ನವದೆಹಲಿ: ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರು ಮತ್ತು ಉಗ್ರರ ನೆಲೆಗಳನ್ನು ಗುರಿಯಾಗಿಸಿ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ ಕುರಿತು ಲೋಕಸಭೆಯಲ್ಲಿ ನಡೆಯುತ್ತಿರುವ ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ತಮ್ಮದೇ ಕಾಂಗ್ರೆಸ್ ಪಕ್ಷದ ಕೋರಿಕೆಯನ್ನು ತಿರುವನಂತರಪುರದ ಸಂಸದ ಶಶಿ ತರೂರ್ ನಿರಾಕರಿಸಿದ್ದಾರೆ.

ಇದರ ಬದಲು ‘ಭಾರತೀಯ ಪೋರ್ಟ್ ಮಸೂದೆ 2025’ ಕುರಿತು ಮಾತನಾಡುವುದಾಗಿ ಪಕ್ಷದ ಮುಖಂಡರಿಗೆ ತರೂರ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಆಪರೇಷನ್ ಸಿಂಧೂರ ನಂತರ ಪಾಕಿಸ್ತಾನದ ಪ್ರಾಯೋಜಿತ ಭಯೋತ್ಪಾದನೆ ಮತ್ತು ಸೇನಾ ಕಾರ್ಯಾಚರಣೆ ಸಮರ್ಥನೆಗೆ ಕೇಂದ್ರ ಸರ್ಕಾರ ಕಳುಹಿಸಿದ್ದ ಸರ್ವಪಕ್ಷ ಸಂಸದರ ನಿಯೋಗದಲ್ಲಿ ಅಮೆರಿಕ ಹಾಗೂ ಇತರ ರಾಷ್ಟ್ರಗಳಿಗೆ ಶಶಿ ತರೂರ್ ನೇತೃತ್ವದ ತಂಡ ಭೇಟಿ ನೀಡಿತ್ತು. ಈ ನಿಯೋಗದಲ್ಲಿ ಪಾಲ್ಗೊಳ್ಳಲು ಅವರು ತೋರಿದ ಅತಿಯಾದ ಆಸಕ್ತಿಯು ಕಾಂಗ್ರೆಸ್ ಪಕ್ಷವನ್ನು ಕೆರಳಿಸಿತ್ತು.

ಆಪರೇಷನ್ ಸಿಂಧೂರ ಕುರಿತ ಚರ್ಚೆಯಲ್ಲಿ ತರೂರ್ ಪಾಲ್ಗೊಳ್ಳುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪಕ್ಷದ ಹಿರಿಯ ಮುಖಂಡರೊಬ್ಬರು, ‘ಪ್ರಮುಖ ವಿಷಯಗಳ ಕುರಿತು ಚರ್ಚೆಯಲ್ಲಿ ಪಾಲ್ಗೊಳ್ಳುತ್ತೀರಾ ಎಂದು ಪಕ್ಷದ ಹಿರಿಯ ಮುಖಂಡರನ್ನು ಕೇಳುವುದು ಸಾಮಾನ್ಯ. ಗೌರವ್ ಗೊಗೋಯಿ ಮತ್ತು ಕೆ. ಸುರೇಶ್ ಅವರು ಮಾತನಾಡುವುದಾಗಿ ಹೇಳಿದ್ದಾರೆ. ತರೂರ್ ಅವರು ಪೋರ್ಟ್ ಬಿಲ್ ಕುರಿತು ಮಾತನಾಡುವುದಾಗಿ ಹೇಳಿದ್ದಾರೆ’ ಎಂದಿದ್ದಾರೆ.

ಆಪರೇಷನ್ ಸಿಂಧೂರ ಕುರಿತು ಮಾತನಾಡುವಿರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಈ ಹಿಂದೆ ಪ್ರತಿಕ್ರಿಯಿಸಿದ್ದ ತರೂರ್, ಮೌನವ್ರತ ಆಚರಿಸುತ್ತಿರುವುದಾಗಿ ನಗೆ ಚಟಾಕಿ ಹಾರಿಸಿದ್ದರು.

ಮುಂಗಾರು ಅಧಿವೇಶನದಲ್ಲಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಪಹಲ್ಗಾಮ್ ದಾಳಿ ಮತ್ತು ಆಪರೇಷನ್ ಸಿಂಧೂರ ವಿಷಯದಲ್ಲಿ ಆಡಳಿತಾರೂಢ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ಸಜ್ಜಾಗಿವೆ. ಈ ಎರಡೂ ವಿಷಯಗಳಲ್ಲಿ ರಾಷ್ಟ್ರದ ಭದ್ರತೆ ಮತ್ತು ವಿದೇಶಾಂಗ ವ್ಯವಹಾರಗಳನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ಸರ್ಕಾರವನ್ನು ಟೀಕಿಸಲು ಸಿದ್ಧತೆ ನಡೆಸಿವೆ. ಇದಕ್ಕಾಗಿ ವಿಪಕ್ಷಗಳ ಪ್ರಮುಖ ಮುಖಂಡರನ್ನು ಚರ್ಚೆಗಿಳಿಸುತ್ತಿವೆ.

ಏ. 22ರ ಪಹಲ್ಗಾಮ್ ಭಯೋತ್ಪಾದಕರ ದಾಳಿಯಲ್ಲಿ ಗುಪ್ತಚರ ವೈಫಲ್ಯ ಕುರಿತು ವಿಪಕ್ಷಗಳು ಈಗಾಗಲೇ ಬಹಿರಂಗವಾಗಿ ಟೀಕಿಸಿವೆ. ಈ ದಾಳಿಯಲ್ಲಿ 26 ಜನ ಪ್ರವಾಸಿಗರು ಮೃತಪಟ್ಟಿದ್ದರು. ಇದರ ನಂತರದಲ್ಲಿ ಭಯೋತ್ಪಾಕರನ್ನು ಗುರಿಯಾಗಿಸಿ ಭಾರತೀಯ ಸೇನೆಯು ಮೇ 7ರಿಂದ 10ರವರೆಗೆ ‘ಆಪರೇಷನ್ ಸಿಂಧೂರ‘ ಹೆಸರಿನಲ್ಲಿ ಸೇನಾ ಕಾರ್ಯಾಚರಣೆ ನಡೆಸಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಸ್ಥಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಏರ್ಪಟ್ಟಿತ್ತು.

‘ಭಾರತದ ವಿದೇಶಾಂಗ ನೀತಿ ವಿರುದ್ಧ ರಾಹುಲ್ ಗಾಂಧಿ ಹಲವು ಬಾರಿ ವಾಗ್ದಾಳಿ ನಡೆಸಿದ್ದರು. ‘ಆಪರೇಷನ್ ಸಿಂಧೂರ’ ಸೇನಾ ಕಾರ್ಯಾಚರಣೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಬೆಂಬಲ ದೊರೆತಿಲ್ಲ ಮತ್ತು ಕದನ ವಿರಾಮಕ್ಕೂ ಮೊದಲು ಮಧ್ಯಸ್ಥಿಕೆ ವಹಿಸಲು ಡೊನಾಲ್ಡ್ ಟ್ರಂಪ್ ಅವರನ್ನು ಆಹ್ವಾನಿಸಿದ್ದು ಯಾರು ಎಂದು ಎರಡು ಪ್ರಮುಖ ಪ್ರಶ್ನೆಗಳನ್ನು ರಾಹುಲ್ ಕೇಳಿದ್ದರು.

ಮಧ್ಯಸ್ಥಿಕೆ ವಹಿಸಿ ತಾನೇ ಕದನ ವಿರಾಮ ನಡೆಸಿದೆ ಎಂಬ ಟ್ರಂಪ್ ಹೇಳಿಕೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.