ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಹುಲ್‌ ವಿರುದ್ಧದ ದೂರು ಮೇಲ್ನೋಟಕ್ಕೆ ಸತ್ಯ: ನ್ಯಾಯಾಲಯಕ್ಕೆ ಪೊಲೀಸರ ಮಾಹಿತಿ

ವಿ.ಡಿ.ಸಾವರ್ಕರ್‌ ಅವಹೇಳನ ಆರೋಪ: ನ್ಯಾಯಾಲಯಕ್ಕೆ ಪುಣೆ ಪೊಲೀಸರ ಮಾಹಿತಿ
Published 28 ಮೇ 2024, 23:30 IST
Last Updated 28 ಮೇ 2024, 23:30 IST
ಅಕ್ಷರ ಗಾತ್ರ

ಪುಣೆ: ‘ಲಂಡನ್‌ನಲ್ಲಿ ಕಳೆದ ವರ್ಷ ಮಾಡಿದ ಭಾಷಣದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಹಿಂದುತ್ವವಾದಿ ವಿ.ಡಿ.ಸಾವರ್ಕರ್ ಅವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಸಾವರ್ಕರ್ ಮೊಮ್ಮಗ ನೀಡಿರುವ ದೂರಿನಲ್ಲಿ ಸತ್ಯಾಂಶ ಇದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ’ ಎಂದು ಪುಣೆ ಪೊಲೀಸರು ಇಲ್ಲಿನ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

‘ಜ್ಯುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ (ಪ್ರಥಮ ದರ್ಜೆ) ನ್ಯಾಯಾಲಯದ ನ್ಯಾಯಾಧೀಶೆ ಅಕ್ಷಿ ಜೈನ್‌ ಅವರಿರುವ ನ್ಯಾಯಾಲಯಕ್ಕೆ ಪೊಲೀಸರು ಸೋಮವಾರ ಸಲ್ಲಿಸಿರುವ ತನಿಖಾ ವರದಿಯಲ್ಲಿ ಈ ಮಾತು ಹೇಳಿದ್ದಾರೆ’ ಎಂದು ದೂರುದಾರ ಸಾತ್ಯಕಿ ಅಶೋಕ್‌ ಸಾವರ್ಕರ್ ಪರ ವಕೀಲ ಸಂಗ್ರಾಮ್ ಕೊಲ್ಹಟ್ಕರ್ ಹೇಳಿದ್ದಾರೆ.

‘ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ರಾಹುಲ್‌ ಗಾಂಧಿ ಅವರಿಗೆ ನ್ಯಾಯಾಲಯ ನೋಟಿಸ್‌ ನೀಡಬಹುದು’ ಎಂದು ಅವರು ತಿಳಿಸಿದ್ದಾರೆ.

ಸಾತ್ಯಕಿ ಅವರು ವಿ.ಡಿ.ಸಾವರ್ಕರ್‌ ಅವರ ಮೊಮ್ಮಗ. ಸಾತ್ಯಕಿ ಅವರು ಕಳೆದ ವರ್ಷ ಏಪ್ರಿಲ್‌ನಲ್ಲಿ ಇಲ್ಲಿನ ನ್ಯಾಯಾಲಯದಲ್ಲಿ ರಾಹುಲ್‌ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಸಾತ್ಯಕಿ ಅವರು ಸಲ್ಲಿಸಿರುವ ಸಾಕ್ಷ್ಯಗಳನ್ನು ಪರಿಶೀಲಿಸಿ, ಮೇ 27ರ ಒಳಗಾಗಿ ವರದಿ ಸಲ್ಲಿಸುವಂತೆ ನ್ಯಾಯಾಲಯವು ವಿಶ್ರಮಬಾಗ್ ಠಾಣೆ ಪೊಲೀಸರಿಗೆ ನಿರ್ದೇಶನ ನೀಡಿತ್ತು.

‘ಸಾವರ್ಕರ್‌ ಹಾಗೂ ಅವರ 5–6 ಜನ ಸ್ನೇಹಿತರು ಒಬ್ಬ ಮುಸ್ಲಿಂ ವ್ಯಕ್ತಿಯನ್ನು ಥಳಿಸಿದ್ದರು. ಈ ಕುರಿತು ಸಾವರ್ಕರ್ ಸಂತಸ ವ್ಯಕ್ತಪಡಿಸಿದ್ದರು. ಈ ವಿಷಯವನ್ನು ಸ್ವತಃ ಸಾವರ್ಕರ್‌ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ ಎಂಬುದಾಗಿ ಕಳೆದ ವರ್ಷ ಮಾರ್ಚ್‌ನಲ್ಲಿ ಲಂಡನ್‌ನಲ್ಲಿ ಮಾಡಿದ ಭಾಷಣದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದರು’ ಎಂದು ಸಾತ್ಯಕಿ ದೂರು ನೀಡಿದ್ದರು.

‘ಇಂತಹ ಘಟನೆ ನಡೆದಿಲ್ಲ ಹಾಗೂ ಈ ಕುರಿತು ವಿ.ಡಿ.ಸಾವರ್ಕರ್‌ ಅವರು ಎಲ್ಲಿಯೂ ಬರೆದುಕೊಂಡಿಲ್ಲ’ ಎಂದಿರುವ ಸಾತ್ಯಕಿ, ‘ರಾಹುಲ್‌ ಗಾಂಧಿ ಅವರ ಆರೋಪಗಳು ಕಪೋಲಕಲ್ಪಿತ, ಸುಳ್ಳು ಹಾಗೂ ದುರುದ್ದೇಶಪೂರಿತ’ ಎಂದೂ ದೂರಿನಲ್ಲಿ ಹೇಳಿದ್ದಾರೆ.

ಈ ಕುರಿತು ತನಿಖೆ ನಡೆಸಿದ್ದ ವಿಶ್ರಮಬಾಗ್ ಪೊಲೀಸರು,‘ವಿ.ಡಿ.ಸಾವರ್ಕರ್ ತಮ್ಮ ಯಾವ ಪುಸ್ತಕಗಳಲ್ಲಿಯೂ ಇಂತಹ ಘಟನೆ ಬಗ್ಗೆ ಬರೆದಿಲ್ಲ ಎಂಬುದು ತನಿಖೆಯಿಂದ ಗೊತ್ತಾಗಿದೆ. ಆದಾಗ್ಯೂ, ರಾಹುಲ್‌ ಗಾಂಧಿ ಅವರು ಲಂಡನ್‌ನಲ್ಲಿ ಮಾಡಿದ ಭಾಷಣದಲ್ಲಿ ಸಾವರ್ಕರ್ ಕುರಿತು ಇಂತಹ ಹೇಳಿಕೆಗಳನ್ನು ಉಲ್ಲೇಖಿಸಿದ್ದರು ಎಂಬುದಾಗಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ’ ಎಂದು ವಕೀಲ ಕೊಲ್ಹಟ್ಕರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT