ಅಹಮದಾಬಾದ್: ಗುಜರಾತ್‌ನ ಕೆಲವೆಡೆ ಸತತ ನಾಲ್ಕನೇ ದಿನ ಬುಧವಾರವೂ ಧಾರಾಕಾರ ಮಳೆಯಾಗಿದ್ದು, ಮಳೆ ಸಂಬಂಧಿತ ಅವಘಡಗಳಲ್ಲಿ 19 ಮಂದಿ ಮೃತಪಟ್ಟಿದ್ದಾರೆ. ಮೃತರ ಸಂಖ್ಯೆ ಮೂರು ದಿನದಲ್ಲಿ 26ಕ್ಕೆ ಏರಿದೆ.
ಸುಮಾರು 17,800 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾ
ಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ಎಸ್‌ಡಿಆರ್‌ಎಫ್, ಸೇನೆ, ಕರಾವಳಿ ಕಾವಲು ಪಡೆಗಳನ್ನು ರಕ್ಷಣಾ ಕಾರ್ಯಗಳಿಗೆ ನಿಯೋಜಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಂದ ಪರಿಸ್ಥಿತಿಯ ಮಾಹಿತಿ ಪಡೆದರು.
‘ಗೋಡೆ ಕುಸಿತ ಹಾಗೂ ನೀರಿನಲ್ಲಿ ಮುಳುಗಿದ ಪ್ರತ್ಯೇಕ ಅವಘಡಗಳಲ್ಲಿ
ಒಂಬತ್ತು ಜನರು ಮೃತಪಟ್ಟಿದ್ದಾರೆ. ಸೋಮವಾರ 7 ಜನ ಮೃತಪಟ್ಟಿದ್ದರು ಮತ್ತು ಆನಂದ್ ಜಿಲ್ಲೆಯಲ್ಲಿ ಗೋಡೆ ಕುಸಿದು ಮೂವರು ಮೃತಪಟ್ಟಿದ್ದರು’ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಜುನಾಗಢ ಮತ್ತು ಭರೂಚ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಮುಳುಗಿ ಸತ್ತಿದ್ದಾರೆ. ಖೇಡಾ, ಮೊರ್ಬಿ ಜಿಲ್ಲೆಗಳಲ್ಲಿ 169 ಜನರನ್ನು ರಕ್ಷಿಸಲಾಗಿದೆ.
ಸೌರಾಷ್ಟ್ರ ವಲಯದಲ್ಲಿ ದೇವ್‌ಭೂಮಿ ದ್ವಾರಕಾ, ಜಾಮ್‌ನಗರ, ಪೋರಬಂದರ್ ಸೇರಿ ಹಲವು ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳಲ್ಲಿ ಭಾರಿ ಮಳೆಯಾಗಿದೆ. ಜಾಮ್‌ನಗರದಲ್ಲಿ 38.7 ಸೆಂ.ಮೀ. ಮಳೆ ಸುರಿದೆ. 13 ತಾಲ್ಲೂಕುಗಳಲ್ಲಿ 20 ಸೆಂ.ಮೀಗೂ ಹೆಚ್ಚು ಮಳೆಯಾಗಿದೆ. ರಾಜ್ಯದಲ್ಲಿ 137 ಜಲಾಶಯಗಳು, ಕೆರೆಗಳು, 24 ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಭಾರಿ ಮಳೆ ಹಿನ್ನೆಲೆಯಲ್ಲಿ ವಂದೇಭಾರತ್ ಸೇರಿದಂತೆ 10 ರೈಲುಗಳ ಸಂಚಾರ ಭಾಗಶಃ ರದ್ದಾಗಿದೆ. ಹವಾಮಾನ ಇಲಾಖೆ ಪ್ರಕಾರ, ಗುಜರಾತ್‌ನಲ್ಲಿ ವಾರ್ಷಿಕ ವಾಡಿಕೆ ಮಳೆಗಿಂತ ಶೇ 105ರಷ್ಟು ಮಳೆ ಹೆಚ್ಚು ಸುರಿದಿದೆ.
ವಡೋದರಾ ನಗರದಲ್ಲಿ ಹಲವು ಭಾಗಗಳು ಜಲಾವೃತಗೊಂಡಿವೆ. ರಕ್ಷಣೆಗೆ ಸೇನೆಯ ನೆರವು ಪಡೆಯಲಾಗಿದೆ. ಕೆಲವೆಡೆ 10ರಿಂದ 12 ಅಡಿಯಷ್ಟು ನೀರು ನಿಂತಿದೆ ಎಂದು ಆರೋಗ್ಯ ಸಚಿವ ಹೃಷಿಕೇಶ್ ಪಟೇಲ್ ಹೇಳಿದ್ದಾರೆ.
ಅಜ್ವಾ ಅಣೆಕಟ್ಟಿನಿಂದ ನೀರು ಬಿಟ್ಟಿರುವ ಕಾರಣ ವಿಶ್ವಾಮಿತ್ರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮುಂಜಾಗ್ರತೆಯಾಗಿ ಜಿಲ್ಲಾಡಳಿತ ಶಾಲೆಗಳಿಗೆ ರಜೆ ಘೋಷಿಸಿದೆ.
‘ಗುಜರಾತ್‌ನಲ್ಲಿ ಪ್ರವಾಹ ಪರಿಸ್ಥಿತಿ ಉಲ್ಬಣಿಸಿದೆ.ಪ್ರಾಣ ಹಾನಿಯಾಗಿದ್ದು ಅನೇಕರು ನಾಪತ್ತೆಯಾಗಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪರಿಹಾರ ಕಾರ್ಯಗಳಿಗೆ ಕೈಜೋಡಿಸಬೇಕುಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ
‘ಪ್ರಧಾನಿ ಅವರು ಕರೆ ಮಾಡಿದ್ದು ಪರಿಸ್ಥಿತಿಯ ವಿವರ ಪಡೆದಿದ್ದಾರೆ. ಕೇಂದ್ರ ಸರ್ಕಾರ ಎಲ್ಲ ಅಗತ್ಯ ನೆರವು ನೀಡಲಿದೆ ಎಂದು ಭರವಸೆ ನೀಡಿದ್ದಾರೆಭೂಪೇಂದ್ರ ಪಟೇಲ್ ಮುಖ್ಯಮಂತ್ರಿ
ಪರಿಹಾರ ಮತ್ತು ರಕ್ಷಣಾ ಕಾರ್ಯದಲ್ಲಿ ಸಂತ್ರಸ್ತರಿಗೆ ಮತ್ತು ಆಡಳಿತಕ್ಕೆ ಸಾಧ್ಯವಿರುವ ಎಲ್ಲ ಸಹಾಯ ಒದಗಿಸಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಮನವಿ ಮಾಡಲಾಗಿದೆರಾಹುಲ್ ಗಾಂಧಿ ಲೋಕಸಭೆ ವಿರೋಧಪಕ್ಷದ ನಾಯಕ
‘ರಾಜಸ್ತಾನದಲ್ಲೂ ಭಾರಿ ಮಳೆ’
ಜೈಪುರ (ಪಿಟಿಐ):ರಾಜಸ್ತಾನದ ಹಲವೆಡೆ ಬುಧವಾರ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಹವಾಮಾನ ಇಲಾಖೆ ಪ್ರಕಾರ ಮೌಂಟ್ ಅಬುವಿನಲ್ಲಿ ಗರಿಷ್ಠ ಅಂದರೆ 8.2 ಸೆಂ.ಮೀ. ಮಳೆಯಾಗಿದೆ. ಉದಯಪುರ ಸಿರೋಹಿ ದುಂಗರ್‌ಪುರ್ ಜಾಲೋರ್ ಬರ್ಮೆರ್ ಅಲ್ವಾರ್ ಜಿಲ್ಲೆಗಳಲ್ಲಿ ಮಳೆಯಾಗಿದೆ. ಸೆಪ್ಟೆಂಬರ್ ಮೊದಲ ವಾರವು ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.