ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಜ್ವಾಲ್‌: ತಡೆಗೋಡೆ ನಿರ್ಮಾಣ ಖಂಡಿಸಿ ಮಿಜೋರಾಂನಲ್ಲಿ ರ್‍ಯಾಲಿ

ಮ್ಯಾನ್ಮಾರ್‌ ಗಡಿಯಲ್ಲಿ ಮುಕ್ತ ಸಂಚಾರ ವ್ಯವಸ್ಥೆ ರದ್ದುಗೊಳಿಸುವ ಕೇಂದ್ರದ ನಿರ್ಧಾರಕ್ಕೆ ವಿರೋಧ
Published 16 ಮೇ 2024, 14:07 IST
Last Updated 16 ಮೇ 2024, 14:07 IST
ಅಕ್ಷರ ಗಾತ್ರ

ಐಜ್ವಾಲ್‌: ಮ್ಯಾನ್ಮಾರ್‌ ಗಡಿಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ‘ಮುಕ್ತ ಸಂಚಾರ ವ್ಯವಸ್ಥೆ’ಯನ್ನು ರದ್ದುಗೊಳಿಸಿ, ಗಡಿಯಲ್ಲಿ ತಡೆಗೋಡೆ ನಿರ್ಮಿಸುವ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ ವಿರೋಧಿಸಿ ಮಿಜೋರಾಂನಲ್ಲಿ ಸ್ಥಳೀಯರು ಹೋರಾಟ ಆರಂಭಿಸಿದ್ದಾರೆ.

ಈಶಾನ್ಯ ರಾಜ್ಯ ಮಿಜೋರಾಂನ ಚಂಪೈನಲ್ಲಿರುವ ಜೋಕಾವ್ಥರ್‌ ಹಾಗೂ ವಫೈ ಗ್ರಾಮಗಳಲ್ಲಿ ‘ಜೋ ಮರುಸಂಘಟನಾ ಸಂಸ್ಥೆ’(ಜೋರೋ) ಗುರುವಾರ ಆಯೋಜಿಸಿದ್ದ ರ್‍ಯಾಲಿಯಲ್ಲಿ ಸಾವಿರಾರು ಮಂದಿ ಸ್ಥಳೀಯರು ಭಾಗವಹಿಸಿ, ಕೇಂದ್ರ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರವು ಮ್ಯಾನ್ಮಾರ್‌ ಗಡಿಯ ಮುಕ್ತ ಸಂಚಾರ ವ್ಯವಸ್ಥೆಯನ್ನು ರದ್ದುಗೊಳಿಸಿ, ತಡೆಗೋಡೆ ನಿರ್ಮಿಸುವ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.

‘ರ್‍ಯಾಲಿ ಕಾರಣದಿಂದಾಗಿ ಎರಡೂ ಗ್ರಾಮಗಳಲ್ಲಿರುವ ಎಲ್ಲ ಸರ್ಕಾರಿ ಕಚೇರಿಗಳು ಹಾಗೂ ಶಾಲೆಗಳನ್ನು ಮುಚ್ಚಲಾಗಿತ್ತು. 7 ಸಾವಿರಕ್ಕೂ ಅಧಿಕ ಜನರು ಭಿತ್ತಿಪತ್ರಗಳನ್ನು ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದ್ದಾರೆ. ರ್‍ಯಾಲಿಯಲ್ಲಿ ನೆರೆಯ ಮ್ಯಾನ್ಮಾರ್ ದೇಶದ ನಿವಾಸಿಗಳು ಕೂಡ ಭಾಗವಹಿಸಿದ್ದರು’ ಎಂದು ಸಂಘಟನಕಾರರು ತಿಳಿಸಿದ್ದಾರೆ.

ರ್‍ಯಾಲಿಯು ಶಾಂತ ರೀತಿಯಲ್ಲಿ ನಡೆದಿದ್ದು, ಕಾನೂನು ಮತ್ತು ಸುವ್ಯವಸ್ಥೆಗೆ ಯಾವುದೇ ಧಕ್ಕೆಯಾಗಿಲ್ಲ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಏನಿದು ಮುಕ್ತ ಸಂಚಾರ ವ್ಯವಸ್ಥೆ?
ಮುಕ್ತ ಸಂಚಾರ ವ್ಯವಸ್ಥೆಯು ಭಾರತ ಮತ್ತು ಮ್ಯಾನ್ಮಾರ್‌ ನಡುವಿನ ಅಂತರಾಷ್ಟ್ರೀಯ ಗಡಿಯಿಂದ ಗರಿಷ್ಠ 16 ಕಿ.ಮೀವರೆಗೆ ಉಭಯ ದೇಶಗಳ ಜನರು ಯಾವುದೇ ಅಡ್ಡಿ ಇಲ್ಲದೆ ಸಂಚರಿಸುವ ಅವಕಾಶವನ್ನು ಕಲ್ಪಿಸಿತ್ತು. ಒಂದು ವೇಳೆ ಗಡಿಯಲ್ಲಿ ತಡೆಗೋಡೆ ನಿರ್ಮಾಣ ಮಾಡಿದರೆ ಉಭಯ ದೇಶಗಳಲ್ಲಿರುವ ಸಾಂಸ್ಕೃತಿಕವಾಗಿ ಒಂದೇ ರೀತಿಯ ಸಮುದಾಯಗಳ ಅನ್ಯೋನ್ಯಕ್ಕೆ ಧಕ್ಕೆಯುಂಟಾಗಲಿದೆ ಎಂಬುದು ಸ್ಥಳೀಯ ಬುಡಕಟ್ಟು ಜನರ ವಾದವಾಗಿದೆ. ಅಲ್ಲದೆ ಮಿಜೋರಾಂ ವಿಧಾನಸಭೆ ಕೂಡ ಇದೇ ವರ್ಷ ಫೆ. 28ರಂದು ಕೇಂದ್ರ ಸರ್ಕಾರದ ತಡೆಗೋಡೆ ನಿರ್ಮಾಣ ನಿರ್ಧಾರದ ವಿರುದ್ಧ ಗೊತ್ತುವಳಿ ನಿರ್ಣಯ ಮಂಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT