ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೃದಯ ಗೆಲ್ಲಲು ಜಮ್ಮು–ಕಾಶ್ಮೀರಕ್ಕೆ ಬಂದಿರುವೆ: ಪ್ರಧಾನಿ ಮೋದಿ

ವಿಶೇಷ ಸ್ಥಾನಮಾನ ರದ್ದಾದ ನಂತರ ಮೊದಲ ಭೇಟಿ
Published 7 ಮಾರ್ಚ್ 2024, 13:04 IST
Last Updated 7 ಮಾರ್ಚ್ 2024, 13:04 IST
ಅಕ್ಷರ ಗಾತ್ರ

ಶ್ರೀನಗರ: ಸಂವಿಧಾನದ 370ನೇ ವಿಧಿ ಅಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ನಂತರ ಜಮ್ಮು–ಕಾಶ್ಮೀರಕ್ಕೆ ಇದೇ ಮೊದಲ ಬಾರಿಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ‘ನಿಮ್ಮೆಲ್ಲರ ಹೃದಯ ಗೆಲ್ಲುವುದಕ್ಕಾಗಿ ನಾನು ಇಲ್ಲಿಗೆ ಬಂದಿರುವೆ’ ಎಂದು ಗುರುವಾರ ಹೇಳಿದರು.

‘ವಿಕಸಿತ ಭಾರತ, ವಿಕಸಿತ ಜಮ್ಮು–ಕಾಶ್ಮೀರ’ ಕಾರ್ಯಕ್ರಮ ಅಂಗವಾಗಿ ಇಲ್ಲಿನ ಬಕ್ಷಿ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಹೃದಯ ಗೆಲ್ಲುವುದು ಮಾತ್ರ ನನ್ನ ಈ ಭೇಟಿಯ ಉದ್ದೇಶವಲ್ಲ; ಕಾಶ್ಮೀರ ಜನರ ಆಶೋತ್ತರಗಳು ಹಾಗೂ ಕನಸುಗಳನ್ನು ತಿಳಿದುಕೊಳ್ಳಲು ನಾನು ಇಲ್ಲಿಗೆ ಬಂದಿದ್ದೇನೆ’ ಎಂದು ಮೋದಿ ಹೇಳಿದರು.

‘2014ರ ನಂತರ ಜಮ್ಮು–ಕಾಶ್ಮೀರಕ್ಕೆ ಬಂದಾಗಲೆಲ್ಲ, ನಾನು ನಿಮ್ಮ ಹೃದಯ ಗೆಲ್ಲುವುದಕ್ಕೆ ಎಲ್ಲ ಪ್ರಯತ್ನಗಳನ್ನು ಮಾಡುವೆ ಎಂದು ಹೇಳುತ್ತಿದ್ದೆ. ಇಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದನ್ನು ನೋಡಿದರೆ ನಾನು ನಿಮ್ಮ ಹೃದಯ ಗೆಲ್ಲುವಲ್ಲಿ ಯಶಸ್ಸು ಕಂಡಿದ್ದೇನೆ ಎಂಬುದು ಮನದಟ್ಟಾಗುತ್ತಿದೆ’ ಎಂದು ಹೇಳಿದರು.

‘ಶೀಘ್ರವೇ ರಂಜಾನ್‌ ಆರಂಭವಾಗಲಿದೆ. ಜಮ್ಮು–ಕಾಶ್ಮೀರದ ಪರಿಶುದ್ಧವಾದ ಈ ನೆಲದಿಂದ ನಾನು ಪ್ರತಿಯೊಬ್ಬರಿಗೂ ಶುಭಾಶಯ ಕೋರುತ್ತೇನೆ. ಮುಂದಿನ ಐದು ವರ್ಷಗಳ ಅವಧಿಯಲ್ಲಿ ಜಮ್ಮು–ಕಾಶ್ಮೀರ ಭಾರಿ ಅಭಿವೃದ್ಧಿ ಕಾಣಲಿದೆ. ಜಮ್ಮು–ಕಾಶ್ಮೀರದ ಯಶಸ್ಸು, ಶಾಂತಿ ಮತ್ತು ಅಭಿವೃದ್ಧಿಯನ್ನು ಯಾರೂ ತಡೆಯಲಾರರು’ ಎಂದು ಮೋದಿ ಹೇಳಿದರು.

ನೇಮಕಾತಿ ಪತ್ರ ವಿತರಣೆ: ಇದೇ ಸಂದರ್ಭದಲ್ಲಿ ಮೋದಿ ಅವರು ನೂತನವಾಗಿ ನೇಮಕಗೊಂಡಿರುವ ಸಾವಿರದಷ್ಟು ಸರ್ಕಾರಿ ಉದ್ಯೋಗಿಗಳಿಗೆ ನೇಮಕಾತಿ ಪತ್ರ ವಿತರಿಸಿದರು.

ಮಹಿಳಾ ಸಾಧಕಿಯರು, ರೈತರು, ಉದ್ಯಮಶೀಲರು ಹಾಗೂ ಕೇಂದ್ರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.

₹6,400 ಕೋಟಿ ಅಧಿಕ ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದರು.

‘370ನೇ ವಿಧಿ: ಕಾಂಗ್ರೆಸ್‌ನಿಂದ ದಾರಿ ತಪ್ಪಿಸುವ ಕಾರ್ಯ’

ಸಂವಿಧಾನದ 370ನೇ ವಿಧಿ ಕುರಿತು ಕಾಂಗ್ರೆಸ್ ‍ಪಕ್ಷವು ಜಮ್ಮು–ಕಾಶ್ಮೀರ ಮಾತ್ರವಲ್ಲ ಇಡೀ ದೇಶದ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿತ್ತು’ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದರು.

‘ಹಿಂದೆ ಕಾಲವೊಂದಿತ್ತು. ದೇಶದ ಇತರ ಭಾಗಗಳಿಗೆ ಸಿಗುತ್ತಿದ್ದ ಪ್ರಯೋಜನಗಳಿಂದ ಜಮ್ಮು–ಕಾಶ್ಮೀರ ವಂಚಿತವಾಗುತ್ತಿತ್ತು. 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನದಿಂದಾಗಿ ದೇಶದ ಇತರ ಭಾಗಗಳಲ್ಲಿ ಜಾರಿಯಲ್ಲಿದ್ದ ಕಾನೂನುಗಳು ಇಲ್ಲಿ ಅನ್ವಯವಾಗುತ್ತಿರಲಿಲ್ಲ’ ಎಂದರು.

‘ಈಗ ಕಾಲ ಬದಲಾಗಿದೆ. ಬಡವರ ಏಳಿಗೆಗಾಗಿ ದೇಶದಾದ್ಯಂತ ಜಾರಿಗೊಳಿಸಲಾಗುವ ಕಾರ್ಯಕ್ರಮಗಳು ಜಮ್ಮು–ಕಾಶ್ಮೀರದ ಸಹೋದರ–ಸಹೋದರಿಯರಿಗೂ ಪ್ರಯೋಜನವಾಗುತ್ತಿದೆ’ ಎಂದರು.

‘ಕೆಲ ಕುಟುಂಬಗಳ ಜಮ್ಮು–ಕಾಶ್ಮೀರದ ಮೇಲೆ ಹಿಡಿತ ಸಾಧಿಸಿದ್ದವು. ಕುಟುಂಬ ರಾಜಕಾರಣ ಲಂಚಗುಳಿತನದಿಂದಾಗಿ ಈ ಭಾಗದ ಜನರು ತೊಂದರೆ ಅನುಭವಿಸುವಂತಾಗಿತ್ತು‘ ಎಂದು ನ್ಯಾಷನಲ್‌ ಕಾನ್ಫರೆನ್ಸ್‌ ಹಾಗೂ ಪಿಡಿಪಿ ವಿರುದ್ಧ ಪರೋಕ್ಷ ವಾಗ್ಗಾಳಿ ನಡೆಸಿದರು.

‘ಕುಟುಂಬ ರಾಜಕಾರಣದಿಂದಾಗಿ ಜಮ್ಮು–ಕಾಶ್ಮೀರ ಬ್ಯಾಂಕ್‌ ಮುಳುಗುವ ಹಂತ ತಲುಪಿತ್ತು. ಬ್ಯಾಂಕನ್ನು ಸಂಕಷ್ಟದಿಂದ ಪಾರು ಮಾಡಲಾಗಿದ್ದು ಈಗ ಅದು ಬೆಳೆಯುತ್ತಿದೆ. ಈ ಸಾಧನೆಗಳಿಗೆ ನಿಮ್ಮ ನಿರ್ಧಾರವೇ ಕಾರಣ. ನಾನು ಒಬ್ಬ ಕಾವಲುಗಾರ ಮಾತ್ರ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT