ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದ ಬೋಟ್‌ನಿಂದ ₹600 ಕೋಟಿ ಮೌಲ್ಯದ ಡ್ರಗ್ಸ್ ವಶ, 14 ಮಂದಿ ಬಂಧನ

Published 28 ಏಪ್ರಿಲ್ 2024, 11:19 IST
Last Updated 28 ಏಪ್ರಿಲ್ 2024, 11:19 IST
ಅಕ್ಷರ ಗಾತ್ರ

ಅಹಮದಾಬಾದ್‌: ಪಾಕಿಸ್ತಾನದ ಹಡಗಿನಲ್ಲಿ ಸಾಗಿಸುತ್ತಿದ್ದ ₹600 ಕೋಟಿ ಮೌಲ್ಯದ 86 ಕೆ.ಜಿ. ಹೆರಾಯಿನ್‌ ಅನ್ನು ಭಾನುವಾರ ಜಪ್ತಿ ಮಾಡಲಾಗಿದ್ದು, ಪಾಕ್‌ನ 14 ಪ್ರಜೆಗಳನ್ನು ಬಂಧಿಸಲಾಗಿದೆ.  

ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಮತ್ತು ಭಾರತೀಯ ಕರಾವಳಿ ಕಾವಲು ಪಡೆ (ಐಸಿಜಿ) ಇಲ್ಲಿನ ಪೋರಬಂದರ್‌ ತೀರದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದವು. 

‘ಈ ಹೆರಾಯಿನ್‌ ಅನ್ನು ಶ್ರೀಲಂಕಾಗೆ ಕಳ್ಳಸಾಗಣೆ ಮಾಡಲಾಗುತ್ತಿತ್ತು. ಅದಕ್ಕಾಗಿ, ಇದನ್ನು ತಮಿಳುನಾಡಿನ ಕೆಲವರಿಗೆ ತಲುಪಿಸಲು ಬಂಧಿತರು ತೆರಳುತ್ತಿದ್ದರು’ ಎಂದು ಎಟಿಎಸ್‌ ಅಧಿಕಾರಿಗಳು ಹೇಳಿದ್ದಾರೆ.

‘ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಗುಜರಾತ್‌ನ ಮಾದಕವಸ್ತು ನಿಯಂತ್ರಣ ಘಟಕಕ್ಕೆ (ಎನ್‌ಸಿಬಿ) ವಹಿಸಲಾಗಿದೆ’ ಎಂದು ಡಿಜಿಪಿ ವಿಕಾಸ್‌ ಸಹಾಯ್‌ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಪಾಕಿಸ್ತಾನದ ಮೀನುಗಾರಿಕೆ ಹಡಗಿನಲ್ಲಿ ಮಾದಕವಸ್ತುವನ್ನು ತಮಿಳುನಾಡಿನ ವ್ಯಕ್ತಿಗೆ ತಲುಪಿಸಲು ಕೊಂಡೊಯ್ಯಲಾಗುತ್ತಿದೆ. ‘ಅಲ್‌– ರಜಾ’ ಹಡಗಿನ ರೇಡಿಯೊ ಕರೆಯ ಗುಪ್ತಸಂಕೇತ ‘ಅಲಿ’ ಎಂದಿದ್ದರೆ, ಅಪರಿಚಿತ ವ್ಯಕ್ತಿಯ ವಾಹನ ರೇಡಿಯೊ ಕರೆಯ ಗುಪ್ತ ಸಂಕೇತ ‘ಹೈದರ್‌’ ಎಂಬ ಮಾಹಿತಿಯು ಎಟಿಎಸ್‌ಗೆ ಲಭಿಸಿತ್ತು. 

‘ಮಾಹಿತಿ ಆಧರಿಸಿ ಎಟಿಎಸ್‌, ಐಸಿಜಿ ಮತ್ತು ಎನ್‌ಸಿಬಿ (ಕಾರ್ಯಾಚರಣೆ ವಿಭಾಗ) ಏ.26ರಂದು ಜಂಟಿ ಕಾರ್ಯಾಚರಣೆ ನಡೆಸಿದವು. ಪೋರಬಂದರ್‌ನ ಕರಾವಳಿಯಲ್ಲಿದ್ದ ಶಂಕಿತ ಹಡಗು ತಡೆದಾಗ ಹೆರಾಯಿನ್‌ ಪ್ಯಾಕೆಟ್‌ಗಳನ್ನು ಸಮುದ್ರಕ್ಕೆ ಎಸೆದ ಪಾಕಿಸ್ತಾನ ಪ್ರಜೆಗಳು ತಪ್ಪಿಸಿಕೊಳ್ಳಲು ಯತ್ನಿಸಿದರು. ಈ ಸಂದರ್ಭದಲ್ಲಿ ಐಸಿಜಿ ಅಧಿಕಾರಿ ಗುಂಡು ಹಾರಿಸಿದರು’ ಎಂದು ಐಸಿಜಿ ಅಧಿಕಾರಿಗಳು ಹೇಳಿದ್ದಾರೆ.

‘ಹಡಗಿನ ಕ್ಯಾಪ್ಟನ್‌ ನಾಜಿರ್ ಹುಸೇನ್‌ ಕೈಗೆ ಗುಂಡುತಗುಲಿದ್ದು, ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಾಥಮಿಕ ತನಿಖೆ ಪ್ರಕಾರ, ಈ ಮಾಕದ ವಸ್ತುವನ್ನು ಬಲೂಚಿಸ್ತಾನದ ಹಾಜಿ ಅಸ್ಲಂ ಅಲಿಯಾಸ್‌ ಬಾಬು ಬಲೋಚ್‌ ಎಂಬಾತ ಕಳುಹಿಸಿದ್ದ’ ಎಂದು ಎಟಿಎಸ್‌ ಮೂಲಗಳು ವಿವರಿಸಿವೆ.

ವಿವಿಧ ಇಲಾಖೆಗಳ ಸಮನ್ವಯದಿಂದ ಈ ಕಾರ್ಯಾಚರಣೆ ಯಶಸ್ವಿಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ಈ ರೀತಿಯ 11 ಜಂಟಿ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT