ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ ಮಂದಿರ ಕಾರ್ಯಕ್ರಮಕ್ಕೆ ರಾಷ್ಟ್ರಪತಿ, ದಲಿತರನ್ನು ಆಹ್ವಾನಿಸದ ಸರ್ಕಾರ: ರಾಹುಲ್

Published 19 ಫೆಬ್ರುವರಿ 2024, 9:17 IST
Last Updated 19 ಫೆಬ್ರುವರಿ 2024, 9:17 IST
ಅಕ್ಷರ ಗಾತ್ರ

ಪ್ರತಾಪಗಢ: ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮ ಮಂದಿರದಲ್ಲಿ ಕಳೆದ ತಿಂಗಳು ನಡೆದ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಸರ್ಕಾರವು ದಲಿತರು, ಹಿಂದುಳಿದ ವರ್ಗದವರು ಮತ್ತು ರಾಷ್ಟ್ರಪತಿಯವರಿಗೆ ಆಹ್ವಾನ ನೀಡದೆ ಅವಮಾನಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಕಿಡಿಕಾರಿದ್ದಾರೆ.

ದೇಶದಲ್ಲಿ ಶೇ 73ರಷ್ಟಿರುವ ದಲಿತರು, ಹಿಂದುಳಿದ ವರ್ಗದವರು, ಬುಡಕಟ್ಟು ಸಮುದಾಯದವರನ್ನು ಬಿಜೆಪಿ ಸರ್ಕಾರವು ಕಡೆಗಣಿಸುತ್ತಿದೆ ಎಂದು ಆರೋಪಿಸಿರುವ ರಾಹುಲ್‌, ಬಂಡವಾಳಶಾಹಿಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದಿದ್ದಾರೆ.

ಪಕ್ಷದ ಮಾಜಿ ಅಧ್ಯಕ್ಷರೂ ಆಗಿರುವ ರಾಹುಲ್‌ ನೇತೃತ್ವದಲ್ಲಿ ಕಾಂಗ್ರೆಸ್‌ ನಡೆಸುತ್ತಿರುವ 'ಭಾರತ ಜೋಡೊ ನ್ಯಾಯ ಯಾತ್ರೆ'ಯು ಉತ್ತರಪ್ರದೇಶದಲ್ಲಿ ಸಾಗುತ್ತಿದೆ. ರಾಂಪುರ ಖಾಸ್‌ ವಿಧಾನಸಭೆ ಕ್ಷೇತ್ರದ ಲಾಲ್‌ಗಂಜ್‌ ಇಂದಿರಾ ವೃತ್ತದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ರಾಹುಲ್‌, 'ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕೈಗಾರಿಕೋದ್ಯಮಿಗಳು ಮತ್ತು ನಟ ಅಮಿತಾಭ್‌ ಬಚ್ಚನ್‌ ಅವರಿಗೆ ಆಹ್ವಾನ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು, ದೇಶದ ಶೇ 73 ರಷ್ಟಿರುವ ಜನರಿಗೆ ಯಾವುದೇ ಪ್ರಾತಿನಿಧ್ಯವಿಲ್ಲ ಎಂಬ ಸಂದೇಶ ನೀಡಿದ್ದಾರೆ' ಎಂದು ದೂರಿದ್ದಾರೆ.

'ಮೋದಿ ಅವರು ರೈತರ ಜೇಬಿಗೆ ಕತ್ತರಿ ಹಾಕುವ ಮೂಲಕ ಶ್ರೀಮಂತರ ಜೇಬು ತುಂಬಿಸುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ದೇಶದಾದ್ಯಂತ ದ್ವೇಷ ಹರಡುವ ಕೆಲಸ ಮಾಡಲಾಗುತ್ತಿದೆ. ದೇಶದ ಯುವಕರಿಗೆ ಉದ್ಯೋಗ ನೀಡಲು, ಮಹಿಳೆಯರಿಗೆ ರಕ್ಷಣೆ ನೀಡಲು ಸರ್ಕಾರ ವಿಫಲವಾಗಿದೆ. ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಕೇಂದ್ರೀಯ ತನಿಖಾ ದಳದಂತಹ (ಸಿಬಿಐ) ಸಂಸ್ಥೆಗಳು ಮೋದಿಯ ಕೈಗೊಂಬೆಯಾಗಿದ್ದು, ವಿರೋಧ ಪಕ್ಷಗಳ ನಾಯಕರನ್ನು ಬೆದರಿಸಲು ಬಳಸಿಕೊಳ್ಳಲಾಗುತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಕೇಂದ್ರದ ಮೂಲಕ ಲಾಲ್‌ಗಂಜ್‌ ಇಂದಿರಾ ವೃತ್ತಕ್ಕೆ ಆಗಮಿಸಿದ ರಾಹುಲ್‌ ಅವರನ್ನು ಕಾಂಗ್ರೆಸ್‌ ನಾಯಕರು ಸ್ವಾಗತಿಸಿದರು.

ಕಾಂಗ್ರೆಸ್‌ನಿಂದ ರಾಜ್ಯಸಭೆ ಸದಸ್ಯರಾಗಿರುವ ಪ್ರಮೋದ್‌ ತಿವಾರಿ, ಶಾಸಕಿ ಅರಾಧನಾ ಮಿಶ್ರಾ ಮೋನಾ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT