ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಷ್ಟ್ರಪತಿ ಮುರ್ಮುಗೆ ತಿಮೋರ್ ಅತ್ಯುನ್ನತ ನಾಗರಿಕ ಪ್ರಶಸ್ತಿ;ಪ್ರಧಾನಿ ಮೋದಿ ಸಂತಸ

Published 11 ಆಗಸ್ಟ್ 2024, 6:18 IST
Last Updated 11 ಆಗಸ್ಟ್ 2024, 6:18 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತಿಮೋರ್ ಲೆಸ್ಟ್‌ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ ‘ಗ್ರ್ಯಾಂಡ್‌ ಕಾಲರ್‌ ಆಫ್‌ ದ ಆರ್ಡರ್‌ ಆಫ್‌ ತಿಮೊರ್‌ ಲೆಸ್ಟ್’ ಅನ್ನು ನೀಡಿ ಗೌರವಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

‘ರಾಷ್ಟ್ರದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಗ್ರ್ಯಾಂಡ್‌ ಕಾಲರ್‌ ಆಫ್‌ ದ ಆರ್ಡರ್‌ ಆಫ್‌ ತಿಮೊರ್‌ ಲೆಸ್ಟ್’ ಅನ್ನು ನಮ್ಮ ರಾಷ್ಟ್ರಪತಿಯವರಿಗೆ ನೀಡಿ ಗೌರವಿಸುವುದನ್ನು ನೋಡುವುದು ಹೆಮ್ಮೆಯ ಕ್ಷಣವಾಗಿದೆ. ಇದು ಉಭಯ ದೇಶಗಳ ನಡುವಿನ ಉತ್ತಮ ಬಾಂಧವ್ಯ ಮತ್ತು ಪರಸ್ಪರ ಗೌರವವನ್ನು ಪ್ರತಿಬಿಂಬಿಸುತ್ತದೆ. ಈ ಪ್ರಶಸ್ತಿಯು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹಲವು ವರ್ಷಗಳ ಕೊಡುಗೆಗೆ ಸಿಕ್ಕ ಮನ್ನಣೆಯಾಗಿದೆ ಎಂದು ಮೋದಿ ’ಎಕ್ಸ್’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ತಿಮೋರ್ ಲೆಸ್ಟ್‌ನ ಅಧ್ಯಕ್ಷ ಜೊಸ್‌ ರಮೊಸ್‌ ಹೊರ್ಟಾ ಅವರು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ನೀಡಿ ಗೌರವಿಸಿದ್ದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ್ದ ಅವರು, ‘ಡಿಲಿಯಲ್ಲಿ ಭಾರತವು ಆದಷ್ಟು ಬೇಗ ತನ್ನ ಶಾಶ್ವತ ರಾಯಭಾರ ಕಚೇರಿಯನ್ನು ಆರಂಭಿಸಲಿದೆ. ಅದೇ ರೀತಿ, ತಿಮೋರ್‌ ಲೆಸ್ಟ್ ದೇಶವು ತನ್ನ ರಾಯಭಾರ ಕಚೇರಿಯನ್ನು ದೆಹಲಿಯಲ್ಲಿ ಆರಂಭಿಸುವುದನ್ನು ಭಾರತ ಎದುರು ನೋಡುತ್ತಿದೆ, ಮುಂದಿನ ದಿನಗಳಲ್ಲಿ ದೆಹಲಿ– ಡಿಲಿ ನಡುವಿನ ಗಟ್ಟಿಯಾದ ಸ್ನೇಹ ಸಂಬಂಧ ಬೆಳೆಯಲಿದೆ’ ಎಂದು ಭರವಸೆ ನೀಡಿದ್ದರು.

‘ಐ.ಟಿ, ಡಿಜಿಟಲ್‌ ತಂತ್ರಜ್ಞಾನ, ಆರೋಗ್ಯ, ಔಷಧ ಕ್ಷೇತ್ರ, ಕೃಷಿ‌ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವೃದ್ಧಿ ಕುರಿತು ಉಭಯ ನಾಯಕರು ಮಾತುಕತೆ ನಡೆಸಿದರು’ ಎಂದು ವಿದೇಶಾಂಗ ಇಲಾಖೆ ವಕ್ತಾರ ರಣ್‌ಧೀರ್ ಜೈಸ್ವಾಲ್‌ ಅವರು ‘ಎಕ್ಸ್‌’ನಲ್ಲಿ ತಿಳಿಸಿದ್ದರು.

ಇದಕ್ಕೂ ಮುನ್ನ ಶನಿವಾರ ತಿಮೋರ್ ಲೆಸ್ಟ್‌ಗೆ ಬಂದಿಳಿದ ಮುರ್ಮು ಅವರನ್ನು ಅಧ್ಯಕ್ಷೀಯ ನಿವಾಸದಲ್ಲಿ ಗೌರವ ವಂದನೆ ನೀಡಿ ‌ಬರಮಾಡಿಕೊಳ್ಳಲಾಯಿತು. ಭಾರತದ ರಾಷ್ಟ್ರಪತಿಯೊಬ್ಬರು ಮೊಟ್ಟ ಮೊದಲ ಬಾರಿಗೆ ಈ ದೇಶಕ್ಕೆ ಭೇಟಿ ನೀಡಿದ ಗೌರವಕ್ಕೂ ಪಾತ್ರರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT