ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೈಂಗಿಕ ಕಿರುಕುಳ ನೀಡಿದ ಆರೋಪ: ರೈಲ್ವೆ ಉದ್ಯೋಗಿಯ ಥಳಿಸಿ ಕೊಂದ ಪ್ರಯಾಣಿಕರು

11 ವರ್ಷದ ಬಾಲಕಿಗೆ ರೈಲಿನಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪ
Published : 13 ಸೆಪ್ಟೆಂಬರ್ 2024, 15:56 IST
Last Updated : 13 ಸೆಪ್ಟೆಂಬರ್ 2024, 15:56 IST
ಫಾಲೋ ಮಾಡಿ
Comments

ಲಖನೌ/ ಕಾನ್ಪುರ: ಉತ್ತರ ಪ್ರದೇಶದ ಲಖನೌನಿಂದ ಕಾನ್ಪುರದ ನಡುವೆ ಚಲಿಸುತ್ತಿದ್ದ ಹಮ್‌ಸಫರ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ 11 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ರೈಲ್ವೆ ಉದ್ಯೋಗಿಯನ್ನು ಸಹ ಪ್ರಯಾಣಿಕರು ರೈಲಿನಲ್ಲಿ ಥಳಿಸಿ ಕೊಂದಿರುವ ಘಟನೆ ನಡೆದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.  

ಹತ್ಯೆಯಾದ ರೈಲ್ವೆ ಉದ್ಯೋಗಿ, ಬಿಹಾರದ ಸಮಷ್ಟಿಪುರ ನಿವಾಸಿ ಪ್ರಶಾಂತ್‌ ಕುಮಾರ್‌ (34) ಎಂದು ಗುರುತಿಸಲಾಗಿದೆ. ಅವರು ರೈಲಿನಲ್ಲಿ ಬಿಹಾರದ ಸಿವಾನ್‌ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದರು. ತನ್ನ ‘ಬರ್ತ್‌’ ಆಸನವನ್ನು ಬಾಲಕಿಗೆ ಬಿಟ್ಟುಕೊಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಗುರುವಾರ ಮುಂಜಾನೆ ರೈಲು ಲಖನೌ ನಿಲ್ದಾಣದ ಸಮೀಪಿಸುತ್ತಿದ್ದ ವೇಳೆ ಪ್ರಶಾಂತ್‌, ಎ.ಸಿ ಕೋಚ್‌ನಲ್ಲಿ 11 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. 

ಬಾಲಕಿಯ ತಾಯಿಯು ಶೌಚಾಲಯಕ್ಕೆ ತೆರಳಿದ್ದಾಗ ಪ್ರಶಾಂತ್, ಬಾಲಕಿಯನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ. ಬಳಿಕ ಬಾಲಕಿಯು ತಾಯಿಗೆ ನಡೆದ ಸಂಗತಿಯನ್ನು ವಿವರಿಸಿದ್ದಾಳೆ. ವಿಷಯ ತಿಳಿದು ಕೆರಳಿದ ಪ್ರಯಾಣಿಕರು ಹಾಗೂ ಬಾಲಕಿಯ ಕುಟುಂಬಸ್ಥರು, ರೈಲು ಕಾನ್ಪುರ ನಿಲ್ದಾಣ ತಲುಪುವವರೆಗೂ ಸುಮಾರು ಒಂದು ಗಂಟೆಗಳ ಕಾಲ ಪ್ರಶಾಂತ್‌ಗೆ ಮನಬಂದಂತೆ ಥಳಿಸಿದ್ದಾರೆ. 

ವಿಷಯ ತಿಳಿದ ಬಳಿಕ ಪೊಲೀಸರು ಪ್ರಶಾಂತ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. 

ಸಂತ್ರಸ್ತೆಯ ತಾಯಿ, ಪ್ರಶಾಂತ್‌ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಮತ್ತು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ ಎಂದು ರೈಲ್ವೆಯ ಹೆಚ್ಚುವರಿ ಮಹಾ ನಿರ್ದೇಶಕ ಡಿ. ಪ್ರಕಾಶ್‌ ಮಾಹಿತಿ ನೀಡಿದ್ದಾರೆ.

ಮೂಲಗಳ ಪ್ರಕಾರ, ಪ್ರಶಾಂತ್‌ ಅವರ ತಂದೆ ರೈಲ್ವೆ ಉದ್ಯೋಗಿಯಾಗಿದ್ದರು. ಅವರು ಸೇವೆಯಲ್ಲಿದ್ದಾಗಲೇ ನಿಧನರಾಗಿದ್ದರು. ಬಳಿಕ ಅವರ ಮಗನಿಗೆ ಅಲ್ಲಿ ಉದ್ಯೋಗ ದೊರೆತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT