ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಹರು - ಗಾಂಧಿ ಬಗ್ಗೆ ತಿಳಿಯಲು ರಶ್ದೀ ಪುಸ್ತಕ ಓದಿ: ಕಾಂಗ್ರೆಸಿಗೆ ಬಿಜೆಪಿ ಟಾಂಗ್

ವೀರ ಸಾವರ್ಕರ್ ಬಗ್ಗೆ ಅಸಭ್ಯ ಹೇಳಿಕೆ ಇರುವ ಪುಸ್ತಕ ಪ್ರಕಟಿಸಿದ ಕಾಂಗ್ರೆಸ್ ಸೇವಾದಳ
Last Updated 4 ಜನವರಿ 2020, 7:44 IST
ಅಕ್ಷರ ಗಾತ್ರ

ಭೋಪಾಲ: ವಿನಾಯಕ ದಾಮೋದರ ಸಾವರ್ಕರ್ ಕುರಿತು ವಿವಾದಾತ್ಮಕ, ಅಸಭ್ಯ ಹೇಳಿಕೆಗಳಿರುವ ಕಿರುಪುಸ್ತಕ ಪ್ರಕಟಿಸಿರುವ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿರುವ ಬಿಜೆಪಿ, ಈ ವಿವಾದಕ್ಕೆ ನೆಹರು-ಗಾಂಧಿ ಕುಟುಂಬವನ್ನು ಎಳೆದುತಂದಿದೆ. ಯಾರು ಏನು ಮಾಡಿದರು ಎಂಬುದನ್ನು ತಿಳಿಯಬೇಕಿದ್ದರೆ ಸಲ್ಮಾನ್ ರಶ್ದೀ ಅವರ 'ಮಿಡ್‌ನೈಟ್ಸ್ ಚಿಲ್ಡ್ರನ್' ಪುಸ್ತಕ ಓದುವಂತೆ ಬಿಜೆಪಿಯು ಕಾಂಗ್ರೆಸಿಗೆ ಸಲಹೆ ನೀಡಿದೆ.

ಅಷ್ಟೇ ಅಲ್ಲ, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸಾವರ್ಕರ್ ಅವರು ಸೆಲ್ಯುಲಾರ್ ಜೈಲಿನಲ್ಲಿ ಬ್ರಿಟಿಷರಿಂದ ಕ್ರೂರ ಹಿಂಸೆ ಅನುಭವಿಸುತ್ತಿದ್ದರೆ, ಕಾಂಗ್ರೆಸಿಗರು "ಆರಾಮವಾಗಿ" ಜೈಲಿನಲ್ಲಿದ್ದುಕೊಂಡು ಪುಸ್ತಕಗಳನ್ನು ಬರೆಯುತ್ತಿದ್ದರು ಎಂದೂ ಬಿಜೆಪಿ ಆರೋಪಿಸಿದೆ.

ಕಾಂಗ್ರೆಸ್‌ನ ಸೇವಾ ದಳ ಘಟಕವು ಕಳೆದ ವಾರ 'ವೀರ ಸಾವರ್ಕರ್, ಎಷ್ಟು 'ವೀರ'?' ಎಂಬ ಹೆಸರಿನಲ್ಲಿ ಹಿಂದಿಯಲ್ಲಿ ಪುಸ್ತಕವೊಂದನ್ನು ಪ್ರಕಟಿಸಿ ಹಂಚಿತ್ತು. ಈ ಪುಸ್ತಕದಲ್ಲಿ ಸಾವರ್ಕರ್ ಅವರ ದೇಶಭಕ್ತಿಯನ್ನು ಪ್ರಶ್ನಿಸಲಾಗಿತ್ತು ಮತ್ತು ಮಹಾತ್ಮ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಜತೆ ಸಾವರ್ಕರ್ ದೈಹಿಕ ಸಂಪರ್ಕ ಹೊಂದಿದ್ದರು ಎಂದು ಲಾರಿ ಕಾಲಿನ್ಸ್ ಮತ್ತು ಡೊಮಿನಿಕ್ ಲಾಪಿಯೇರ್ ಬರೆದಿರುವ "ಫ್ರೀಡಂ ಎಟ್ ಮಿಡ್‌ನೈಟ್" ಪುಸ್ತಕವನ್ನು ಉಲ್ಲೇಖಿಸಿ ಬರೆಯಲಾಗಿತ್ತು.

ಕಾಂಗ್ರೆಸಿಗರು ಸಲ್ಮಾನ್ ರಶ್ದೀ ಅವರ ಮಿಡ್‌ನೈಟ್ಸ್ ಚಿಲ್ಡ್ರನ್ ಓದಬೇಕು ಎಂದು ಒತ್ತಾಯಿಸಿದ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ, ಅದರಲ್ಲಿ ಗಾಂಧಿ ಕುಟುಂಬದ ಬಗ್ಗೆ ಏನು ಬರೆದಿದೆ ಎಂದು ಹೇಳಲು ಹೋದರೆ, ಸಮಸ್ಯೆಯಾಗಬಹುದು ಎಂದು ಹೇಳಿದರು.

ಬುಕರ್ ಪ್ರಶಸ್ತಿ ವಿಜೇತ ಕೃತಿ ಮಿಡ್‌ನೈಟ್ಸ್ ಚಿಲ್ಡ್ರನ್‌ನಲ್ಲಿ ಆ ಕಾಲದ ತುರ್ತು ಪರಿಸ್ಥಿತಿ, ಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಮತ್ತು ಅವರ ಪುತ್ರ ಸಂಜಯ್ ಗಾಂಧಿ ಕುರಿತು ಉಲ್ಲೇಖಗಳಿದ್ದವು. ಇಂದಿರಾ ಗಾಂಧಿಯ ಪತಿ ಫಿರೋಜ್ ಗಾಂಧಿ ಸಾವಿನ ಕುರಿತಾಗಿ ಅದರಲ್ಲಿ ಉಲ್ಲೇಖಿಸಲಾಗಿದ್ದು, ಅದರ ವಿರುದ್ಧ ದಿವಂಗತ ಪ್ರಧಾನಿ ಬ್ರಿಟನ್ ನ್ಯಾಯಾಲಯದ ಮೊರೆ ಹೊಕ್ಕಿದ್ದರು.

"ಅಷ್ಟೇ ಅಲ್ಲ, ಜವಾಹರಲಾಲ್ ನೆಹರು, ಮಹಾತ್ಮ ಗಾಂಧಿ ಮುಂತಾದವರ ಆಪ್ತ ಸಹಾಯಕರು ಬರೆದಿರುವ ಪುಸ್ತಕದ ಬಗ್ಗೆಯಾಗಲೀ, ಲಾರ್ಡ್ ಮೌಂಟ್ ಬ್ಯಾಟನ್ ಕುರಿತಾಗಿ ಏನು ಬರೆಯಲಾಗಿದೆ ಎಂಬುದೇ ಮುಂತಾಗಿ ನಾನು ಹೇಳಿಕೆ ನೀಡುವುದಿಲ್ಲ" ಎಂದು ತ್ರಿವೇದಿ ಕುಟುಕಿದರು.

"ಕಾಂಗ್ರೆಸ್ ಮುಖಂಡರು ಆರಾಮವಾಗಿ ಜೈಲಿನಲ್ಲಿ ಜೀವನ ಸಾಗಿಸುತ್ತಿದ್ದರು. ಎಷ್ಟರ ಮಟ್ಟಿಗೆ ಎಂದರೆ, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಅವರು ಪುಸ್ತಕಗಳನ್ನೇ ಬರೆಯಬಲ್ಲವರಾಗಿದ್ದರು. ಆದರೆ, ಸಾವರ್ಕರ್ ಅಂಡಮಾನ್‌ನ ಕುಖ್ಯಾತ ಸೆಲ್ಯುಲಾರ್ ಜೈಲಿನಲ್ಲಿ ಕ್ರೌರ್ಯಕ್ಕೆ ತುತ್ತಾಗಿದ್ದರು" ಎಂದು ತ್ರಿವೇದಿ ಹೇಳಿದರು.

ಜವಾಹರಲಾಲ್ ನೆಹರು ಅವರು ಜೈಲಿನಲ್ಲಿದ್ದಾಗ 'ಡಿಸ್ಕವರಿ ಆಫ್ ಇಂಡಿಯಾ' ಹಾಗೂ "ಗ್ಲಿಂಪ್ಸಸ್ ಆಫ್ ವರ್ಲ್ಡ್ ಹಿಸ್ಟರಿ" ಎಂಬ ಎರಡು ಪುಸ್ತಕಗಳನ್ನು ಬರೆದಿದ್ದರು.

ಈ ವಿವಾದದ ಬಗ್ಗೆ ಮಹಾರಾಷ್ಟ್ರದ ಕಾಂಗ್ರೆಸ್ ಮಿತ್ರಪಕ್ಷವಾಗಿರುವ ಶಿವಸೇನಾತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಇದು ಅವರ ತಲೆಯಲ್ಲಿ ತುಂಬಿರುವ ಹೊಲಸಿನ ಸಂಕೇತ ಎಂದು ಶಿವಸೇನಾ ವಕ್ತಾರ ಸಂಜಯ್ ರಾವುತ್ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT