ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರಕಾರ್ಮಿಕರಿಗೆ ಹೂವು ಸುರಿದು, ಚಪ್ಪಾಳೆ ತಟ್ಟಿದರು: ನೋಟಿನ ಹಾರ ಹಾಕಿ ಕೈಮುಗಿದರು

Last Updated 1 ಏಪ್ರಿಲ್ 2020, 5:23 IST
ಅಕ್ಷರ ಗಾತ್ರ

ಚಂಡೀಗಢ: ಕಸ ವಿಲೇವಾರಿಗೆ ಬರುವ ಪೌರಕಾರ್ಮಿಕರು ಹಾಗೂ ಹಸಿ–ಒಣ ಕಸವನ್ನು ಮಿಶ್ರಣ ಮಾಡಿ ಹಾಕುವ ನಾಗರಿಕರಿಗೂ ಜಟಾಪಟಿ ಆಗಾಗ್ಗೆ ನಡೆಯುತ್ತಲೇ ಇರುತ್ತದೆ. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಸಾರ್ವಜನಿಕರೆಲ್ಲರೂ ಮನೆಯಿಂದ ಹೊರ ಬರಬಾರದು ಎಂದು ಆದೇಶ ಪಾಲನೆಯಲ್ಲಿದ್ದರೆ, ಯಾವುದೇ ರೋಗ ಹರಡದಂತೆ ರಸ್ತೆಗಳನ್ನು, ಇಡೀ ಊರು–ಕೇರಿ–ನಗರಗಳನ್ನು ಸ್ವಚ್ಛವಾಗಿಡುವ ಕಾಯಕದಲ್ಲಿ ಪೌರಕಾರ್ಮಿಕರು ಮುಂದುವರಿದ್ದಾರೆ. ಅದಕ್ಕಾಗಿಯೇ ಪಂಜಾಬ್‌ನ ಜನರು ಅವರ ಮೇಲೆ ಹೂವು ಸುರಿದು, ನೋಟಿನ ಹಾರ ಹಾಕಿ ಧನ್ಯವಾದ ಅರ್ಪಿಸಿದ್ದಾರೆ.

ಪಟಿಯಾಲಾ ಜಿಲ್ಲೆಯ ನಭಾ ಪ್ರದೇಶದಲ್ಲಿ ಪೌರಕಾರ್ಮಿಕರು ರಸ್ತೆಗಿಳಿಯುತ್ತಿದ್ದಂತೆ ಅಲ್ಲಿನ ಜನರು ಮನೆಯ ಮಹಡಿಗಳಲ್ಲಿ ನಿಂತು ಪುಷ್ಪವೃಷ್ಟಿ ಮಾಡಿದ್ದಾರೆ. ನಿಮ್ಮ ಕಾಯಕಕ್ಕೆ ನಮ್ಮ ಅಭಿಮಾನ ಚಪ್ಪಾಳೆ ಎಂದು ಕರತಾಡನ ನಡೆಸಿದ್ದಾರೆ.

ಪಂಜಾಬ್‌ನ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್ ಸಿಂಗ್‌ ಟ್ವೀಟ್‌ ಮಾಡಿರುವ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಹೊಗಳಿಕೆ ಪಾತ್ರವಾಗಿದೆ. 'ಪೌರಕಾರ್ಮಿಕರ ಮೇಲೆ ನಭಾದ ಜನರು ತೋರಿರುವ ಪ್ರೀತಿ ಮತ್ತು ಚಪ್ಪಾಳೆ ಕಂಡು ಉಲ್ಲಸಿತನಾದೆ. ಪ್ರತಿಕೂಲ ಪರಿಸ್ಥಿತಿ ಹೇಗೆ ನಮ್ಮಲ್ಲಿನ ಒಳಿತನ್ನು ಹೊರ ತರುತ್ತಿದೆ ಎಂಬುದನ್ನು ಗಮನಿಸಿದೆ. ಕೋವಿಡ್‌19 ವಿರುದ್ಧದ ಸಮರದಲ್ಲಿ ನಮ್ಮ ಮುಂದಾಳುಗಳಿಗೆ ಪ್ರೋತ್ಸಾಹಿಸುವ ಕಾರ್ಯ ಮುಂದುವರಿಯಲಿ' ಎಂದು ಅವರು ವಿಡಿಯೊದೊಂದಿಗೆ ಪ್ರಕಟಿಸಿದ್ದಾರೆ.

ಕಸ ಸಂಗ್ರಹಿಸಿಕೊಳ್ಳುವ ಕೈಗಾಡಿಯನ್ನು ಎಳೆಯುತ್ತ ನಡೆಯುತ್ತಿದ್ದ ಪೌರಕಾರ್ಮಿಕರಿಗೆ ಇದನ್ನೆಲ್ಲ ಕಂಡು ಬಹುದೊಡ್ಡ ಅಚ್ಚರಿ. ಏನಾಗುತ್ತಿದೆ ಎಂದು ಕೆಲ ಕ್ಷಣ ಅತ್ತಿತ್ತ ತಿರುಗಿನ ಅವರು, ಜನರು ಅರ್ಪಿಸಿದ ಧನ್ಯವಾದಕ್ಕೆ ಮೂಕರಾದರು. 'ನನ್ನ ಕಾಯಕ ನಾನು ಮಾಡುತ್ತಿರುವ..' ಎಂಬಂತೆ ಮುಂದೆ ಸಾಗುತ್ತಿದ್ದ ಅವರನ್ನು ಮತ್ತೆ ತಡೆದದ್ದು ನೋಟುಗಳ ಹಾರದ ಪ್ರಶಂಸೆ. ಕೆಲವರು ನೋಟುಗಳನ್ನು ಪೋಣಿಸಿ ಮಾಡಲಾದ ಹಾರವನ್ನು ಪೌರಕಾರ್ಮಿಕನ ಕೊರಳಿಗೆ ಹಾಕಿ 'ನಮಗಾಗಿ ಶ್ರಮಿಸುತ್ತಿರುವ ನಿಮಗೆ ನಮ್ಮ ನಮಸ್ಕಾರ' ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT