ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ ಮಂದಿರ ನಿರ್ಮಾಣ ಪೂರ್ಣ: ವಿವಾದಕ್ಕೆ ತೆರೆ ಎಳೆದ ಸಮಿತಿ ಮುಖ್ಯಸ್ಥ ನೃಪೇಂದ್ರ

Published 17 ಜನವರಿ 2024, 15:52 IST
Last Updated 17 ಜನವರಿ 2024, 15:56 IST
ಅಕ್ಷರ ಗಾತ್ರ

ನವದೆಹಲಿ: ‘ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ‍ಪೂರ್ಣಗೊಂಡಿದೆ’ ಎಂದು ಮಂದಿರ ನಿರ್ಮಾಣ ಸಮಿತಿಯ ಮುಖ್ಯಸ್ಥ ನೃಪೇಂದ್ರ ಮಿಶ್ರಾ ಸ್ಪಷ್ಟಪಡಿಸಿದ್ದಾರೆ.

ಅಪೂರ್ಣಗೊಂಡ ಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಯೋಗ್ಯವಲ್ಲ ಎಂಬ ಕೆಲವರ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಮಿಶ್ರಾ, ‘ದೇವರ ಮೂರ್ತಿ ಪ್ರತಿಷ್ಠಾಪನೆಗೊಳ್ಳುವ ಗರ್ಭಗುಡಿ ಪೂರ್ಣಗೊಂಡಿದೆ. ನೆಲ ಮಾಳಿಗೆಯಲ್ಲಿ ಐದು ಮಂಟಪ ಹಾಗೂ ದೇವಾಲಯದ ನಿರ್ಮಾಣ ಪೂರ್ಣಗೊಂಡಿದೆ. ಮೊದಲ ಮಹಡಿ ನಿರ್ಮಾಣ ಹಂತದಲ್ಲಿದೆ. ಇದು ರಾಮನ ದರ್ಬಾರ್‌ ಆಗಿರಲಿದೆ. 2ನೇ ಮಹಡಿಯಲ್ಲಿ ಅನುಷ್ಠಾನ ನಿರ್ಮಾಣವಾಗಲಿದ್ದು, ಇಲ್ಲಿ ಯಾಗಗಳು ನಡೆಯಲಿವೆ’ ಎಂದು ಎಎನ್‌ಐಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

‘ರಾಮನ ಮೂರ್ತಿ ಪ್ರತಿಷ್ಠಾಪನೆಗೆ ಜನವರಿ 22ರಂದು ಮಧ್ಯಾಹ್ನ 12.30 ಶುಭ ಮುಹೂರ್ತ ಎಂದು ನಿಗದಿಯಾಗಿದೆ. ಈ ನಿಟ್ಟಿನಲ್ಲಿ ಪ್ರತಿಷ್ಠಾಪನಾ ಪೂರ್ವ ಪೂಜಾ ಕೈಂಕರ್ಯಗಳು ಆರಂಭಗೊಂಡಿವೆ. ಗುರುವಾರ ಬೆಳಿಗ್ಗೆ ರಾಮನಮೂರ್ತಿ ಗರ್ಭಗುಡಿಗೆ ತರಲಾಗುತ್ತದೆ. ಅಭಿಷೇಕ ಸೇರಿದಂತೆ ಹಲವು ಬಗೆಯ ವಿಧಿವಿಧಾನಗಳು ನಡೆಯಲಿವೆ. ಅಂತಿಮವಾಗಿ ಜ. 22ರಂದು ಮಧ್ಯಾಹ್ನ 12.30ಕ್ಕೆ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ’ ಎಂದು ವಿವರಿಸಿದ್ದಾರೆ.

‘ಕೃಷ್ಣಶಿಲೆಯ ರಾಮಲಲ್ಲಾನ ಮೂರ್ತಿಯನ್ನು ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ್ದಾರೆ. ಪ್ರಾಣ ಪ್ರತಿಷ್ಠಾಪನೆಗೆ ಕೆತ್ತಲಾದ ಮೂರು ಮೂರ್ತಿಗಳಲ್ಲಿ ಯೋಗಿರಾಜ್ ಅವರ ಮೂರ್ತಿ ಅಂತಿಮವಾಗಿ ಆಯ್ಕೆಯಾಗಿದೆ’ ಎಂದು ಮಿಶ್ರಾ ತಿಳಿಸಿದ್ದಾರೆ.

‘ದೇಶದ ವಿವಿಧ ಭಾಗಗಳಿಂದ ಬರುವ ಸುಮಾರು 11 ಸಾವಿರ ಅತಿಥಿಗಳನ್ನು ಬರಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬರುವ ಅತಿಥಿಗಳಿಗೆ ರಾಮಜನ್ಮಭೂಮಿಯ ಪವಿತ್ರ ಮಣ್ಣನ್ನು ಉಡುಗೊರೆಯಾಗಿ ಹಾಗೂ ಪ್ರಸಾದವಾಗಿ ಲಾಡು ನೀಡಲಾಗುವುದು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ 15 ಮೀಟರ್ ಅಳತೆಯ ರಾಮ ಮಂದಿರದ ಚಿತ್ರವನ್ನು ನೀಡಲು ಉದ್ದೇಶಿಸಲಾಗಿದೆ’ ನೃಪೇಂದ್ರ ಮಿಶ್ರಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT