ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

NDAಗೆ ಹೋದ ನಿತೀಶ್‌ರಿಂದ INDIAಗೆ ಯಾವುದೇ ಹಾನಿ ಇಲ್ಲ: ಜೈರಾಮ್ ರಮೇಶ್

Published 29 ಜನವರಿ 2024, 10:53 IST
Last Updated 29 ಜನವರಿ 2024, 10:53 IST
ಅಕ್ಷರ ಗಾತ್ರ

ಕೃಷ್ಣಗಂಜ್ (ಬಿಹಾರ): ‘ಬಿಜೆಪಿ ನೇತೃತ್ವದ ಎನ್‌ಡಿಎ ಸೇರಿರುವ ಜೆಡಿಯು ಅಧ್ಯಕ್ಷ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್‌ ಅವರಿಂದ ಇಂಡಿಯಾ ಬಣಕ್ಕೆ ಯಾವುದೇ ಹಾನಿಯಿಲ್ಲ’ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಹೇಳಿದ್ದಾರೆ.

ಭಾರತ್ ಜೋಡೊ ನ್ಯಾಯ ಯಾತ್ರೆ ಸಂದರ್ಭದಲ್ಲಿ ಕೃಷ್ಣಗಂಜ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆಯಾ ಕುಮಾರ್, ಗಯಾ ಕುಮಾರ್‌’ ಎಂದು ನಿತೀಶ್ ಅವರ ಕಾಲೆಳೆದಿದ್ದಾರೆ.

‘ಪ್ರಧಾನಿ ಅವರ ತಂತ್ರದಿಂದಾಗಿ ನಿತೀಶ್ ಕುಮಾರ್‌ ಇಂಡಿಯಾ ಮೈತ್ರಿಕೂಟಕ್ಕೆ ದ್ರೋಹವೆಸಗಿದ್ದಾರೆ. ಜ. 14ರಂದು ಮಣಿಪುರದಲ್ಲಿ ಆರಂಭಗೊಂಡ ಭಾರತ್ ಜೋಡೊ ನ್ಯಾಯ ಯಾತ್ರೆ ಸಂದರ್ಭದಲ್ಲಿ ಮಿಲಿಂದ ದೇವರಾ ಅವರನ್ನು ಪ್ರಧಾನಿ ಮೋದಿ ಕಾಂಗ್ರೆಸ್‌ನಿಂದ ಸೆಳೆದರು. ಆಗ ಯಾತ್ರೆಯ ಬದಲು ದೇವರಾ ಸುದ್ದಿಯಾದರು. ಈಗಲೂ ಯಾತ್ರೆ ಬಿಹಾರ ಪ್ರವೇಶಿಸಿದೆ. ಈ ಸಂದರ್ಭದಲ್ಲೇ ಮೈತ್ರಿ ಬದಲಿಸಲು ಪ್ರಧಾನಿ ಸೂಚಿಸಿದ್ದಾರೆ. ಅವರ ಸೂಚನೆಯಂತೆ ನಿತೀಶ್ ನಡೆದಿದ್ದಾರೆ’ ಎಂದು ಜೈರಾಮ್ ಹೇಳಿದ್ದಾರೆ.

‘ಭಾರತ್ ಜೋಡೊ ನ್ಯಾಯ ಯಾತ್ರೆಗೆ ಕೃಷ್ಣಗಂಜ್‌ನಲ್ಲಿ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜಿಲ್ಲೆಗೆ ಸೋಮವಾರ ಬೆಳಿಗ್ಗೆ ಯಾತ್ರೆ ಪ್ರವೇಶಿಸಿದೆ. ಭಾರೀ ಸಂಖ್ಯೆಯಲ್ಲಿ ಜನರು ಯಾತ್ರೆಯಲ್ಲಿ ಸಾಗಿದ್ದಾರೆ’ ಎಂದೂ ಅವರು ಹೇಳಿದ್ದಾರೆ.

‘ನಿತೀಶ್ ಕುಮಾರ್ ಅವರು ಭಾನುವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮಹಾಘಟಬಂಧನ ಮತ್ತು ವಿರೋಧಪಕ್ಷಗಳ ಇಂಡಿಯಾ ಮೈತ್ರಿಕೂಟವನ್ನು ವಂಚಿಸಿ ಎನ್‌ಡಿಎ ಸೇರಿರುವ ಅವರು 9ನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ. 18 ತಿಂಗಳ ಹಿಂದೆ ಬಿಜೆಪಿಗೂ ಹೀಗೆಯೇ ಅವರು ಕೈಕೊಟ್ಟಿದ್ದರು’ ಎಂದು ಜೈರಾಮ್ ನಿತೀಶ್ ಅವರನ್ನು ಟೀಕಿಸಿದ್ದಾರೆ.

ಕಳೆದ ಒಂದು ದಶಕದಲ್ಲಿ ನಿತೀಶ್ ಅವರ ಮೈತ್ರಿ ಬದಲಾಗುತ್ತಿರುವುದು ಇದು 5ನೇ ಬಾರಿ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷಗಳ ಒಗ್ಗಟ್ಟಿಗೆ ಇದು ಹಿನ್ನಡೆ ಎಂದೇ ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT