ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಿರುಪತಿ: ಬಾಲಕಿಯ ಸಾವಿಗೆ ಕಾರಣವಾಗಿತ್ತು ಎನ್ನಲಾದ ಚಿರತೆ ಸೆರೆ

Published 14 ಆಗಸ್ಟ್ 2023, 7:57 IST
Last Updated 14 ಆಗಸ್ಟ್ 2023, 7:57 IST
ಅಕ್ಷರ ಗಾತ್ರ

ತಿರುಪತಿ: ತಿರುಪತಿಯಲ್ಲಿ ಇತ್ತೀಚೆಗೆ ಆರು ವರ್ಷ ವಯಸ್ಸಿನ ಬಾಲಕಿಯ ಸಾವಿಗೆ ಕಾರಣವಾಗಿತ್ತು ಎನ್ನಲಾಗಿರುವ ಚಿರತೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದ ಬಳಿ ಸೆರೆ ಹಿಡಿದಿದ್ದಾರೆ.

‘ಸೆರೆಗೆ ಇಡಲಾಗಿದ್ದ ಬೋನಿನಲ್ಲಿ ಚಿರತೆ ಸಿಕ್ಕಿಬಿದ್ದಿದೆ. ಅದನ್ನು ಶ್ರೀವೆಂಕಟೇಶ್ವರ ಮೃಗಾಲಯಕ್ಕೆ ಸ್ಥಳಾಂತರಿಸಲಾಗಿದೆ. ಬಾಲಕಿ ಸಾವಿಗೆ ಕಾರಣವಾದುದು ಇದೇ ಚಿರತೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಡಿಎನ್‌ಎ ಮಾದರಿ ಪರಿಶೀಲಿಸಲಾಗುತ್ತಿದೆ’ ಎಂದು ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಶಾಂತಿಪ್ರಿಯಾ ಪಾಂಡೆ ಸೋಮವಾರ ತಿಳಿಸಿದರು. 

ಚಿರತೆಯು ದಾಳಿ ನಡೆಸಿದ್ದ ಸ್ಥಳದಿಂದ ರಕ್ತ, ಲಾಲಾರಸದ ಮಾದರಿ ಜೊತೆಗೆ, ಸೆರೆಸಿಕ್ಕ ವನ್ಯಜೀವಿಯ ಮೂತ್ರ, ಕೂದಲಿನ ಮಾದರಿ ಸಂಗ್ರಹ ಮಾಡಲಾಗಿದೆ. ಸೆರೆಸಿಕ್ಕಿರುವ ಚಿರತೆಯೇ ಬಾಲಕಿ ಕೊಂದಿತ್ತು ಎಂಬುದು ದೃಢಪಟ್ಟರೆ ಅದನ್ನು ಮೃಗಾಲಯದಲ್ಲೇ ಇಡಲಾಗುವುದು ಎಂದರು.

ಇತ್ತೀಚೆಗೆ ಬಾಲಕಿ ಅಲ್ಲದೆ, ತಿಂಗಳ ಹಿಂದೆ ಬಾಲಕನೊಬ್ಬನು ಚಿರತೆಯ ದಾಳಿಯಿಂದ ಮೃತಪಟ್ಟಿದ್ದ. ಡಿಎನ್‌ಎ ಮಾದರಿಗಳ ಪರಿಶೀಲನಾ ವರದಿ ತಲುಪಲು ಒಂದು ವಾರವಾಗಲಿದೆ. ಅಲ್ಲಿಯವರೆಗೂ ಇದೇ ಚಿರತೆ ಬಾಲಕಿಯನ್ನು ಕೊಂದಿದೆ ಎಂದು ತೀರ್ಮಾನಿಸಲಾಗದು ಎಂದರು.

ಈ ಮಧ್ಯೆ, ಚಿರತೆಯ ದಾಳಿಯನ್ನು ತಡೆಯಲು ಅಲ್ಪಾವಧಿ ಮತ್ತು ದೀರ್ಘಾವಧಿಯಲ್ಲಿ ಕೈಗೊಳ್ಳಬೇಕಿರುವ ಮುಂಜಾಗ್ರತಾ ಕ್ರಮಗಳನ್ನು ಕುರಿತು ಅರಣ್ಯ ಇಲಾಖೆಯು ಶಿಫಾರಸು ಮಾಡಿದೆ.

ಇದನ್ನೂ ಓದಿ: ತಿರುಪತಿ ಬೆಟ್ಟದಲ್ಲಿ ಚಿರತೆ ದಾಳಿ; ಮಕ್ಕಳನ್ನು ಕರೆದುಕೊಂಡು ಹೋಗುವ ಸಮಯ ಬದಲು

ವನ್ಯಜೀವಿಗಳ ಚಲನವಲನದ ಮೇಲೆ ದಿನದ 24 ಗಂಟೆಯೂ ಕಣ್ಗಾವಲು ಇಡಲು ಔಟ್‌ಪೋಸ್ಟ್ ಸ್ಥಾಪಿಸುವುದು ಇದರಲ್ಲಿ ಸೇರಿದೆ. ಇದರಿಂದ ದೇಗುಲದ ಸಿಬ್ಬಂದಿ ಜೊತೆಗೆ ಪೂರಕ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು, ಭದ್ರತಾ ಸಿಬ್ಬಂದಿ ಹಾಗೂ ಯಾತ್ರಿಗಳಿಗೆ ಎಚ್ಚರಿಕೆಯ ಸಂದೇಶ ನೀಡಲು ಹಾಗೂ ರಕ್ಷಣಾ ಸಿಬ್ಬಂದಿಯು ಸಜ್ಜಾಗಿರುವಂತೆ ಸೂಚಿಸಲು ಅನುಕೂಲವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಜೆ ಯಾತ್ರಿಗಳು ಕಾಲ್ನಡಿಗೆಯಲ್ಲಿ ಹೋಗುವುದನ್ನು ನಿರ್ಬಂಧಿಸುವುದು, 20 ಮೀಟರಿಗೆ ಒಬ್ಬರಂತೆ ಭದ್ರತಾ ಸಿಬ್ಬಂದಿ ನಿಯೋಜಿಸುವುದು, ಪಶುವೈದ್ಯರು ಹಾಗೂ ಸಿಬ್ಬಂದಿ ನಿಯೋಜಿಸುವುದು ಇತರೆ ಶಿಫಾರಸುಗಳಾಗಿವೆ. ಅಲ್ಲದೆ, ದೀರ್ಘಾವಧಿಯಲ್ಲಿ ತಜ್ಞರ ಅಭಿಪ್ರಾಯಗಳನ್ನು ಪಡೆದು ವನ್ಯಜೀವಿಗಳ ಸಂಚಾರ ಮಾರ್ಗ ರೂಪಿಸಬೇಕು ಎಂದು ಇಲಾಖೆಯು ಶಿಫಾರಸು ಮಾಡಿದೆ.

ಚಿರತೆಗಳು ಸಾಮಾನ್ಯವಾಗಿ ಮಕ್ಕಳನ್ನೇ ಗುರಿಯಾಗಿಸಿ ದಾಳಿ ಮಾಡುತ್ತವೆ. ಆದರೆ, ಇಂಥ ನಿದರ್ಶನಗಳು ತಿರುಮಲದಲ್ಲಿ ಹೆಚ್ಚಾಗಿ ಸಂಭವಿಸಿಲ್ಲ ಎಂದು ಶಾಂತಿಪ್ರಿಯಾ ಪ್ರತಿಕ್ರಿಯಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT