಡಿದವರು. ಈ ದುಃಖದ ಸಮಯದಲ್ಲಿ, ಅವರ ಕುಟುಂಬ ಮತ್ತು ಬೆಂಬಲಿಗರಿಗೆ ನೋವು ಭರಿಸುವ ಶಕ್ತಿ ಸಿಗಲಿದೆಂದು ಪ್ರಾರ್ಥಿಸುವೆ.

ಇವುಗಳನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT