ಚೆನ್ನೈ: ಫುಟ್‌ಬಾಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲವೆಂದು ದೈಹಿಕ ಶಿಕ್ಷಕರೊಬ್ಬರು ವಿದ್ಯಾರ್ಥಿಗಳನ್ನು ಥಳಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ತಮಿಳುನಾಡಿನ ಸೇಲಂ ಜಿಲ್ಲೆಯ ಮೆಟ್ಟೂರಿನ ಸರ್ಕಾರಿ ಅನುದಾನಿತ ಶಾಲೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಶಿಕ್ಷಕನನ್ನು ಅಣ್ಣಾಮಲೈ ಎಂದು ಗುರುತಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಹೊಡೆಯುವ, ಒದೆಯುವ ಮತ್ತು ಕೂದಲನ್ನು ಹಿಡಿದು ತಳ್ಳುವ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹರಿದಾಡುತ್ತಿದ್ದಂತೆ ಎಚ್ಚೆತ್ತ ಸಂಗಗಿರಿ ಜಿಲ್ಲಾ ಶಿಕ್ಷಣಾಧಿಕಾರಿ, ಈ ಸಂಬಂಧ ಕೂಲಂಕಷವಾಗಿ ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ಜತೆಗೆ ಅಣ್ಣಾಮಲೈ ಅವರನ್ನು ಅಮಾನತು ಮಾಡಿ ಆದೇಶಿಸಿದ್ದಾರೆ
ವಿದ್ಯಾರ್ಥಿಯೊಬ್ಬನ ಬಳಿ ಶಿಕ್ಷಕ, ‘ನೀನು ಹುಡುಗನೋ, ಹುಡುಗಿಯೋ?, ಅವರಿಗೆ ಗೋಲು ಗಳಿಸಲು ಹೇಗೆ ಬಿಟ್ಟೆ?, ಬಾಲ್ ಅನ್ನು ನಿನ್ನ ಹಿಂದೆ ಹೋಗಲು ಹೇಗೆ ಬಿಟ್ಟೆ? ಎಂದು ಗದರಿಸಿದ್ದಾರೆ. ಮತ್ತೊಬ್ಬ ವಿದ್ಯಾರ್ಥಿಯ ಬಳಿ, ಒತ್ತಡದಲ್ಲಿ ಆಟವಾಡಲು ಸಾಧ್ಯವಿಲ್ಲವೇ? ಆಡುವಾಗ ಯಾಕೆ ಸರಿಯಾದ ರೀತಿಯಲ್ಲಿ ಸಂವಹನ ಮಾಡಲಿಲ್ಲ?’ ಎಂದು ಪ್ರಶ್ನಿಸಿರುವುದನ್ನು ವಿಡಿಯೊದಲ್ಲಿ ಕೇಳಬಹುದು.