ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರತಾ ವೈಫಲ್ಯದ ಹಿಂದಿರುವವರಿಗೆ ವಿಪಕ್ಷಗಳ ಬೆಂಬಲ: ಪ್ರಧಾನಿ ಮೋದಿ ಆರೋಪ

Published 19 ಡಿಸೆಂಬರ್ 2023, 14:43 IST
Last Updated 19 ಡಿಸೆಂಬರ್ 2023, 14:43 IST
ಅಕ್ಷರ ಗಾತ್ರ

ನವದೆಹಲಿ: ‘ಲೋಕಸಭೆಯ ಭದ್ರತಾ ವೈಫಲ್ಯವನ್ನು ವಿರೋಧ ಪಕ್ಷಗಳು ಬೆಂಬಲಿಸುತ್ತಿರುವುದು ದುರದೃಷ್ಟಕರ ಮತ್ತು ಖಂಡನಾರ್ಹ. ಭದ್ರತಾ ವೈಫಲ್ಯಕ್ಕೆ ಕಾರಣವಾದವರಿಗೆ ವಿರೋಧಪಕ್ಷಗಳು ಮೌನವಾಗಿ ಮತ್ತು ಪರೋಕ್ಷವಾಗಿ ಬೆಂಬಲ ನೀಡುತ್ತಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಆರೋಪಿಸಿದರು.

‘2024ರ ಲೋಕಸಭೆ ಚುನಾವಣೆಯಲ್ಲಿ ವಿಪಕ್ಷಗಳು ಮತ್ತಷ್ಟು ಸ್ಥಾನಗಳನ್ನು ಕಳೆದುಕೊಳ್ಳಲಿವೆ ಎಂಬುದು ಅವರ ನಡವಳಿಕೆಯಿಂದಲೇ ತಿಳಿಯುತ್ತದೆ’ ಎಂದರು.

ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಪ್ರತಿಭಟನೆ ನಡೆಸುತ್ತಿರುವುದನ್ನು ವಿರೋಧಿಸಿ ತೀವ್ರ ವಾಗ್ದಾಳಿ ನಡೆಸಿದ ಅವರು, ‘ಭದ್ರತಾ ವೈಫಲ್ಯ ಘಟನೆಗೆ ರಾಜಕೀಯ ಬಣ್ಣ ನೀಡುವ ಮೂಲಕ ಈಚಿನ ವಿಧಾನಸಭೆ ಚುನಾವಣಾ ಸೋಲಿನ ಹತಾಶೆಯನ್ನು ವಿಪಕ್ಷಗಳು ಹೊರಹಾಕುತ್ತಿವೆ. ವಿರೋಧ ಪಕ್ಷಗಳ ಗುರಿಯು ನಮ್ಮ ಸರ್ಕಾರವನ್ನು ಕೆಳಗಿಳಿಸುವುದಾಗಿದೆ. ಆದರೆ ನಮ್ಮ ಸರ್ಕಾರದ ಗುರಿಯು ದೇಶಕ್ಕೆ ಉಜ್ವಲ ಭವಿಷ್ಯ ಖಾತ್ರಿಪಡಿಸುವುದಾಗಿದೆ’ ಎಂದು ಹೇಳಿದರು.

‘ಸಂಸತ್ತಿನ ಭದ್ರತಾ ವೈಫಲ್ಯವನ್ನು ಸಮರ್ಥಿಸಿಕೊಳ್ಳುವ ಕೆಲಸ ನಡೆಯುತ್ತಿದೆ. ಇದು ಭದ್ರತಾ ವೈಫಲ್ಯದಷ್ಟೇ ಗಂಭೀರ ಸಮಸ್ಯೆ’ ಎಂದು ಮೋದಿ ಹೇಳಿರುವುದಾಗಿ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರು ತಿಳಿಸಿದರು. 

ನಿರುದ್ಯೋಗ, ಬೆಲೆ ಏರಿಕೆಯು ಸಂಸತ್ತಿನ ಭದ್ರತಾ ವೈಫಲ್ಯಕ್ಕೆ ಕಾರಣ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಈಚೆಗೆ ಆರೋಪಿಸಿದ್ದರು. ಈ ಹೇಳಿಕೆ ಹಿನ್ನೆಲೆಯಲ್ಲಿ ಮೋದಿ ಅವರು ಹೀಗೆ ಹೇಳಿದ್ದಾರೆ. ಪ್ರಜಾಪ್ರಭುತ್ವ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ನಂಬಿಕೆ ಇರಿಸಿರುವ ಎಲ್ಲರೂ ಭದ್ರತಾ ವೈಫಲ್ಯ ಕೃತ್ಯವನ್ನು ಖಂಡಿಸಬೇಕು ಎಂದಿದ್ದಾರೆ.

ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ನಂಬಿಕೆ ಇರಿಸಿರುವ ‍ಪಕ್ಷವೊಂದು ಬಹಿರಂಗವಾಗಿ ಅಥವಾ ಒಳಗೊಳಗೇ ಇಂಥ ಕೃತ್ಯಗಳನ್ನು ಬೆಂಬಲಿಸಲು ಹೇಗೆ ಸಾಧ್ಯ ಎಂದು ಬಿಜೆಪಿ ನಾಯಕ ರವಿಶಂಕರ್‌ ಪ್ರಸಾದ್‌ ಪ್ರಶ್ನಿಸಿದರು.

‘ನಮ್ಮ ಧ್ವನಿಯನ್ನು ಹತೋಟಿಯಲ್ಲಿರಿಸಿಕೊಂಡು ಮತ್ತು ಪ್ರಜಾಪ್ರಭುತ್ವದ ಮಿತಿಯಲ್ಲೇ ನಾವು ವಿಪಕ್ಷಗಳ ಸಂಚನ್ನು ಬಯಲಿಗೆಳೆಯಬೇಕು. ಯಾರು ಸಂಸತ್‌ ಅಧಿವೇಶನದಲ್ಲಿ ಭಾಗಿಯಾಗದಿದ್ದರೂ ನಾವು ಮಾತ್ರ ಸಂಸತ್‌ ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕು’ ಎಂದು ಉಭಯ ಸದನಗಳಲ್ಲಿ ಮಂಡನೆಯಾಗಬೇಕಿರುವ ಪ್ರಮುಖ ಮಸೂದೆಗಳನ್ನು ಉಲ್ಲೇಖಿಸಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT