ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗಿ ನಾಡಲ್ಲಿ ಭರ್ಜರಿ ರೋಡ್ ಶೋ: ಸಕ್ರಿಯ ರಾಜಕೀಯಕ್ಕೆ ಅಡಿಯಿಟ್ಟ ಪ್ರಿಯಾಂಕಾ

Last Updated 8 ಫೆಬ್ರುವರಿ 2022, 1:26 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲಿ ಸೋಮವಾರ ಭರ್ಜರಿ ರೋಡ್‌ ಶೋ ಮೂಲಕ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಕ್ರಿಯ ರಾಜಕೀಯ ಜೀವನಕ್ಕೆ ಅಡಿಯಿಟ್ಟರು.

ಕಾಂಗ್ರೆಸ್‌ ಅಧ್ಯಕ್ಷ ಮತ್ತು ಸಹೋದರ ರಾಹುಲ್‌ ಗಾಂಧಿ, ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಉತ್ತರ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ರಾಜ್‌ ಬಬ್ಬರ್‌ ಅವರು ಪ್ರಿಯಾಂಕಾ ಅವರಿಗೆ ಸಾಥ್‌ ನೀಡಿದರು.

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಉತ್ತರ ಪ್ರದೇಶದ ಪೂರ್ವ ಭಾಗದ ಉಸ್ತುವಾರಿ ಹೊಣೆ ಹೊತ್ತ ನಂತರ ಇದೇ ಮೊದಲ ಬಾರಿಗೆ ರಾಜ್ಯಕ್ಕೆ ಬಂದ ಗಾಂಧಿ ಕುಟುಂಬದ ಮತ್ತೊಂದು ಕುಡಿಗೆ ಅಭೂತಪೂರ್ವ ಸ್ವಾಗತ ನೀಡಲಾಯಿತು.

ವಿಮಾನ ನಿಲ್ದಾಣದಿಂದ ಕಾಂಗ್ರೆಸ್‌ ಕಚೇರಿವರೆಗಿನ 15 ಕಿ.ಮೀ ರಸ್ತೆಯ ಇಕ್ಕೆಲಗಳು ಸಾವಿರಾರು ಕಾಂಗ್ರೆಸ್‌ ಕಾರ್ಯಕರ್ತರು, ಬೆಂಗಲಿಗರಿಂದ ತುಂಬಿದ್ದವು. ಮೊದಲ ಬಾರಿಗೆ ಕಾಂಗ್ರೆಸ್‌ ಪಾಳಯಲ್ಲಿ ಹಬ್ಬದ ವಾತಾವರಣ ಕಂಡು ಬಂತು.

ರೋಡ್‌ ಶೋಗಾಗಿ ವಿನ್ಯಾಸ ಮಾಡಲಾದ ಬಸ್‌ ಏರಿದ ಪ್ರಿಯಾಂಕಾ ಗಾಂಧಿ ಅವರು ಜನರತ್ತ ಕೈಬೀಸಿದಾಗ ಹರ್ಷೋದ್ಘಾರ ಮುಗಿಲು ಮುಟ್ಟಿತು. ‘ಜೈ ಪ್ರಿಯಾಂಕಾ’, ‘ಜೈ ಜ್ಯೂನಿಯರ್‌ ಇಂದಿರಾ’ ಎಂಬ ಜಯಘೋಷಗಳು ಮೊಳಗಿದವು.

ಪ್ರಿಯಾಂಕಾ ಅವರ ಹಣೆಗೆ ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತರು ಕಪ್ಪು ತಿಲಕವಿಟ್ಟು, ಆರತಿ ಎತ್ತಿ ಸ್ವಾಗತಿಸಿದರು. ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ದಾರಿಯುದ್ದಕ್ಕೂ ಸ್ವಾಗತ ಕೋರುವ ಪೋಸ್ಟರ್‌ಗಳು ರಾರಾಜಿಸುತ್ತಿದ್ದವು. ಕಾರ್ಯಕರ್ತರು ರಫೇಲ್‌ ಯುದ್ಧ ವಿಮಾನದ ಪ್ರತಿಕೃತಿಗಳನ್ನು ಪ್ರದರ್ಶಿಸಿದರು. ಕೆಲವರು ಪ್ರತಿಕೃತಿಗಳನ್ನು ರಾಹುಲ್‌ ಮತ್ತು ಪ್ರಿಯಾಂಕಾ ಕೈಗೂ ನೀಡಿದರು.

ಮಾರ್ಗದಲ್ಲಿ ಇಳಿಬಿದ್ದಿದ್ದ ವಿದ್ಯುತ್‌ ತಂತಿಗಳಿಂದ ತಪ್ಪಿಸಿಕೊಳ್ಳಲು ಬಸ್‌ ಇಳಿದ ಕಾಂಗ್ರೆಸ್‌ ನಾಯಕರು ಸಣ್ಣ ವಾಹನ ಏರಿ ರೋಡ್‌ ಶೋ ಮುಂದುವರಿಸಿದರು. ಮಾರ್ಗಮಧ್ಯೆ ಕಾರ್ಯಕರ್ತರ ಒತ್ತಾಸೆಯ ಮೇರೆಗೆ ವಾಹನದಿಂದ ಇಳಿದ ನಾಯಕರು ಲಖನೌನ ಪ್ರಸಿದ್ಧ ಶರ್ಮಾ ಚಹಾ ಅಂಗಡಿಯಲ್ಲಿ ಚಹಾ ಸವಿದರು.

ಗೆಲ್ಲಲು ಪ್ರಿಯಾಂಕಾ ಕಳಿಸಿರುವೆ: ಲೋಕಸಭಾ ಚುನಾವಣೆಯಲ್ಲಿ ಮಾತ್ರವಲ್ಲ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿಯೂ ಗೆಲುವು ಸಾಧಿಸಲು ಪ್ರಿಯಾಂಕಾ ಗಾಂಧಿ ಮತ್ತು ಜೋತಿರಾದಿತ್ಯ ಸಿಂಧಿಯಾ ಅವರನ್ನು ಉತ್ತರ ಪ್ರದೇಶಕ್ಕೆ ಕಳಿಸಲಾಗಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ.

ಹಣೆಯಲ್ಲಿ ಕಪ್ಪು ತಿಲಕ: ಕಾಂಗ್ರೆಸ್‌ ಪಕ್ಷದ ಹೊಸ ಆಕರ್ಷಣೆಯಾಗಿರುವ ಪ್ರಿಯಾಂಕಾ ಗಾಂಧಿ ಅವರ ರಾಜಕೀಯ ಪ್ರವೇಶ ಹಲವು ಮಿಥ್ಯೆಗಳನ್ನು ಹೊಡೆದು ಹಾಕಿದರೂ ಹೊಸ ಮಿಥ್ಯೆಗಳನ್ನು ಹುಟ್ಟು ಹಾಕಿದೆ.

ರೋಡ್‌ ಶೋ ನಡೆಸಿದ ಪ್ರಿಯಾಂಕಾ ಹಣೆಯ ಮೇಲೆ ಕಾಂಗ್ರೆಸ್‌ ಕಾರ್ಯಕರ್ತರು ಇಟ್ಟ ಕಪ್ಪು ತಿಲಕ ರಾರಾಜಿಸುತ್ತಿತ್ತು. ದುಷ್ಟಶಕ್ತಿಗಳಿಂದ ರಕ್ಷಿಸಿಕೊಳ್ಳಲು ಕಪ್ಪು ತಿಲಕ ಇಡುವ ಪದ್ಧತಿ ಇದೆ.

ಪ್ರಿಯಾಂಕಾ ಭೇಟಿಯ ಹಿನ್ನೆಲೆಯಲ್ಲಿ ಇಲ್ಲಿಯ ಕಾಂಗ್ರೆಸ್‌ ಕಚೇರಿ ಎರಡು ದಶಕಗಳ ಬಳಿಕ ಸುಣ್ಣ, ಬಣ್ಣ ಕಂಡಿದೆ.ಉತ್ತರ ಪ್ರದೇಶದ ಕಾಂಗ್ರೆಸ್‌ ಕಚೇರಿಗೆ ಸುಣ್ಣ, ಬಣ್ಣ ಬಳಿದರೆ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷರು ಪದವಿ ಕಳೆದುಕೊಳ್ಳುತ್ತಾರೆ ಎಂಬ ನಂಬಿಕೆ ಕಾಂಗ್ರೆಸ್‌ ವಲಯದಲ್ಲಿ ಬೇರೂರಿತ್ತು.

‘ಇಂದಿರಾ ಗಾಂಧಿ ಮರಳಿ ಬಂದಂತಾಗಿದೆ’

‘ಪ್ರಿಯಾಂಕಾ ಗಾಂಧಿ ಅವರನ್ನು ನೋಡಿದಾಕ್ಷಣ ಮಾಜಿ ಪ್ರಧಾನಿ ಮತ್ತು ಆಕೆಯ ಅಜ್ಜಿ ಇಂದಿರಾ ಗಾಂಧಿ ನೆನಪಾದರು. ಇಂದಿರಾ ಗಾಂಧಿ ಮರಳಿ ಬಂದಂತೆ ಭಾಸವಾಯಿತು’ ಎಂದು ಉತ್ತರ ಪ್ರದೇಶದ ಕಾಂಗ್ರೆಸ್‌ ಕಾರ್ಯಕರ್ತರು, ಬೆಂಬಲಿಗರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

‘ಅಜ್ಜಿಯ ಪಡಿಯಚ್ಚಿನಂತಿರುವ ಪ್ರಿಯಾಂಕಾ ಉತ್ತರ ಪ್ರದೇಶದ ಮುಖ್ಯಮಂತ್ರಿ ಆಗಬೇಕು ಎನ್ನುವುದು ನಮ್ಮೆಲ್ಲರ ಬಯಕೆ. ರಾಹುಲ್‌ ಗಾಂಧಿ ಪ್ರಧಾನಿಯಾಗಲಿ ಎನ್ನುವುದು ನಮ್ಮೆಲ್ಲರ ಹಾರೈಕೆ’ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಹೇಳಿದರು.

ರಾಹುಲ್‌ ಗಾಂಧಿ ಅವರ ರಾಜಕೀಯ ಜೀವನ ಅಂತ್ಯ ಇಂದಿನಿಂದ ಆರಂಭವಾಗಿದೆ ಎಂದು ಬಿಜೆಪಿಯ ಜನಪ್ರತಿನಿಧಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶದೊಂದಿಗೆ ರಾಹುಲ್‌ ರಾಜಕೀಯ ಜೀವನ ಅಂತ್ಯವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿಗೆ ಬಂದು ನಮ್ಮ ಶಕ್ತಿ ನೋಡಿ: ಸಿಂಧಿಯಾ

‘ಆವೋ ದೇಖೆ ಜರಾ, ಕಿಸ್ಮೇ ಕಿತ್ನಾ ಹೈ ಧಮ್‌. ಜಮ್ಕೆ ರಖ್ನಾ ಕದಂ ಮೇರೆ ಸಾಥಿಯಾ...’ (ಇಲ್ಲಿಗೆ ಬಂದು ಸ್ವಲ್ಪ ನೋಡಿ, ಯಾರಲ್ಲಿ ಎಷ್ಟು ಶಕ್ತಿ ಇದೆ ಎಂದು. ಗಟ್ಟಿಯಾಗಿ ಹೆಜ್ಜೆ ಇಡಿ ಗೆಳೆಯರೇ) ಎಂದು ಕಾಂಗ್ರೆಸ್‌ ಸಂಸದ ಜೋತಿರಾದಿತ್ಯ ಸಿಂಧಿಯಾ ಟ್ವೀಟ್‌ ಮಾಡಿದ್ದಾರೆ.

ಉತ್ತರ ಪ್ರದೇಶದಲ್ಲಿ ದೊರೆತ ಅಭೂತಪೂರ್ವ ಸ್ವಾಗತ ಕಂಡು ಪುಳಕಿತರಾಗಿರುವ ಅವರು ತಮ್ಮ ಆನಂದವನ್ನು ಅಭಿವ್ಯಕ್ತಿಪಡಿಸಲು 1981ರಲ್ಲಿ ತೆರೆ ಕಂಡ ಸಂಜಯ್‌ ದತ್‌ ಅಭಿನಯದ ಮೊದಲ ಚಿತ್ರ ‘ರಾಕಿ’ಯ ಹಾಡು ಬಳಸಿಕೊಂಡಿದ್ದಾರೆ.

ದೇಶದಲ್ಲಿ ಬದಲಾವಣೆಯ ಗಾಳಿ ಬೀಸ ತೊಡಗಿದೆ. ಕೇಂದ್ರದಲ್ಲಿ ಈ ಸರ್ಕಾರ ಹೋಗಿ ಹೊಸ ಸರ್ಕಾರ ಬರುವುದು ಈ ಐತಿಹಾಸಿಕ ರೋಡ್‌ ಶೋ ನಂತರ ಖಚಿತವಾಗಿದೆ ಎಂದು ಹೇಳಿದ್ದಾರೆ.

ಪ್ರಿಯಾಂಕಾ ಟ್ವಿಟರ್‌ ಖಾತೆ ತೆರೆದ ಒಂದೇ ದಿನದಲ್ಲಿ ಲಕ್ಷ ಫಾಲೋವರ್ಸ್‌

ಉತ್ತರ ಪ್ರದೇಶ ಭೇಟಿಗೂ ಕೆಲವು ತಾಸುಗಳ ಮೊದಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಖಾತೆ ತೆರೆದಿದ್ದಾರೆ.

ಪ್ರಿಯಾಂಕಾ ಟ್ವಿಟರ್‌ ಖಾತೆ @priyankagandhi ತೆರೆದ ಬಗ್ಗೆ ಸೋಮವಾರ ಮಧ್ಯಾಹ್ನ ಅಧಿಕೃತವಾಗಿ ಘೋಷಿಸಲಾಯಿತು.ಖಾತೆ ತೆರೆದು ಮೊದಲ ಒಂದು ಗಂಟೆಯೊಳಗೆ 30 ಸಾವಿರ ಜನ ಅವರನ್ನು ಫಾಲೋ ಮಾಡುತ್ತಿದ್ದಾರೆ. ಸೋಮವಾರ ಸಂಜೆಯವರೆಗೆ ಆ ಸಂಖ್ಯೆ 91 ಸಾವಿರ ದಾಟಿದೆ.

ಇದುವರೆಗೂ ಪ್ರಿಯಾಂಕಾ ಗಾಂಧಿ ಅವರು ಯಾವುದೇ ಟ್ವೀಟ್‌ ಮಾಡಿಲ್ಲ.ಪ್ರಿಯಾಂಕಾ ತನ್ನ ಸಹೋದರ ಮತ್ತು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಕಾಂಗ್ರೆಸ್‌ ಪಕ್ಷದ ಅಧಿಕೃತ ಖಾತೆ ಸೇರಿ ಏಳು ಜನರನ್ನು ಫಾಲೋ ಮಾಡುತ್ತಿದ್ದಾರೆ.

ಕಾಂಗ್ರೆಸ್‌ ನಾಯಕರಾದ ಅಹ್ಮದ್‌ ಪಟೇಲ್‌, ಸಚಿನ್‌ ಪೈಲಟ್‌, ಅಶೋಕ್‌ ಗೆಹ್ಲೋಟ್‌, ಜ್ಯೋತಿರಾದಿತ್ಯ ಸಿಂಧಿಯಾ, ರಣದೀಪ್‌ ಸುರ್ಜೇವಾಲಾ ಈ ಪಟ್ಟಿಯಲ್ಲಿದ್ದಾರೆ.

ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಚರ್ಚಿತವಾದ ವಿಷಯಗಳಲ್ಲಿ (ಟ್ರೆಂಡ್‌) ಪ್ರಿಯಾಂಕಾ ಮೊದಲ ಸ್ಥಾನದಲ್ಲಿದ್ದಾರೆ.

‘ದೇಶದಲ್ಲಿ ಹೊಸ ಬಗೆಯ ರಾಜಕೀಯ ಆರಂಭಿಸೋಣ’ ಎಂದು ಅವರು ಭಾನುವಾರ ಕಾಂಗ್ರೆಸ್‌ ಕಾರ್ಯಕರ್ತರಿಗೆ ಆಡಿಯೊ ಸಂದೇಶ ಕಳಿಸಿದ್ದರು.

ನನ್ನ ಪತ್ನಿಯ ಸುರಕ್ಷತೆ ಜನರ ಜವಾಬ್ದಾರಿ: ವಾದ್ರಾ

ನವದೆಹಲಿ: ‘ದೇಶ ಮತ್ತು ಸಮಾಜ ಸೇವೆಗಾಗಿ ನನ್ನ ಪತ್ನಿ ಪ್ರಿಯಾಂಕಾ ಗಾಂಧಿಯನ್ನು ಜನರ ಮಡಿಲಿಗೆ ಹಾಕಿದ್ದೇನೆ. ಆಕೆಯನ್ನು ಸುರಕ್ಷಿತವಾಗಿ ನೋಡಿಕೊಳ್ಳಿ’ ಎಂದು ರಾಬರ್ಟ್‌ ವಾದ್ರಾ ಉತ್ತರ ಪ್ರದೇಶ ಜನರಿಗೆ ಮನವಿ ಮಾಡಿದ್ದಾರೆ.

‘ದೇಶದಲ್ಲಿ ಅತ್ಯಂತ ಆತಂಕಕಾರಿ ರಾಜಕೀಯ ವಾತಾವರಣ ಮನೆ ಮಾಡಿದೆ. ಆದರೆ, ದೇಶ ಮತ್ತು ಜನರ ಸೇವೆ ಮಾಡುವಾಗ ಇದನ್ನೆಲ್ಲ ಎದುರಿಸುವುದು ಅನಿವಾರ್ಯ’ ಎಂದು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

‘ಪ್ರಿಯಾಂಕಾ ನನ್ನ ಅತ್ಯುತ್ತಮ ಗೆಳತಿ ಮತ್ತು ಪತ್ನಿ. ಅಷ್ಟೇ ಅಲ್ಲ ಎರಡು ಮಕ್ಕಳ ತಾಯಿ. ಆಕೆಯನ್ನು ಸುರಕ್ಷತೆಯಿಂದ ಕಾಪಾಡುವ ಹೊಣೆ ನಿಮ್ಮದು’ ಎಂದು ವಾದ್ರಾ ಮನವಿ ಮಾಡಿದ್ದಾರೆ

‘ಜನಸೇವೆಯ ಮಹತ್ತರ ಉದ್ದೇಶದಿಂದ ಕೈಗೊಂಡ ನಿನ್ನ ಹೊಸ ಪಯಣ ಸುಖಕರವಾಗಿರಲಿ’ ಎಂದು ರಾಬರ್ಟ್‌ ವಾದ್ರಾ ಅವರು ತಮ್ಮ ಪತ್ನಿ ಪ್ರಿಯಾಂಕಾ ಗಾಂಧಿ ಅವರಿಗೆ ಶುಭಾಶಯ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT