ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಮತ್ತೆ ಪ್ರಧಾನಿಯಾದರೆ ಸರ್ವಾಧಿಕಾರಿ: ಖರ್ಗೆ ಆತಂಕ

Published 29 ಜನವರಿ 2024, 11:45 IST
Last Updated 29 ಜನವರಿ 2024, 11:45 IST
ಅಕ್ಷರ ಗಾತ್ರ

ಭುವನೇಶ್ವರ : ಮುಂಬರುವ ಲೋಕಸಭಾ ಚುನಾವಣೆಯು ಪ್ರಜಾಪ್ರಭುತ್ವ ಉಳಿಸಲು ಜನರಿಗೆ ದೊರೆಯುವ ಕೊನೆಯ ಅವಕಾಶವಾಗಿದ್ದು, ಒಂದು ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಅವರು ಸರ್ವಾಧಿಕಾರಿಯಾಗಿ ಮಾರ್ಪಡಬಹುದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆತಂಕ ವ್ಯಕ್ತಪಡಿಸಿದರು.

‘ಮುಂದಿನ ಬಾರಿಯೂ ನರೇಂದ್ರ ಮೋದಿ ಅಧಿಕಾರಕ್ಕೆ ಬಂದರೆ, ದೇಶದಲ್ಲಿ ಸರ್ವಾಧಿಕಾರತ್ವ ಸ್ಥಾಪನೆ ಆಗುತ್ತದೆ. ರಷ್ಯಾದಲ್ಲಿ ಪುಟಿನ್‌ ಅವರಂತೆ ಬಿಜೆಪಿ ಭಾರತವನ್ನು ಆಳುತ್ತದೆ’ ಎಂದು ಅವರು ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು.

ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ವಿರೋಧ ಪಕ್ಷಗಳ ನಾಯಕರಿಗೆ ಬೆದರಿಕೆಗಳನ್ನು ಹಾಕಿಕೊಂಡು ಆಡಳಿತ ನಡೆಸುತ್ತಿದೆ. ರಾಜಕೀಯ ವಿರೋಧಿಗಳನ್ನು ಮಣಿಸಲು ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆಯನ್ನು ಅಸ್ತ್ರವಾಗಿ ಬಳಸುತ್ತಿದೆ ಎಂದು ಅವರು ಆರೋಪಿಸಿದರು.

ಬಿಜೆಪಿ ಮತ್ತು ಆರ್‌ಎಸ್‌ಎಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಅವುಗಳ ಸಿದ್ಧಾಂತ ವಿಷಕಾರಿಯಾಗಿದ್ದು, ಅವುಗಳಿಂದ ದೂರ ಉಳಿಯುವಂತೆ ಜನರನ್ನು ಒತ್ತಾಯಿಸಿದರು.

ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಸಿದ್ಧಾಂತಗಳನ್ನು ವಿರೋಧಿಸುವ ನಾಯಕರನ್ನು ಬೆದರಿಸಲಾಗುತ್ತಿದೆ. ಇದೇ ಕಾರಣಕ್ಕೆ ರಾಹುಲ್‌ ಗಾಂಧಿ ಅವರಿಗೆ ಪದೇ ಪದೇ ಬೆದರಿಕೆಗಳು ಬರುತ್ತಿವೆ. ಆದರೆ ದೇಶವನ್ನು ವಿಭಜಿಸುವ ಇಂಥ ಶಕ್ತಿಗಳ ವಿರುದ್ಧ ರಾಹುಲ್‌ ಅವರು ಹೆದರದೆ ಹೋರಾಟ ಮುಂದುವರಿಸಿದ್ದಾರೆ ಎಂದು ಖರ್ಗೆ ಹೇಳಿದರು.

ಮಹಾಘಟಬಂಧನ್‌ ದುರ್ಬಲವಾಗಿಲ್ಲ:

ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಎನ್‌ಡಿಎ ಮರಳಿದ್ದರ ಕುರಿತು ಪ್ರತಿಕ್ರಿಯಿಸಿದ ಅವರು, ‘ಒಬ್ಬ ವ್ಯಕ್ತಿ ಮಹಾಘಟಬಂಧನ್‌ ತೊರೆದರೆ, ಅದೇನು ದುರ್ಬಲ ಆಗುವುದಿಲ್ಲ. ನಾವು ಬಿಜೆಪಿಯನ್ನು ಸೋಲಿಸುತ್ತೇವೆ’ ಎಂದರು.

ಪ್ರಧಾನಿ ಮೋದಿ ಅವರನ್ನು ಸುಳ್ಳುಗಾರ ಎಂದು ಬಣ್ಣಸಿದ ಖರ್ಗೆ ಅವರು, ಪ್ರತಿ ವರ್ಷ ದೇಶದಲ್ಲಿ 2 ಕೋಟಿ ಉದ್ಯೋಗ ಸೃಷ್ಟಿ ಮತ್ತು ಪ್ರತಿ ಭಾರತೀಯರ ಬ್ಯಾಂಕ್‌ ಖಾತೆಗೆ ₹ 15 ಲಕ್ಷ ಪಾವತಿಸುವ ಭರವಸೆ ನೀಡಿದ್ದ ಮೋದಿ ಅವರು ಜನರ ದಾರಿ ತಪ್ಪಿಸಿದ್ದಾರೆ ಎಂದು ದೂರಿದರು.

‘ಮೋದಿ ಅವರು ಕಾಂಗ್ರೆಸ್‌ನ 70 ವರ್ಷಗಳ ಸಾಧನೆಯನ್ನು ಗೇಲಿ ಮಾಡಿದ್ದಾರೆ. ಕಾಂಗ್ರೆಸ್‌ ಪಕ್ಷವು ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉನ್ನತ ಸ್ಥಾನದಲ್ಲಿ ಇರಿಸಿದ್ದರಿಂದಲೇ ಅವರು ಗುಜರಾತ್‌ನ ಮುಖ್ಯಮಂತ್ರಿ ಮತ್ತು ದೇಶದ ಪ್ರಧಾನಿ ಆಗಲು ಸಾಧ್ಯವಾಯಿತು. ಆದರೆ ಅವರು ಈಗ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೂಲಭೂತ ಅಂಶಗಳನ್ನು ನಾಶಪಡಿಸುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು. 

ದೇಶದಾದ್ಯಂತ ಕೇಂದ್ರ ಸರ್ಕಾರದ ಸಂಸ್ಥೆಗಳಲ್ಲಿ 30 ಲಕ್ಷ ಹುದ್ದೆಗಳು ಖಾಲಿ ಇವೆ. ಎಸ್‌.ಸಿ, ಎಸ್‌ಟಿ, ಒಬಿಸಿ ಜನರಿಗೆ ಉದ್ಯೋಗ ಸಿಗುತ್ತದೆ ಎಂಬ ಕಾರಣಕ್ಕೆ ಮೋದಿ ಅವರು ಅವುಗಳನ್ನು ಭರ್ತಿ ಮಾಡುತ್ತಿಲ್ಲ ಎಂದು ಖರ್ಗೆ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT