ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

PM ಮೋದಿ ಮಹಾರಾಷ್ಟ್ರ ಭೇಟಿ ನಾಳೆ: ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

Published : 29 ಆಗಸ್ಟ್ 2024, 13:31 IST
Last Updated : 29 ಆಗಸ್ಟ್ 2024, 13:31 IST
ಫಾಲೋ ಮಾಡಿ
Comments

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ಪಾಲಘಡ್ ಮತ್ತು ಮುಂಬೈಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ (ಆ. 30) ಭೇಟಿ ನೀಡಲಿದ್ದು, ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. 

ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಪ್ರಧಾನಿ ಮೋದಿ ಅವರ ಮಹಾರಾಷ್ಟ್ರ ಭೇಟಿ ಮಹತ್ವ ಪಡೆದುಕೊಂಡಿದೆ. ಮುಂಬೈನ ಜಿಯೊ ವರ್ಲ್ಡ್‌ ಸಮ್ಮೇಳನ ಸಭಾಂಗಣದಲ್ಲಿ ಆಯೋಜನೆಗೊಂಡಿರುವ ಗ್ಲೋಬಲ್ ಫಿನ್‌ಟೆಕ್‌ ಫೆಸ್ಟ್‌– 2024 ಅನ್ನು ಬೆಳಿಗ್ಗೆ 11ಕ್ಕೆ ಉದ್ಘಾಟಿಸಲಿದ್ದಾರೆ.

ಈ ಸಮಾವೇಶವನ್ನು ಪೇಮೆಂಟ್ಸ್ ಕೌನ್ಸಿಲ್ ಆಫ್ ಇಂಡಿಯಾ, ನ್ಯಾಷನಲ್ ಪೇಮೆಂಟ್ಸ್‌ ಕಾರ್ಪೊರೇಷನ್‌ ಆಫ್ ಇಂಡಿಯಾ ಹಾಗೂ ಫಿನ್‌ಟೆಕ್‌ ಕನ್ವರ್ಜೆನ್ಸ್‌ ಕೌನ್ಸಿಲ್‌ ಜಂಟಿಯಾಗಿ ಆಯೋಜಿಸಿವೆ. ಇದರಲ್ಲಿ ಸುಮಾರು 800 ಜನ ಪಾಲ್ಗೊಳ್ಳಲಿದ್ದಾರೆ. ನೀತಿ ನಿರೂಪಕರು, ಬ್ಯಾಂಕ್‌ಗಳ ಹಿರಿಯ ಅಧಿಕಾರಿಗಳು, ಕೈಗಾರಿಕೆಗಳ ಮುಖ್ಯಸ್ಥರು ಮತ್ತು ಶಿಕ್ಷಣ ತಜ್ಞರು ಪಾಲ್ಗೊಳ್ಳಲಿದ್ದಾರೆ. ಒಟ್ಟು 350 ಗೋಷ್ಠಿಗಳು ನಡೆಯಲಿದ್ದು, ವಿದೇಶಗಳಿಂದಲೂ ಹಲವರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. 

ಮಧ್ಯಾಹ್ನ 1.30ಕ್ಕೆ ಪಾಲಗಢದಲ್ಲಿ ಸಿಡಿಸಿಒ ಯೋಜನೆಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ನಂತರ ವಾಧವಾನ್ ಬಂದರು ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಿದ್ದಾರೆ. ₹76 ಸಾವಿರ ಕೋಟಿ ವೆಚ್ಚದ ಈ ಯೋಜನೆ ದೇಶದಲ್ಲೇ ಆಳದ ನೀರಿನ ಬೃಹತ್‌ ಬಂದರು ಆಗಿರಲಿದೆ. ಅಂತರರಾಷ್ಟ್ರೀಯ ಸಮುದ್ರ ಮಾರ್ಗಕ್ಕೆ ನೇರ ಸಂಪರ್ಕ ಕಲ್ಪಿಸುವ ಬಂದರು ಇದಾಗಲಿದೆ. ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಸೌಕರ್ಯವನ್ನು ಇದು ಹೊಂದಿರಲಿದೆ ಎಂದು ವರದಿಯಾಗಿದೆ.

₹1,560 ಕೋಟಿ ವೆಚ್ಚದ 218 ಮೀನುಗಾರಿಕೆ ಯೋಜನೆಗೆ ಪ್ರಧಾನಿ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮೀನುಗಾರಿಕೆ ಕ್ಷೇತ್ರದಲ್ಲಿ ಇದು 5 ಲಕ್ಷ ಉದ್ಯೋಗ ಸೃಷ್ಟಿಸುವುದಾಗಿ ಇಲಾಖೆ ಹೇಳಿದೆ ಎಂದು ವರದಿಯಾಗಿದೆ.

₹360 ಕೋಟಿ ವೆಚ್ಚದ ವೆಸ್ಸೆಲ್ ಕಮ್ಯುನಿಕೇಷನ್ ಅಂಡ್ ಸಪೋರ್ಟ್‌ ಸಿಸ್ಟಂ ಅನ್ನು ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ. ಇದರಿಂದ 13 ಕರಾವಳಿ ತೀರ ಹೊಂದಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪ್ರಯೋಜನವಾಗಲಿದೆ. ಈ ಯೋಜನೆಯನ್ನು ಇಸ್ರೊ ಅಭಿವೃದ್ಧಿಪಡಿಸಿದೆ. ಇದರಿಂದ  ಸಮುದ್ರದಲ್ಲಿ ಸಿಲುಕಿರುವ ಮೀನುಗಾರರ ರಕ್ಷಣೆಗೆ ನೆರವಾಗಲಿದೆ ಎಂದೆನ್ನಲಾಗಿದೆ.

ಫಿಶಿಂಗ್ ಹಾರ್ಬರ್ ಮತ್ತು ಅಂತರ್ಗತ ಅಕ್ವಾಪಾರ್ಕ್‌ಗಳನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ. ಈ ಯೋಜನೆ ಹಲವು ರಾಜ್ಯಗಳಲ್ಲೂ ಅನುಷ್ಠಾನಗೊಳ್ಳಲಿದೆ. ಇದರಿಂದ ಮತ್ಸೋಧ್ಯಮ, ಕೊಯ್ಲು ನಿರ್ವಹಣೆ ಹಾಗೂ ಮೀನುಗಾರಿಕೆಯಲ್ಲಿ ತೊಡಗಿರುವವರ ಸುಸ್ಥಿರ ಬದುಕಿಗೆ ನೆರವಾಗುವ ಉದ್ದೇಶ ಹೊಂದಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT