ನವದೆಹಲಿ: ಕೋಲ್ಕತ್ತದ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿರುವ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ– ಕೊಲೆ ಪ್ರಕರಣದ ಸಾಕ್ಷ್ಯಗಳನ್ನು ತಿರುಚಲಾಗಿದೆ ಎಂದು ಹಿರಿಯ ವೈದ್ಯರು ಸೋಮವಾರ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ವೈದ್ಯರು, ತಮ್ಮ ಮತ್ತು ಪಶ್ಚಿಮ ಬಂಗಾಳ ಸರ್ಕಾರದ ನಡುವಿನ ಮಾತುಕತೆಯನ್ನು ನೇರ ಪ್ರಸಾರ ಮಾಡಬೇಕೆಂಬ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ.
'ನಾವು ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ–ಕೊಲೆ ಪ್ರಕರಣವನ್ನು ಘೋರ ಅಪರಾಧವೆಂದು ಖಂಡಿಸುತ್ತೇವೆ. ಈ ಪ್ರಕರಣದಿಂದ ರಾಜ್ಯ ಸರ್ಕಾರ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ನಡುವಿನ ಸಂಬಂಧ ಹದಗೆಡುವಂತಾಗಿದೆ’ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.
ಅತ್ಯಾಚಾರ– ಕೊಲೆ ಪ್ರಕರಣ ಸಂಬಂಧ ಸಂತ್ರಸ್ತೆ ಕುಟುಂಬಕ್ಕೆ ನ್ಯಾಯ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಿರಿಯ ವೈದ್ಯರು ಆರೋಗ್ಯ ಇಲಾಖೆಯ ಕೇಂದ್ರ ಕಚೇರಿ ಸ್ವಾಸ್ಥ್ಯ ಭವನದ ಎದುರು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಇಂದು ತಮ್ಮ ನಿವಾಸದಲ್ಲಿ ಮಾತುಕತೆಗೆ ಆಗಮಿಸುವಂತೆ ಕಿರಿಯ ವೈದ್ಯರ ನಿಯೋಗಕ್ಕೆ ಸಿಎಂ ಮಮತಾ ಬ್ಯಾನರ್ಜಿ ಆಹ್ವಾನ ನೀಡಿದ್ದು, ಪ್ರತಿಭಟನಾಕಾರರು ಮಾತುಕತೆಗೆ ಒಪ್ಪಿಗೆ ಸೂಚಿಸಿದ್ದಾರೆ.