ನವದೆಹಲಿ: ಭಾರತ ಮತ್ತು ಚೀನಾ ನಡುವೆ 2020ರಲ್ಲಿ ಲಡಾಖ್ನಲ್ಲಿ ನಡೆದ ಸೇನಾ ತಿಕ್ಕಾಟದ ಬಗ್ಗೆ, ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಅವರ ಅಪ್ರಕಟಿತ ಪುಸ್ತಕದಲ್ಲಿನ ಅಂಶಗಳ ಕುರಿತು ನಿಯತಕಾಲಿಕವೊಂದರಲ್ಲಿ ಪ್ರಕಟವಾಗಿರುವ ಲೇಖನವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ಸೋಮವಾರ ಪ್ರಸ್ತಾಪಿಸಿದ್ದು ಭಾರಿ ಗದ್ದಲ ಎಬ್ಬಿಸಿತು.

ಈ ವೇಳೆ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ತೀವ್ರ ವಾಕ್ಸಮರ ನಡೆದು, ಕೋಲಾಹಲಕ್ಕೆ ಕಾರಣವಾಯಿತು. ರಾಹುಲ್ ಅವರು ಅಪ್ರಕಟಿತ ಪುಸ್ತಕದ ಕುರಿತು ಪ್ರಸ್ತಾಪಿಸಿ ಸದನದ ದಾರಿ ತಪ್ಪಿಸುತ್ತಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಸೇರಿದಂತೆ ಬಿಜೆಪಿಯ ಹಲವು ಸದಸ್ಯರು ಆರೋಪಿಸಿದರು.

ರಾಷ್ಟ್ರಪತಿಯವರ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಲು ಮುಂದಾದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ‘ನನಗೂ ಮುನ್ನ ಮಾತನಾಡಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಕಾಂಗ್ರೆಸ್ನ ರಾಷ್ಟ್ರೀಯತೆ ಕುರಿತು ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಕುರಿತು ಮೊದಲು ಪ್ರತಿಕ್ರಿಯಿಸಲು ಬಯಸುತ್ತೇನೆ’ ಎಂದು ಹೇಳಿ, ಜನರಲ್ ನರವಣೆ ಅವರ ಪುಸ್ತಕವನ್ನು ಉಲ್ಲೇಖಿಸಿದರು.

ಸೇನಾ ತಿಕ್ಕಾಟವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ನಿಭಾಯಿಸಿದ್ದ ರೀತಿಯ ಬಗ್ಗೆ ಈ ಅಪ್ರಕಟಿತ ಪುಸ್ತಕದಲ್ಲಿ ಪ್ರಶ್ನೆಗಳನ್ನು ಎತ್ತಲಾಗಿದೆ ಎಂದು ಗೊತ್ತಾಗಿದೆ.

ರಕ್ಷಣಾ ಸಚಿವರಿಂದ ಆಕ್ಷೇಪ:

ಇದಕ್ಕೆ ಕೂಡಲೇ ಆಕ್ಷೇಪ ವ್ಯಕ್ತಪಡಿಸಿದ ರಕ್ಷಣಾ ಸಚಿವ, ‘ಅಪ್ರಕಟಿತ ಪುಸ್ತಕ ಮತ್ತು ಅದರ ಸಾರಾಂಶವನ್ನು ಉಲ್ಲೇಖಿಸುವುದು ಸದನದ ನಿಯಮಗಳಿಗೆ ವಿರುದ್ಧವಾಗಿದೆ’ ಎಂದರು.

2020ರ ಮೇ 5ರಂದು ‘ಪಾಂಗಾಂಗ್’ ಸರೋವರ ಪ್ರದೇಶದಲ್ಲಿ ಭಾರತ– ಚೀನಾ ಸೈನಿಕರ ನಡುವೆ ಹಿಂಸಾತ್ಮಕ ಘರ್ಷಣೆ ಭುಗಿಲೆದ್ದಿತು. ಜನರಲ್ ನರವಣೆ ಅವರು ತಮ್ಮ ಆತ್ಮಚರಿತ್ರೆ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ಯಲ್ಲಿ (ಅಪ್ರಕಟಿತ) ಈ ಕುರಿತು ಉಲ್ಲೇಖಿಸಿದ್ದಾರೆ. ಈ ಪುಸ್ತಕದ ಕುರಿತ ಒಂದು ಲೇಖನವು ಪ್ರಸಿದ್ಧ ನಿಯತಕಾಲಿಕದಲ್ಲಿ (ದಿ ಕ್ಯಾರವಾನ್) ಪ್ರಕಟವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.

ಆ ನಿಯತಕಾಲಿಕದ ಪ್ರತಿಯನ್ನು ಪ್ರದರ್ಶಿಸಿದ ಅವರು, ಈ ಕುರಿತು ಪದೇ ಪದೇ ಪ್ರಸ್ತಾಪಿಸಿದರು. ಅದಕ್ಕೆ ರಕ್ಷಣಾ ಸಚಿವರಾದಿಯಾಗಿ ಗೃಹ ಸಚಿವ ಅಮಿತ್ ಶಾ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಆಕ್ಷೇಪಿಸಿ, ವಿರೋಧ ವ್ಯಕ್ತಪಡಿಸಿದರು. ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಟಿಎಂಸಿಯ ಮಹುವಾ ಮೊಯಿತ್ರಾ, ಕಲ್ಯಾಣ್ ಬ್ಯಾನರ್ಜಿ, ಆರ್ಜೆಡಿಯ ಮನೋಜ್ ಜಾ ಅವರು ರಾಹುಲ್ ಬೆಂಬಲಕ್ಕೆ ನಿಂತರು.

‘ಲೋಕಸಭೆಯ ವಿರೋಧ ಪಕ್ಷದ ನಾಯಕರು ತಾವು ಪ್ರಸ್ತಾಪಿಸುತ್ತಿರುವ ಪುಸ್ತಕವನ್ನು ಸದನದ ಮುಂದಿಡಬೇಕು ಎಂದು ನಾನು ಬಯಸುತ್ತೇನೆ. ಆದರೆ ಅದು ಸಾಧ್ಯವಿಲ್ಲ, ಏಕೆಂದರೆ ಆ ಪುಸ್ತಕ ಇನ್ನೂ ಪ್ರಕಟವೇ ಆಗಿಲ್ಲ’ ಎಂದು ರಾಜನಾಥ ಸಿಂಗ್ ಹೇಳಿದರು.

ಚೀನಾಕ್ಕೆ ಸಂಬಂಧಿಸಿದ ವಿಷಯ ತುಂಬಾ ಸೂಕ್ಷ್ಮವಾದದ್ದು. ಈ ಕುರಿತು ಲೋಕಸಭೆಯಲ್ಲಿ ಮಾತನಾಡಲು ರಾಹುಲ್ ಗಾಂಧಿ ಅವರಿಗೆ ಅವಕಾಶ ಕೊಡಬೇಕು ಎಂದು ಸಮಾಜವಾದಿ ಪಕ್ಷದ (ಎಸ್ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಆಗ್ರಹಿಸಿದರು.

ಚೀನಾದ ಟ್ಯಾಂಕ್ಗಳು ಭಾರತದ ಭೂಪ್ರದೇಶ ತಲುಪಿವೆ ಎಂದು ಚೀನಾ ಹೇಳಿಕೊಂಡಿದ್ದನ್ನು ರಾಹುಲ್ ಈ ವೇಳೆ ಉಲ್ಲೇಖಿಸಿದರು. ಅಲ್ಲದೆ ಅವರು ಪದೇ ಪದೇ ‘ಚೀನೀ ಟ್ಯಾಂಕ್’ಗಳು ಎಂದು ಪ್ರಸ್ತಾಪಿಸಿದ್ದಕ್ಕೆ ಬಿಜೆಪಿ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದರು. ‘ಆ ಪುಸ್ತಕ ಇನ್ನೂ ಪ್ರಕಟವಾಗಿಲ್ಲದ ಕಾರಣ, ಅದನ್ನು ನೀವು ಹೇಗೆ ಇಲ್ಲಿ ಉಲ್ಲೇಖಿಸುತ್ತೀರಿ’ ಎಂದು ಗೃಹ ಸಚಿವ ಅಮಿತ್ ಶಾ ಪ್ರಶ್ನಿಸಿದರು.

ಪದೇ ಪದೇ ಎಚ್ಚರಿಕೆ ನೀಡಿದ ಸ್ಪೀಕರ್:

ಅಪ್ರಕಟಿತ ಪುಸ್ತಕವನ್ನು ಉಲ್ಲೇಖಿಸದಂತೆ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ರಾಹುಲ್ ಗಾಂಧಿ ಅವರಿಗೆ ಪದೇ ಪದೇ ಎಚ್ಚರಿಕೆ ನೀಡಿದರು.

‘ಈ ಕುರಿತು ಪ್ರಸ್ತಾಪಿಸಲು ರಾಹುಲ್ ಗಾಂಧಿ ಅವರಿಗೆ ಸ್ಪೀಕರ್ ಅನುಮತಿ ನಿರಾಕರಿಸಿದ್ದಾರೆ. ಅವರ ರೂಲಿಂಗ್ ಅನ್ನು ರಾಹುಲ್ ಪದೇ ಪದೇ ಉಲ್ಲಂಘಿಸಿದ್ದಾರೆ. ಈ ಮೂಲಕ ಅವರು ಪೀಠಕ್ಕೆ ಅಗೌರವ ತೋರಿದ್ದಾರೆ. ಸದನದ ನಿಯಮ ಪಾಲನೆ ವಿಷಯದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕರು ಯುವ ಸಂಸದರಿಗೆ ಮಾದರಿಯಾಗಿಲ್ಲ’ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಆರೋಪಿಸಿದರು.

ಸದನದ ನಿಯಮಗಳು ಮತ್ತು ಸ್ಪೀಕರ್ ರೂಲಿಂಗ್ ಅನ್ನು ಪದೇ ಪದೇ ನಿರ್ಲಕ್ಷಿಸುವ ಸದಸ್ಯರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ಸದನದಲ್ಲಿ ಚರ್ಚಿಸಬೇಕು ಎಂದೂ ರಿಜಿಜು ಸಲಹೆ ನೀಡಿದರು.

‘ಒಂದು ಉಲ್ಲೇಖಕ್ಕೇಕೆ ಹದರಿಕೆ?’:

‘ಬಿಜೆಪಿಯವರು ಭಯೋತ್ಪಾದನೆಯ ವಿರುದ್ಧ ಹೋರಾಡುತ್ತೇವೆ ಎನ್ನುತ್ತಾರೆ. ಆದರೆ ಈ ಪುಸ್ತಕದ ಕುರಿತು ಪ್ರಕಟವಾಗಿರುವ ಲೇಖನದ ಒಂದು ಉಲ್ಲೇಖಕ್ಕೆ ಏಕೆ ಹೆದರುತ್ತಿದ್ದಾರೆ? ಹೆದರಿಕೆ ಇಲ್ಲ ಎನ್ನುವುದಾದರೆ ಅದನ್ನು ಓದಲು ಬಿಡಿ’ ಎಂದು ರಾಹುಲ್ ಮತ್ತೆ ಕೇಳಿದರು.

ಆಗ ಮತ್ತೆ ಎರಡೂ ಕಡೆಯ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಗದ್ದಲ ತೀವ್ರವಾದ ಪರಿಣಾಮ ಕಲಾಪವನ್ನು ಸ್ಪೀಕರ್ ಎರಡು ಬಾರಿ ಮುಂದೂಡಿದರು. ಆ ಬಳಿಕವೂ ಗದ್ದಲ ಮುಂದುವರಿದಿದ್ದರಿಂದ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಿದರು.

ಅಪಾಯಕಾರಿ ನಡೆ:

‘ರಾಹುಲ್ ಗಾಂಧಿ ಅವರ ಈ ನಡೆ ಅಪಾಯಕಾರಿ. ಅಪ್ರಕಟಿತ ಪುಸ್ತಕದಲ್ಲಿ ಇರುವುದನ್ನು ಉಲ್ಲೇಖಿಸುವ ಮೂಲಕ ಅವರು, ಇತರರಿಗೂ ಇಂಥದ್ದನ್ನು ಮಾಡುವುದಕ್ಕೆ ಪೂರ್ವ ನಿದರ್ಶನ ಹಾಕಿಕೊಡುತ್ತಿದ್ದಾರೆ. ಮುಂದೆ ಬಿಜೆಪಿ ಅಥವಾ ಇತರ ಪಕ್ಷಗಳ ನಾಯಕರು ಇದೇ ಹಾದಿ ಹಿಡಿಯುವ ಅಪಾಯವಿದೆ’ ಎಂದು ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ಮುಖ್ಯಾಂಶಗಳು...

* ‘ದಿ ಕ್ಯಾರವಾನ್’ನಲ್ಲಿ ಪ್ರಕಟವಾಗಿರುವ ಲೇಖನ

* ಪ್ರಧಾನಿ, ರಕ್ಷಣಾ ಸಚಿವರ ನಡೆ ಬಗ್ಗೆ ಪ್ರಶ್ನೆ

* ಅಪ್ರಕಟಿತ ಪುಸ್ತಕದ ಸಾರಾಂಶ ಓದುವಂತಿಲ್ಲ– ರಾಜನಾಥ ಸಿಂಗ್

* ಗದ್ದಲದ ಕಾರಣ ಎರಡು ಬಾರಿ ಕಲಾಪ ಮುಂದೂಡಿದ ಸ್ಪೀಕರ್

ಅತ್ಯಂತ ಹಿರಿಯ ಸಚಿವರನ್ನು ನಿಯೋಜಿಸಿ ನಿಯಮಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಮತ್ತು ರಾಹುಲ್ ಅವರನ್ನು ಸುಮ್ಮನಿರಿಸಲು ಯತ್ನಿಸಲಾಗಿದೆ
ಕೆ.ಸಿ.ವೇಣುಗೋಪಾಲ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ

ಸ್ಪೀಕರ್ ತೀರ್ಪನ್ನು ಧಿಕ್ಕರಿಸುವ ಮೂಲಕ ರಾಹುಲ್ ಗಾಂಧಿ ಅವರು ತಪ್ಪನ್ನು ಪುನರಾವರ್ತಿಸಿ ಸದನದ ಸಮಯವನ್ನು ವ್ಯರ್ಥ ಮಾಡಿದರು
ಕಿರಣ್ ರಿಜಿಜು ಸಂಸದೀಯ ವ್ಯವಹಾರಗಳ ಸಚಿವ

ಮೋದಿ ಸಿಂಗ್ ಸೇನೆಯನ್ನು ನಿರಾಶಗೊಳಿಸಿದ್ದಾರೆ: ರಾಹುಲ್

‘ಭಾರತ– ಚೀನಾ ನಡುವೆ 2020ರಲ್ಲಿ ನಡೆದ ಸೇನಾ ತಿಕ್ಕಾಟದ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಸೇನೆಯನ್ನು ನಿರಾಶೆಗೊಳಿಸಿದ್ದರು ಎಂಬುದು ಭಾರತ ಸೇನೆಯ ಮಾಜಿ ಮುಖ್ಯಸ್ಥ ಎಂ.ಎಂ. ನರವಣೆ ಅವರ ಅಪ್ರಕಟಿತ ಪುಸ್ತಕದಿಂದ ಗೊತ್ತಾಗುತ್ತದೆ. ಈ ವಿಷಯ ಹೊರಗೆ ಬರಬಾರದು ಎಂಬ ಆತಂಕದಿಂದ ಅವರು ನನಗೆ ಈ ಪುಸ್ತಕವನ್ನು ಉಲ್ಲೇಖಿಸಲು ಅವಕಾಶ ನೀಡುತ್ತಿಲ್ಲ’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ ಆರೋಪಿಸಿದರು. ಸಂಸತ್ ಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ‘ಸೇನೆಯ ಮಾಜಿ ಮುಖ್ಯಸ್ಥರ ಪುಸ್ತಕದ ಒಂದೆರಡು ಸಾಲನ್ನು ಪ್ರಸ್ತಾಪಿಸಲು ನಾನು ಬಯಸಿದ್ದೇನೆ. ಆದರೆ ಅದಕ್ಕೆ ಸರ್ಕಾರ ಹೆದರುತ್ತಿದೆ’ ಎಂದು ವ್ಯಂಗ್ಯವಾಡಿದರು. 56 ಇಂಚಿನ ಎದೆಗೇನಾಗಿತ್ತು?: ‘ಪ್ರಧಾನಿ ಮತ್ತು ರಕ್ಷಣಾ ಸಚಿವರ ಬಗ್ಗೆ ನರವಣೆ ಅವರು ತಮ್ಮ ಪುಸ್ತಕದಲ್ಲಿ ಸ್ಪಷ್ಟವಾಗಿ ಬರೆದಿದ್ದಾರೆ. ಅದು ಲೇಖನವೊಂದರಲ್ಲಿ ಪ್ರಕಟವಾಗಿದೆ. ಅದನ್ನು ಪ್ರಸ್ತಾಪಿಸಲು ನಾನು ಬಯಸಿದ್ದೇನೆ. ಅದು ಹೊರಬಂದರೆ ಈ ಇಬ್ಬರು ನಾಯಕರ ವಾಸ್ತವ ಚಿತ್ರಣ ಬಹಿರಂಗವಾಗುತ್ತದೆ. ಈ ಕಾರಣಕ್ಕಾಗಿಯೇ ಅವರು ಹೆದರುತ್ತಿದ್ದಾರೆ. ಚೀನಾದ ಸೇನೆ ನಮ್ಮ ಎದುರಿದ್ದಾಗ ಈ 56 ಇಂಚಿನ ಎದೆಗೆ ಏನಾಗಿತ್ತು’ ಎಂದು ರಾಹಲ್ ಪ್ರಶ್ನಿಸಿದರು. ‘ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯವಾದ್ದರಿಂದ ಸ್ಪಷ್ಟವಾಗಬೇಕು. ಅಷ್ಟಕ್ಕೂ ಅದನ್ನು ಉಲ್ಲೇಖಿಸಿರುವುದು ಸೇನೆಯ ಮಾಜಿ ಮುಖ್ಯಸ್ಥರು. ಅವರು ಪ್ರಧಾನಿ ಮತ್ತು ರಕ್ಷಣಾ ಸಚಿವರ ನಡುವೆ ನಡೆಸಿದ ಸಂಭಾಷಣೆಯನ್ನು ಪ್ರಸ್ತಾಪಿಸಿದ್ದಾರೆ’ ಎಂದು ವಿವರಿಸಿದರು. ‘ಮೋದಿ ಮತ್ತು ಸಿಂಗ್ ಅವರು ಸೇನಾ ಮುಖ್ಯಸ್ಥರಿಗೆ ಯಾವ ಆದೇಶ ನೀಡಿದ್ದರು ಎಂಬುದನ್ನು ಸದನದಲ್ಲಿ ಹೇಳಲು ಬಯಸಿದ್ದೇನೆ. ಅದಕ್ಕೇಕೆ ಅವರು ಇಷ್ಟೊಂದು ಆತಂಕಗೊಂಡಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ’ ಎಂದು ಟೀಕಿಸಿದರು. ‘ಪಲಾಯನ ಮಾಡಿದರು’: ‘ಭೂಮಿಯನ್ನು ಕಳೆದುಕೊಂಡಿದ್ದೇವೋ ಇಲ್ಲವೋ ಎಂಬುದು ಬೇರೆಯದ್ದೇ ವಿಷಯ. ದೇಶದ ನಾಯಕರು ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಪಲಾಯನ ಮಾಡಬಾರದು ಮತ್ತು ಅದನ್ನು ಮತ್ತೊಬ್ಬರ ಹೆಗಲ ಮೇಲೆ ಬಿಡಬಾರದು. ಆದರೆ ಮೋದಿ ಅವರು ಮಾಡಿದ್ದು ಅದನ್ನೇ’ ಎಂದು ರಾಹುಲ್ ಆರೋಪಿಸಿದರು. ಸೇನಾ ಮುಖ್ಯಸ್ಥರ ಈ ಪುಸ್ತಕ ಪ್ರಕಟಣೆಗೂ ಸರ್ಕಾರ ಅವಕಾಶ ನೀಡುತ್ತಿಲ್ಲ ಎಂದೂ ಅವರು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.