ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಾರ್‌ಧಾಮ್‌ ಯಾತ್ರೆ |ಮೇ 31ರವರೆಗೆ VIP ದರ್ಶನಕ್ಕಿಲ್ಲ ಅವಕಾಶ, ರೀಲ್ಸ್‌ಗೂ ನಿಷೇಧ

Published 17 ಮೇ 2024, 4:45 IST
Last Updated 17 ಮೇ 2024, 4:45 IST
ಅಕ್ಷರ ಗಾತ್ರ

ಡೆಹ್ರಾಡೂನ್: ದೇವಾಲಯಗಳಲ್ಲಿ ನೂಕುನುಗ್ಗಲು ಇರುವ ಕಾರಣ ಚಾರ್‌ಧಾಮ್‌ಗಳಾದ ಕೇದಾರನಾಥ, ಯಮುನೋತ್ರಿ, ಬದರಿನಾಥ ಮತ್ತು ಗಂಗೋತ್ರಿಯಲ್ಲಿ ವಿಐಪಿ ದರ್ಶನಕ್ಕೆ ಅವಕಾಶ ನೀಡದಿರಲು ಉತ್ತರಾಖಂಡ ಸರ್ಕಾರ ಗುರುವಾರ ನಿರ್ಧರಿಸಿದೆ. ಈ ಬಗ್ಗೆ ಎನ್‌ಡಿಟಿವಿ ವರದಿ ಮಾಡಿದೆ.

'ಮೇ 31ರವರೆಗೆ ಚಾರ್‌ಧಾಮ್‌ಗಳಲ್ಲಿ ವಿಐಪಿ ದರ್ಶನಕ್ಕೆ ಅವಕಾಶವಿಲ್ಲ. ಅಲ್ಲದೇ ದೇವಾಲಯಗಳ 50 ಮೀಟರ್ ವ್ಯಾಪ್ತಿಯಲ್ಲಿ ವಿಡಿಯೊಗ್ರಫಿ ಮತ್ತು ರೀಲ್ಸ್‌ ಮಾಡುವುದರ ಮೇಲೆ ನಿಷೇಧ ಹೇರಲಾಗಿದೆ' ಎಂದು ಮುಖ್ಯ ಕಾರ್ಯದರ್ಶಿ ರಾಧಾ ರಾತುರಿ ತಿಳಿಸಿದ್ದಾರೆ. ಅಲ್ಲದೇ ‌ಮೇ 19ರವರೆಗೆ ಹರಿದ್ವಾರ ಮತ್ತು ಋಷಿಕೇಶದಲ್ಲಿ ಆಫ್‌ಲೈನ್ ನೋಂದಣಿಗೆ ಅವಕಾಶವಿಲ್ಲ ಎಂದೂ ಅವರು ಹೇಳಿದ್ದಾರೆ.

ಕೆಲವು ಯಾತ್ರಾರ್ಥಿಗಳು ದೇವಾಲಯಗಳ ಆವರಣದಲ್ಲಿ ವಿಡಿಯೊಗ್ರಫಿ ಮತ್ತು ರೀಲ್ಸ್‌ಗಳನ್ನು ಮಾಡುತ್ತಿದ್ದರು. ಇದರಿಂದಾಗಿ ಜನರು ಒಂದೇ ಸ್ಥಳದಲ್ಲಿ ಸೇರಿ ಅನಾನುಕೂಲತೆ ಉಂಟಾಗುತ್ತದೆ ಎಂದು ರಾತುರಿ ಹೇಳಿದ್ದಾರೆ.

ಮೇ 10ರಿಂದ ಚಾರ್‌ಧಾಮ್ ಯಾತ್ರೆ ಪ್ರಾರಂಭವಾಗಿದೆ. ಯಾತ್ರೆ ಆರಂಭವಾದ ಆರು ದಿನಗಳಲ್ಲಿ ( ಬುಧವಾರದವರೆಗೆ) ಭಾರತ ಮತ್ತು ವಿದೇಶಗಳಿಂದ ಸುಮಾರು 3,34,732 ಜನರು ದೇಗುಲಗಳಿಗೆ ಭೇಟಿ ನೀಡಿದ್ದಾರೆ.

ಏಪ್ರಿಲ್ 25ರಿಂದ ಯಾತ್ರೆಗೆ ನೋಂದಣಿ ಆರಂಭವಾಗಿದ್ದು, ಗುರುವಾರ(ಮೇ 16) ಸಂಜೆಯವರೆಗೆ 27 ಲಕ್ಷಕ್ಕೂ ಹೆಚ್ಚು ಭಕ್ತರು ನೋಂದಣಿ ಮಾಡಿಕೊಂಡಿದ್ದಾರೆ.

ಏಪ್ರಿಲ್ 30ರಂದು ಇತರ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ಮೇ 25 ರವರೆಗೆ ದೇವಾಲಯಗಳಲ್ಲಿ ವಿಐಪಿ ದರ್ಶನಕ್ಕೆ ಅವಕಾಶವಿಲ್ಲ ಎಂದು ಹೇಳಲಾಗಿತ್ತು. ಈಗ ದಿನಾಂಕ ವಿಸ್ತರಣೆಯಾಗಿದೆ. ಯಾತ್ರೆಗೆ ಪೂರ್ವ ನೋಂದಣಿ ಕಡ್ಡಾಯವಾಗಿದೆ. ಭಕ್ತರು ನೋಂದಣಿ ಸಮಯದಲ್ಲಿ ಅವರಿಗೆ ನಿಗದಿಪಡಿಸಿದ ದಿನಾಂಕಗಳಲ್ಲಿ ಮಾತ್ರ ದರ್ಶನ ಪಡೆಯಬಹುದಾಗಿದೆ ಎಂದು ರಾತುರಿ ಹೇಳಿದ್ದಾರೆ.

ಆರೋಗ್ಯ ಸಮಸ್ಯೆ ಇರುವ ಹಿರಿಯರು ಯಾತ್ರೆ ಪ್ರಾರಂಭಿಸುವ ಮೊದಲು ವೈದ್ಯಕೀಯ ಪರೀಕ್ಷೆ ಮಾಡಿಸಿಕೊಂಡಿರಬೇಕು. ಜತೆಗೆ ಉತ್ತರಾಖಂಡದ ಆರೋಗ್ಯ ಇಲಾಖೆ ಹೊರಡಿಸಿದ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT