ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆಯಲ್ಲಿ ಅಮೇಥಿಯಿಂದಲೇ ರಾಹುಲ್ ಸ್ಪರ್ಧೆ: ಉತ್ತರ ಪ್ರದೇಶ ಕಾಂಗ್ರೆಸ್

Published 18 ಆಗಸ್ಟ್ 2023, 13:35 IST
Last Updated 18 ಆಗಸ್ಟ್ 2023, 13:35 IST
ಅಕ್ಷರ ಗಾತ್ರ

ವಾರಾಣಸಿ (ಉತ್ತರ ಪ್ರದೇಶ): ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು 2024ರ ಲೋಕಸಭೆ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ಶುಕ್ರವಾರ ತಿಳಿಸಿದ್ದಾರೆ.

ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ವಾರಾಣಸಿಯಿಂದ ಕಣಕ್ಕಿಳಿದರೆ ಅವರ ಗೆಲುವಿಗೆ ಕಾರ್ಯಕರ್ತರು ಶಕ್ತಿ ಮೀರಿ ಶ್ರಮಿಸಲಿದ್ದಾರೆ ಎಂದೂ ಹೇಳಿದ್ದಾರೆ.

ವಾರಾಣಸಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಅಜಯ್ ರೈ, 'ರಾಹುಲ್‌ ಗಾಂಧಿ ಅವರು ಅಮೇಥಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ' ಎಂದು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ನಾಯಕಿ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಈ ಕ್ಷೇತ್ರದಲ್ಲಿ 2009ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ರಾಹುಲ್‌ ಗಾಂಧಿ, 2014ರಲ್ಲಿ ಸೋಲು ಕಂಡಿದ್ದರು.

ಸಚಿವೆ ಸ್ಮೃತಿ ಇರಾನಿ ಅವರು ಅಮೇಥಿ ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಲು ವಿಫಲರಾಗಿದ್ದಾರೆ ಎಂದು ರೈ ವಾಗ್ದಾಳಿ ನಡೆಸಿದ್ದಾರೆ.

'ಪ್ರಿಯಾಂಕ ಗಾಂಧಿಯವರು ತಮ್ಮ ಸ್ಪರ್ಧೆಗೆ ಯಾವುದೇ ಕ್ಷೇತ್ರವನ್ನು ಪರಿಗಣಿಸಿದರೂ, ಅವರಿಗೆ ಗೆಲುವಿನ ಖಾತ್ರಿ ನೀಡುತ್ತೇವೆ. ಒಂದು ವೇಳೆ ಅವರೇನಾದರೂ ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾದರೆ, ಅವರ ಗೆಲುವಿಗಾಗಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನೂ ತಮ್ಮ ಸಾಮರ್ಥ್ಯವನ್ನು ಪಣಕ್ಕಿಡಲಿದ್ದಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ವಾರಾಣಸಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

'ನಿರುದ್ಯೋಗ, ಹಣದುಬ್ಬರ ರಾಜ್ಯದ ಅತಿದೊಡ್ಡ ಸಮಸ್ಯೆಗಳಾಗಿವೆ. ಜನರನ್ನು ಬೆದರಿಸಿ ಒತ್ತಾಯಪೂರ್ವಕವಾಗಿ ಬಿಜೆಪಿಗೆ ಬೆಂಬಲ ನೀಡುವಂತೆ ಮಾಡಲಾಗುತ್ತಿದೆ. ಬಿಜೆಪಿಯು ವಿರೋಧಿಗಳನ್ನು ಹತ್ತಿಕ್ಕಲು ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಕೇಂದ್ರ ತನಿಖಾ ದಳವನ್ನು (ಸಿಬಿಐ) ಬಳಸಿಕೊಳ್ಳುತ್ತಿದೆ' ಎಂದು ದೂರಿದ್ದಾರೆ.

ವಾರಾಣಸಿಯ ಪಿಂಡ್ರಾ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿರುವ ರೈ ಅವರನ್ನು ಗುರುವಾರವಷ್ಟೇ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷನ್ನಾಗಿ ಆಯ್ಕೆಮಾಡಲಾಗಿದೆ. ಪಕ್ಷದ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ತವರಿಗೆ ಆಗಮಿಸಿದ ಅವರಿಗೆ, ವಾರಾಣಸಿ ವಿಮಾನ ನಿಲ್ದಾಣದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಕಾಂಗ್ರೆಸ್‌ನ ಸಾವಿರಾರು ಕಾರ್ಯಕರ್ತರು, ವಿವಿಧ ಜಿಲ್ಲೆಗಳ ನಾಯಕರು ಪಾಲ್ಗೊಂಡಿದ್ದರು.

ರೈ ಅವರು 2014 ಮತ್ತು 2019ರಲ್ಲಿ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಮೋದಿ ವಿರುದ್ಧ ಕಣಕ್ಕಿಳಿದು ಸೋತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT