ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿಗಣತಿ ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ರಾಹುಲ್ ಗಾಂಧಿ

Published 24 ಏಪ್ರಿಲ್ 2024, 14:09 IST
Last Updated 24 ಏಪ್ರಿಲ್ 2024, 14:09 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ದೇಶದಾದ್ಯಂತ ಜಾತಿಗಣತಿ ನಡೆಸಲಾಗುವುದು’ ಎಂಬ ಮಾತನ್ನು ಪುನರುಚ್ಚರಿಸಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ‘ಯಾವುದೇ ಶಕ್ತಿಯಿಂದ ಅದನ್ನು ತಡೆಯಲು ಸಾಧ್ಯವಿಲ್ಲ’ ಎಂದು ಪ್ರತಿಪಾದಿಸಿದರು.

ಬುಧವಾರ ಇಲ್ಲಿ ನಡೆದ ಸಾಮಾಜಿಕ ನ್ಯಾಯ ಸಮ್ಮೇಳನದಲ್ಲಿ ಪಾಲ್ಗೊಂಡ ಅವರು, ‘ತಮ್ಮನ್ನು ದೇಶಭಕ್ತರು ಎಂದು ಕರೆಸಿಕೊಳ್ಳುವವರು ಜಾತಿಗಣತಿಯ ‘ಎಕ್ಸ್‌–ರೇ’ಗೆ ಹೆದರುತ್ತಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ‘ದೇಶದ ಜನಸಂಖ್ಯೆಯಲ್ಲಿ ಶೇ 90 ರಷ್ಟು ಮಂದಿ ಅನ್ಯಾಯಕ್ಕೆ ಒಳಗಾಗಿದ್ದು, ಅವರಿಗೆ ನ್ಯಾಯ ಒದಗಿಸುವುದೇ ನನ್ನ ಜೀವನದ ಗುರಿ’ ಎಂದು ಘೋಷಿಸಿದರು.

‘ಪ್ರಧಾನಿ ಮೋದಿ ಅವರು ₹ 16 ಲಕ್ಷ ಕೋಟಿಯನ್ನು ಆಯ್ದ ಕೆಲವು ಉದ್ಯಮಿಗಳಿಗೆ ವರ್ಗಾಯಿಸಿದ್ದಾರೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೇರಿದರೆ ಅದರಲ್ಲಿ ಸಣ್ಣ ಮೊತ್ತವನ್ನು ಶೇ 90 ರಷ್ಟು ಜನರಿಗೆ ವಾಪಸ್‌ ಮಾಡಲಿದೆ. ಎಲ್ಲವನ್ನೂ ನಾವು ಲೆಕ್ಕ ಹಾಕಿದ್ದೇವೆ. ನಮಗೆ ಏನು ನ್ಯಾಯ ಎನಿಸಿದೆಯೋ ಅದನ್ನು ಪ್ರಣಾಳಿಕೆಯಲ್ಲಿ ಜನರ ಮುಂದೆ ಇಟ್ಟಿದ್ದೇವೆ’ ಎಂದರು.

‘ನನಗೆ ಜಾತಿಯಲ್ಲಿ ಆಸಕ್ತಿ ಇಲ್ಲ, ನ್ಯಾಯದಲ್ಲಿ ಆಸಕ್ತಿ ಇದೆ. ದೇಶದ ಶೇ 90ರಷ್ಟು ಜನರಿಗೆ ಘೋರ ಅನ್ಯಾಯವಾಗುತ್ತಿದೆ ಎಂದು ನಾನು ಹೇಳುತ್ತಿದ್ದೇನೆ. ಅದರ ಬಗ್ಗೆ ನಾವು ಯಾವುದೇ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿಲ್ಲ. ಎಷ್ಟು ಅನ್ಯಾಯವಾಗಿದೆ ಎಂಬುದನ್ನು ಪರೀಕ್ಷಿಸೋಣ ಎಂದಿದ್ದೆ. ಉದಾಹರಣೆಗೆ, ನೀವು ಗಾಯಗೊಂಡಾಗ ಎಕ್ಸ್‌–ರೇ ತೆಗೆಯಬೇಕು ಎಂದು ನಾನು ಹೇಳಿದರೆ ಅದಕ್ಕೆ ಯಾರೂ ಆಕ್ಷೇಪ ವ್ಯಕ್ತಪಡಿಸಲು ಸಾಧ್ಯವಿಲ್ಲ’ ಎಂದರು.

‘ಆದರೆ ಎಕ್ಸ್‌–ರೇ (ಜಾತಿಗಣತಿ, ಸಂಪತ್ತಿನ ಸಮೀಕ್ಷೆ) ಮೂಲಕ ಎಷ್ಟು ಅನ್ಯಾಯವಾಗಿದೆ ಎಂಬುದನ್ನು ಪರೀಕ್ಷಿಸೋಣ ಎಂದಿದ್ದಕ್ಕೆ ನರೇಂದ್ರ ಮೋದಿ ಅವರು ಯಾರ ರೀತಿ ಪ್ರತಿಕ್ರಿಯಿಸಿದ್ದಾರೆ ಎಂಬುದನ್ನು ನೋಡಿ. ದೇಶವನ್ನು ಒಡೆಯುವ ಯತ್ನ ನಡೆಯತ್ತಿದೆ ಎಂದು ಹೇಳಲು ಶುರುಮಾಡಿದರು’ ಎಂದು ಕಿಡಿಕಾರಿದರು.

‘ಒಬ್ಬ ದೇಶಭಕ್ತ ಏನನ್ನು ಬಯಸುವನು? ಒಬ್ಬ ದೇಶಭಕ್ತ ದೇಶದಲ್ಲಿ ನ್ಯಾಯವನ್ನು ಬಯಸುವನು. ಭಾರತವು ಅಭಿವೃದ್ಧಿ ಸಾಧಿಸಿ ಸೂಪರ್ ಪವರ್ ಆಗಬೇಕೆಂದು ಬಯಸುತ್ತಾನೆ. ಆದ್ದರಿಂದ ನೀವು ಸೂಪರ್ ಪವರ್ ಆಗಲು ಮತ್ತು ಚೀನಾಕ್ಕಿಂತ ಮುಂದೆ ಹೋಗಬೇಕಾದರೆ, ಒಟ್ಟು ಜನಸಂಖ್ಯೆಯ ಶೇ 90ರಷ್ಟು ಬಲವನ್ನು ಬಳಸಿಕೊಳ್ಳಬೇಕು’ ಎಂದು ತಿಳಿಸಿದರು.

ರಾಹುಲ್‌ ಹೇಳಿದ್ದು..

  • ಹೈಕೋರ್ಟ್‌ಗಳಲ್ಲಿರುವ 650 ನ್ಯಾಯಾಧೀಶರುಗಳಲ್ಲಿ ಒಬಿಸಿ ದಲಿತ ಮತ್ತು ಬುಡಕಟ್ಟು ಸಮುದಾಯಕ್ಕೆ ಸೇರಿದವರು ಕೇವಲ 100 ಮಂದಿ ಇದ್ದಾರೆ

  • ದೇಶದ ಪ್ರಮುಖ 200 ಕಂಪನಿಗಳಲ್ಲಿ ಒಬಿಸಿ ದಲಿತರು ಅಥವಾ ಬುಡಕಟ್ಟು ಸಮುದಾಯದ ಜನರು ಇಲ್ಲ

  • ಮಾಧ್ಯಮ ಕ್ಷೇತ್ರಗಳಲ್ಲೂ ದಲಿತರಿಗೆ ಹಿಂದುಳಿದವರಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಕ್ಕಿಲ್ಲ

‘ಕೋಟ್ಯಂತರ ಜನರು ಲಕ್ಷಾಧಿಪತಿ ಆಗುವರು’

ಅಮರಾವತಿ (ಮಹಾರಾಷ್ಟ್ರ): ನರೇಂದ್ರ ಮೋದಿ ಸರ್ಕಾರದ 10 ವರ್ಷಗಳ ಅವಧಿಯಲ್ಲಿ 22–25 ಮಂದಿ ಮಾತ್ರ ಶತಕೋಟ್ಯಧಿಪತಿಗಳಾಗಿದ್ದಾರೆ ಆದರೆ ‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೇರಿದರೆ ಅದು ಕೋಟ್ಯಂತರ ಜನರನ್ನು ‘ಲಖ್‌ಪತಿ’ಗಳನ್ನಾಗಿ ಮಾಡಲಿದೆ ಎಂದು ರಾಹುಲ್‌ ಗಾಂಧಿ ಹೇಳಿದರು.

ಮಹಾರಾಷ್ಟ್ರದ ಅಮರಾವತಿಯಲ್ಲಿ ಬುಧವಾರ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು ‘ಭಾರತದ ಸಂವಿಧಾನವನ್ನು ಜಗತ್ತಿನ ಯಾವುದೇ ಶಕ್ತಿಗೂ ಬದಲಿಸಲು ಸಾಧ್ಯವಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT