ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಡಿಶಾ ಸಿಎಂ ಆಯ್ಕೆ: ಶಾಸಕರೊಂದಿಗೆ ರಾಜನಾಥ್‌ ಸಿಂಗ್, ಭೂಪೇಂದ್ರ ಯಾದವ್‌ ಚರ್ಚೆ

Published 11 ಜೂನ್ 2024, 10:17 IST
Last Updated 11 ಜೂನ್ 2024, 10:17 IST
ಅಕ್ಷರ ಗಾತ್ರ

ಭುವನೇಶ್ವರ: ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಸರಳ ಬಹುಮತ ಸಾಧಿಸಿರುವ ಬಿಜೆಪಿ, ರಾಜ್ಯದ ನೂತನ ಮುಖ್ಯಮಂತ್ರಿ ಆಯ್ಕೆಗೆ ಸಂಬಂಧಿಸಿದಂತೆ ಇಂದು (ಮಂಗಳವಾರ) ಶಾಸಕಾಂಗ ಪಕ್ಷದ ಸಭೆ ನಡೆಸಲಿದೆ.

ಒಡಿಶಾ ಮುಖ್ಯಮಂತ್ರಿ ಆಯ್ಕೆ ವಿಚಾರವಾಗಿ ಶಾಸಕರೊಂದಿಗೆ ಚರ್ಚಿಸಲು ಕೇಂದ್ರ ಸಚಿವ ರಾಜನಾಥ್‌ ಸಿಂಗ್ ಹಾಗೂ ಭೂಪೇಂದ್ರ ಯಾದವ್‌ ಅವರನ್ನು ವೀಕ್ಷಕರನ್ನಾಗಿ ಬಿಜೆಪಿ ನೇಮಿಸಿದೆ. ಈ ಇಬ್ಬರು ನಾಯಕರು ಈಗಾಗಲೇ ಒಡಿಶಾಕ್ಕೆ ಭೇಟಿ ನೀಡಿದ್ದಾರೆ.

ಸಂಜೆ ವೇಳೆಗೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಮುಖ್ಯಮಂತ್ರಿ ಆಯ್ಕೆ ಸಂಬಂಧ ಶಾಸಕರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

147 ಸದಸ್ಯ ಬಲದ ಒಡಿಶಾ ವಿಧಾನಸಭೆಗೆ ನಾಲ್ಕು ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ 78 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿಯು ಬಹುಮತ ಸಾಧಿಸಿದೆ. ಚುನಾವಣಾ ಫಲಿತಾಂಶ ಜೂನ್‌ 4ರಂದೇ ಹೊರಬಿದ್ದಿದೆ. ಆದರೆ, ಈವರೆಗೆ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿಲ್ಲ.

ಹಿರಿಯ ನಾಯಕ, ಸಂಸದ ಧರ್ಮೇಂದ್ರ ಪ್ರಧಾನ್‌ ಅವರ ಹೆಸರು ಮುಖ್ಯಮಂತ್ರಿ ಸ್ಥಾನಕ್ಕೆ ಬಲವಾಗಿ ಕೇಳಿಬಂದಿತ್ತು. ಆದರೆ, ಅವರನ್ನು ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿರುವ ಕಾರಣ, ಇದೀಗ ಬ್ರಜರಾಜನಗರ್‌ ಶಾಸಕ ಸುರೇಶ್‌ ಪೂಜಾರಿ ಹೆಸರು ಮುನ್ನಲೆಗೆ ಬಂದಿದೆ.

'ಶಾಸಕಾಂಗ ಪಕ್ಷದ ಸಭೆ ಇಂದು ನಡೆಯಲಿದೆ. ಜೂನ್‌ 12ರಂದು (ಬುಧವಾರ) ಹೊಸ ಸರ್ಕಾರ ರಚನೆಯಾಗಲಿದೆ' ಎಂದು ಒಡಿಶಾ ಬಿಜೆಪಿ ಉಸ್ತುವಾರಿ ವಿಜಯ್‌ ಪಾಲ್‌ ಸಿಂಗ್‌ ತೋಮರ್‌ ಹೇಳಿದ್ದರು.

'ವೀಕ್ಷಕರಾಗಿ ನೇಮಕಗೊಂಡಿರುವ ರಾಜನಾಥ್‌ ಸಿಂಗ್ ಹಾಗೂ ಭೂಪೇಂದ್ರ ಯಾದವ್‌ ಅವರನ್ನೊಳಗೊಂಡ ಅನುಭವಿ ನಾಯಕರ ತಂಡವು ಶಾಸಕರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದೆ' ಎಂದು ಸುರೇಶ್‌ ಪೂಜಾರಿ ಹೇಳಿದ್ದರು.

ಪೂಜಾರಿ ಮಾತ್ರವಲ್ಲದೆ, ರಾಜ್ಯ ಬಿಜೆಪಿ ಅಧ್ಯಕ್ಷ ಮನಮೋಹನ್‌ ಸಾಮಲ್‌, ಕೆ.ವಿ ಸಿಂಗ್‌, ಮೋಹನ್‌ ಮಜ್ಹಿ ಅವರೂ ಸಿಎಂ ರೇಸ್‌ನಲ್ಲಿದ್ದಾರೆ. ಈ ಹಿಂದೆ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಢದಲ್ಲಿ ಅಚ್ಚರಿಯ ಆಯ್ಕೆಗಳನ್ನು ಮಾಡಿರುವ ಬಿಜೆಪಿ, ಇಲ್ಲಿಯೂ ಅಂತಹದೇ ಪ್ರಯೋಗ ಮಾಡಿದರೂ ಅಚ್ಚರಿಯಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT