ನವದೆಹಲಿ: ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಮತ್ತು ಇತರ ವಿಷಯಗಳ ಕುರಿತು ಕೂಡಲೇ ಚರ್ಚೆ ನಡೆಯಬೇಕು ಎಂದು ಒತ್ತಾಯಿಸಿ ‘ಇಂಡಿಯಾ’ ಮೈತ್ರಿಕೂಟಗಳ ಪಕ್ಷಗಳು ಪ್ರತಿಭಟನೆ ನಡೆಸಿ ಗದ್ದಲ ಎಬ್ಬಿಸಿದ್ದರಿಂದ ಲೋಕಸಭೆಯ ಕಲಾಪ ಸೋಮವಾರ ಬಲಿಯಾಯಿತು. ರಾಜ್ಯಸಭೆಯ ಕಲಾಪವನ್ನು ಪ್ರತಿಪಕ್ಷಗಳು ಬಹಿಷ್ಕರಿಸಿದವು.

ಕಲಾಪ ಬೆಳಿಗ್ಗೆ 11 ಗಂಟೆಗೆ ಆರಂಭವಾಗುತ್ತಿದ್ದಂತೆ ಮೃತರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಆ ಬಳಿಕ ಕಾಂಗ್ರೆಸ್ ನೇತೃತ್ವದಲ್ಲಿ ವಿಪಕ್ಷಗಳ ಸದಸ್ಯರು, ‘ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಗ್ಗೆ ಕೂಡಲೇ ಚರ್ಚೆ ಆರಂಭಿಸಬೇಕು’ ಎಂದು ಪಟ್ಟು ಹಿಡಿದು ಪ್ರತಿಭಟನೆ ಆರಂಭಿಸಿದರು.

ಲೋಕಸಭಾಧ್ಯಕ್ಷ ಓಂ ಬಿರ್ಲಾ, ‘ಪ್ರಶ್ನೋತ್ತರ ಅವಧಿ ಮುಗಿದ ಬಳಿಕ ಆಪರೇಷನ್ ಸಿಂಧೂರ ಸೇರಿದಂತೆ ಎಲ್ಲ ವಿಷಯಗಳ ಚರ್ಚೆಗೆ ಅವಕಾಶ ನೀಡಲು ಸಿದ್ಧನಿದ್ದೇನೆ’ ಎಂದು ಭರವಸೆ ನೀಡಿದರು.

‘ಪ್ರಶ್ನೋತ್ತರ ಅವಧಿಯ ನಂತರ ಎಲ್ಲ ವಿಷಯಗಳನ್ನು ಪ್ರಸ್ತಾಪಿಸಲು ನಿಮಗೆ ಅವಕಾಶ ನೀಡುತ್ತೇನೆ. ಸದನವು ನಿಯಮಗಳ ಪ್ರಕಾರ ಕಾರ್ಯನಿರ್ವಹಿಸುತ್ತದೆ. ಘೋಷಣೆಗಳನ್ನು ಕೂಗುವುದಕ್ಕೆ ಮತ್ತು ಫಲಕಗಳನ್ನು ಹಿಡಿಯುವುದಕ್ಕೆ ನಾನು ಅನುಮತಿ ನೀಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ನಾವು ಉನ್ನತ ಸಂಸದೀಯ ಗುಣಮಟ್ಟ ಕಾಯ್ದುಕೊಳ್ಳಲು ಪ್ರಯತ್ನಿಸಬೇಕು. ನಮ್ಮನ್ನು ಆಯ್ಕೆ ಮಾಡಿದ ಜನರ ಆಶಯಗಳು ಮತ್ತು ನಿರೀಕ್ಷೆಗಳನ್ನು ಈಡೇರಿಸಲು ಹಾಗೂ ದೇಶದ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಪ್ರಯತ್ನಿಸಬೇಕು’ ಎಂದು ಅವರು ಸಲಹೆ ನೀಡಿದರು. ಘೋಷಣೆಗಳನ್ನು ಕೂಗುವವರು ಸದನದಿಂದ ಹೊರಹೋಗಬಹುದು ಎಂದರು.

‘ಭಯೋತ್ಪಾದಕರ ದಾಳಿ ಹಾಗೂ ಸಿಂಧೂರ ಕಾರ್ಯಾಚರಣೆ ಬಗ್ಗೆ ಚರ್ಚೆಗೆ ಸಿದ್ಧವಿದೆ. ವಿಪಕ್ಷಗಳ ಸದಸ್ಯರು ಸದನದಲ್ಲಿ ಗದ್ದಲ ಎಬ್ಬಿಸದೆ ಕಲಾಪ ನಡೆಸಲು ಸಹಕಾರ ನೀಡಬೇಕು’ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹಾಗೂ ರಕ್ಷಣಾ ಸಚಿವ ರಾಜನಾಥ ಸಿಂಗ್ ಮನವಿ ಮಾಡಿದರು.

‘ವಿರೋಧ ಪಕ್ಷಗಳು ಬಯಸುವ ಯಾವುದೇ ವಿಷಯ ಚರ್ಚಿಸಲು ಸರ್ಕಾರ ಸಿದ್ಧವಾಗಿದೆ. ಅವರು ಎಷ್ಟು ಸಮಯ ಬೇಕಾದರೂ ಚರ್ಚಿಸಬಹುದು’ ಎಂದು ರಾಜನಾಥ ಸಿಂಗ್ ಹೇಳಿದರು. ‘ಸೋಮವಾರ ಮಧ್ಯಾಹ್ನ 2.30ಕ್ಕೆ ನಿಗದಿಯಾಗಿರುವ ಕಲಾಪ ವ್ಯವಹಾರ ಸಲಹಾ ಸಮಿತಿ ಸಭೆಯಲ್ಲಿ ವಿರೋಧ ಪಕ್ಷಗಳ ಸದಸ್ಯರು ಈ ಬಗ್ಗೆ ಪ್ರಸ್ತಾಪಿಸಲಿ’ ಎಂದರು. ಅಧಿವೇಶನದ ಮೊದಲ ದಿನವೇ ಕಲಾಪಕ್ಕೆ ಅಡ್ಡಿ ಪಡಿಸುವುದು ಸರಿಯಲ್ಲ ಎಂದು ಕಿವಿಮಾತು ಹೇಳಿದರು.

ವಿಪಕ್ಷಗಳ ಸದಸ್ಯರು ಲೋಕಸಭಾಧ್ಯಕ್ಷರ ಪೀಠದ ಎದುರು ನಿಂತು ಘೋಷಣೆಗಳನ್ನು ಕೂಗಿದರು. ನಂತರ ಕಲಾಪವನ್ನು ಮಧ್ಯಾಹ್ನ 12ಕ್ಕೆ ಮುಂದೂಡಲಾಯಿತು. ಆಗಲೂ ವಿಪಕ್ಷಗಳ ಸದಸ್ಯರು ಧರಣಿ ಮುಂದುವರಿಸಿದರು. ಸಭಾಧ್ಯಕ್ಷರ ಪೀಠದಲ್ಲಿದ್ದ ಜಗದಾಂಬಿಕಾ ಪಾಲ್, ‘ವಿಪಕ್ಷಗಳ ಸದಸ್ಯರು ಧರಣಿ ಕೈಬಿಡಬೇಕು’ ಎಂದು ವಿನಂತಿಸಿದರು. ಇದಕ್ಕೆ ಸದಸ್ಯರು ಒಪ್ಪಲಿಲ್ಲ. ‘ದೇಶದ ಜನರು ಕಲಾಪ ವೀಕ್ಷಿಸುತ್ತಿದ್ದಾರೆ. ಈ ವಿಷಯದ ಬಗ್ಗೆ ಸಮಗ್ರ ಚರ್ಚೆಗೆ ಸಿದ್ಧವಿದ್ದರೂ ಸದಸ್ಯರು ಧರಣಿ ನಡೆಸುತ್ತಿರುವುದು ಸರಿಯಲ್ಲ’ ಎಂದು ಪಾಲ್ ಹೇಳಿದರು. ಬಳಿಕ ಕಲಾಪವನ್ನು ಮಧ್ಯಾಹ್ನ 2 ಕ್ಕೆ ಮುಂದೂಡಿದರು. ಕಲಾಪ ಪುನರಾರಂಭ ಆಗುತ್ತಿದ್ದಂತೆ ವಿರೋಧ ಪಕ್ಷಗಳ ಸದಸ್ಯರು ಘೋಷಣೆಗಳನ್ನು ಕೂಗಿದರು. ಸಂಜೆ 4ಕ್ಕೆ ಕಲಾಪ ಮುಂದೂಡಲಾಯಿತು.

ಕಲಾಪ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷರ ಪೀಠದಲ್ಲಿದ್ದ ದಿಲೀಪ್ ಸೈಕಿಯಾ, ‘ಗೋವಾ ವಿಧಾನಸಭಾ ಸ್ಥಾನಗಳ ಕುರಿತ ಮಸೂದೆ ಮಂಡನೆಗೆ ಅವಕಾಶ ನೀಡಬೇಕು’ ಎಂದು ಮನವಿ ಮಾಡಿದರು. ವಿಪಕ್ಷಗಳ ಸದಸ್ಯರು ಗದ್ದಲ ಮುಂದುವರಿಸಿದ್ದರಿಂದ ಕಲಾಪವನ್ನು ಮಂಗಳವಾರ ಬೆಳಿಗ್ಗೆ 11ಕ್ಕೆ ಮುಂದೂಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.