ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಪಬ್ಲಿಕ್‌ ಟಿವಿ ಸಂಪಾದಕ ಅರ್ನಬ್‌ ಬಂಧನ

Last Updated 4 ನವೆಂಬರ್ 2020, 20:22 IST
ಅಕ್ಷರ ಗಾತ್ರ

ಮುಂಬೈ: ಎರಡು ವರ್ಷಗಳ ಹಿಂದೆ ನಡೆದ ಆತ್ಮಹತ್ಯೆ ಪ್ರಕರಣವೊಂದಕ್ಕೆಸಂಬಂಧಿಸಿದಂತೆ ರಿಪಬ್ಲಿಕ್‌ ಟಿವಿ ಸಂಪಾದಕ ಅರ್ನಬ್‌ ಗೋಸ್ವಾಮಿ ಅವರನ್ನು ಮುಂಬೈ ಪೊಲೀಸರು ಬುಧವಾರ ಬೆಳಗ್ಗೆ ಬಂಧಿಸಿದ್ದಾರೆ.

ಮುಂಬೈನಲ್ಲಿರುವ ಲೋವರ್‌ ಪ್ಯಾರೆಲ್‌ ನಿವಾಸಕ್ಕೆ ಆಗಮಿಸಿದ ಮುಂಬೈ ಅಪರಾಧ ವಿಭಾಗದಲ್ಲಿರುವ(ಸಿಐಡಿ) ಸಚಿನ್‌ ವಾಜೆ ಅವರ ನೇತೃತ್ವದಲ್ಲಿದ್ದ ಪೊಲೀಸರ ತಂಡವು, ಅರ್ನಬ್‌ ಅವರನ್ನು ವಶಕ್ಕೆ ಪಡೆದಿದೆ. ‘ಬಂಧಿಸುವ ಸಂದರ್ಭದಲ್ಲಿ ಪೊಲೀಸರು ಅರ್ನಬ್‌ ಮೇಲೆ ಹಲ್ಲೆ ನಡೆಸಿದ್ದಾರೆ ಹಾಗೂ ಅವರಿಗೆ ನೀರು ಕುಡಿಯಲು ಹಾಗೂ ಔಷಧಿಯನ್ನು ತೆಗೆದುಕೊಳ್ಳಲೂ ಬಿಡಲಿಲ್ಲ’ ಎಂದು ಅರ್ನಬ್‌ ಅವರ ಪತ್ನಿ ಸಮ್ಯಬಾರ್ತ ರೇ ಗೋಸ್ವಾಮಿ ಆರೋಪಿಸಿದ್ದಾರೆ.

‘ನನ್ನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ. ನನ್ನ ಮಗನ ಮೇಲೂ ಹಲ್ಲೆ ನಡೆಸಿದ್ದಾರೆ. ನನ್ನ ಮಾವ, ಅತ್ತೆಯನ್ನು ಭೇಟಿಯಾಗಲೂ ಅವರು ಅವಕಾಶ ನೀಡಲಿಲ್ಲ’ ಎಂದು ಅರ್ನಬ್‌ ಹೇಳಿದರು.

ಅರ್ನಬ್‌ ವಿರುದ್ಧ ಎಫ್‌ಎಐಆರ್‌: ಬಂಧನದ ಸಂದರ್ಭದಲ್ಲಿ ಅರ್ನಬ್‌, ಅವರ ಪತ್ನಿ, ಪುತ್ರ ಹಾಗೂ ಇನ್ನಿಬ್ಬರು ಪೊಲೀಸ್‌ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಮುಂಬೈ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ಪ್ರಕರಣವೇನು?: 2018 ಮೇ ತಿಂಗಳಲ್ಲಿ ಅಲೀಭಾಗ್‌ನಲ್ಲಿರುವ ಫಾರ್ಮ್‌ಹೌಸ್‌ ಒಂದರಲ್ಲಿ ಇಂಟೀರಿಯರ್‌ ಡಿಸೈನರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ 53 ವರ್ಷದ ಅನ್ವಯ್‌ ನಾಯ್ಕ್‌ ಹಾಗೂ ಅವರ ತಾಯಿ 70 ವರ್ಷದ ಕುಮುದಾ ಅವರ ಮೃತದೇಹವೂ ಪತ್ತೆಯಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ 2020ರ ಮೇ ತಿಂಗಳಲ್ಲಿ ಹೇಳಿಕೆ ನೀಡಿದ್ದ ಅನ್ವಯ್‌ ಅವರ ಪತ್ನಿ ಅಕ್ಷತಾ ನಾಯ್ಕ್‌, ‘ಆತ್ಮಹತ್ಯೆಗೂ ಮುನ್ನ ಅನ್ವಯ್‌ ಬರೆದಿದ್ದ ಪತ್ರದಲ್ಲಿ, ಅರ್ನಬ್‌ ಗೋಸ್ವಾಮಿ, ಫಿರೋಜ್‌ ಶೇಖ್‌ ಹಾಗೂ ನಿತೀಶ್‌ ಸರ್ದಾ ನನಗೆ ₹5 ಕೋಟಿಗೂ ಅಧಿಕ ಹಣವನ್ನು ನೀಡಬೇಕಿತ್ತು ಎಂದು ಉಲ್ಲೇಖಿಸಿದ್ದರು’ ಎಂದಿದ್ದರು.

2018ರಲ್ಲಿ ಅಲೀಭಾಗ್‌ ಪೊಲೀಸರು ‘ಆತ್ಮಹತ್ಯೆಗೆ ದುಷ್ಪ್ರೇರಣೆ’ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಆದರೆ 2019ರಲ್ಲಿ ರಾಯಘಡ ಪೊಲೀಸರು ಈ ಪ್ರಕರಣವನ್ನು ಮುಕ್ತಾಯಗೊಳಿಸಿದ್ದರು. ಅಕ್ಷತಾ ಅವರ ಹೇಳಿಕೆಯ ಬಳಿಕ ಮತ್ತು ಅನ್ವಯ್‌ ಪುತ್ರಿ ಅದ್ನ್ಯಾ ಮನವಿ ಬಳಿಕ ಪ್ರಕರಣದ ಕುರಿತು ರಾಜ್ಯ ಸಿಐಡಿಯಿಂದ ತನಿಖೆ ನಡೆಸುವುದಾಗಿ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಭರವಸೆ ನೀಡಿದ್ದರು.

‘ನಮಗೆ ನ್ಯಾಯಬೇಕು’: ‘ನಮಗೆ ನ್ಯಾಯ ಬೇಕು. ನಾವು ನಿರಂತರವಾದ ಒತ್ತಡದಲ್ಲಿದ್ದೇವೆ. ನಮಗೆ ಬೆದರಿಕೆಯನ್ನೂ ಒಡ್ಡಲಾಗಿತ್ತು. ನಮ್ಮ ಚಲನವಲನಗಳ ಮೇಲೂ ನಿಗಾ ಇರಿಸಲಾಗು ತ್ತಿತ್ತು. ನನ್ನ ತಂದೆ ಹಾಗೂ ಅಜ್ಜಿಯ ಸಾವಿಗೆ ಅರ್ನಬ್‌ ಗೋಸ್ವಾಮಿ ಹಾಗೂ ಇತರೆ ಇಬ್ಬರು ಆರೋಪಿಗಳೇ ಕಾರಣ’ ಎಂದು ಪುತ್ರಿ ಅದ್ನ್ಯಾ ಆರೋಪಿಸಿದರು.

ಸಂಪಾದಕರ ಒಕ್ಕೂಟ ಖಂಡನೆ

ನವದೆಹಲಿ/ ಬೆಂಗಳೂರು: ರಿಪಬ್ಲಿಕ್‌ ಟಿವಿ ಸಂಪಾದಕ ಅರ್ನಬ್‌ ಗೋಸ್ವಾಮಿ ಅವರ ಬಂಧನದ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಭಾರತೀಯ ಸಂಪಾದಕರ ಒಕ್ಕೂಟವು (ಎಡಿಟರ್ಸ್‌ ಗಿಲ್ಡ್‌ ಆಫ್‌ ಇಂಡಿಯಾ) ಘಟನೆಯನ್ನು ಖಂಡಿಸಿದೆ.

ಬೆಂಗಳೂರು ಸಂಪಾದಕರ ಗಿಲ್ಡ್‌ ಕೂಡಾ ಅರ್ನಬ್‌ ಅವರ ಬಂಧನವನ್ನು ಖಂಡಿಸಿದೆ.

‘ಈ ಪ್ರಕರಣದಲ್ಲಿ ಅವರ ಬಂಧನ ನ್ಯಾಯಯುತವಾಗಿದೆಯೇ‘ ಎಂದು ಭಾರತೀಯ ಸಂಪಾದಕರ ಒಕ್ಕೂಟವು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರನ್ನು ಕೇಳಿದೆ. ಅಧಿಕಾರ ಬಳಸಿಕೊಂಡು ಮಾಧ್ಯಮದ ವಿಮರ್ಶಾತ್ಮಕ ವರದಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಭಾರತೀಯ ಸಂಪಾದಕರ ಒಕ್ಕೂಟವು ಹೇಳಿದೆ.

'ವಿರೋಧದಲ್ಲೂ ಆಯ್ಕೆ ಏಕೆ?'

ನವದೆಹಲಿ: ಅರ್ನಬ್‌ ಗೋಸ್ವಾಮಿ ಬಂಧನವನ್ನು ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಹಲವು ಹಿರಿಯ ನಾಯಕರು ಖಂಡಿಸಿದ್ದಾರೆ.

ಕಾಂಗ್ರೆಸ್‌ ಅನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿರುವ ನಾಯಕರು, ‘ರಾಜ್ಯ ಸರ್ಕಾರ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. 1975ರ ತುರ್ತುಪರಿಸ್ಥಿತಿಯನ್ನು ಈ ಘಟನೆ ನೆನಪಿಸುತ್ತದೆ’ ಎಂದು ಟೀಕಿಸಿದೆ.ಇದಕ್ಕೆ ಪ್ರತಿಯಾಗಿ ‘ವಿರೋಧದಲ್ಲೂ ಆಯ್ಕೆ ಏಕೆ’ ಎಂದು ಬಿಜೆಪಿಗೆ ಕಾಂಗ್ರೆಸ್‌ ತಿರುಗೇಟು ನೀಡಿದೆ.

ಪತ್ರಕರ್ತರ ಗುಂಪೊಂದು ಬಿಜೆಪಿ ನಡೆಯನ್ನು ಟೀಕಿಸಿದೆ. ‘ಬಿಜೆಪಿ ಆಡಳಿತ ಇರುವ ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರದಲ್ಲಿ ಪತ್ರಕರ್ತರ ಮೇಲೆ ಹಾಗೂ ಪತ್ರಿಕಾ ಸ್ವಾತಂತ್ರ್ಯದ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ನೀವೆಲ್ಲಿದ್ದಿರಿ’ ಎಂದು ಪ್ರಶ್ನಿಸಿದೆ.

ರಾಜ್ಯ ಸರ್ಕಾರವು ಅಧಿಕಾರದ ದುರ್ಬಳಕೆ ಮಾಡಿಕೊಳ್ಳುತ್ತಿದೆ. ವ್ಯಕ್ತಿಯೊಬ್ಬರ ಸ್ವಾತಂತ್ರ್ಯ ಹಾಗೂ ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿಯು ತುರ್ತುಪರಿಸ್ಥಿತಿಯ ಕಾಲವನ್ನು ನೆನಪಿಸುತ್ತದೆ.

–ಅಮಿತ್‌ ಶಾ,ಗೃಹ ಸಚಿವ

ತುರ್ತುಪರಿಸ್ಥಿತಿ ನಂತರ ಇಂದಿರಾಗಾಂಧಿ ಅವರನ್ನು ಭಾರತ ಕ್ಷಮಿಸಲಿಲ್ಲ. ಈಗ, ಅಧಿಕಾರ ದುರ್ಬಳಕೆ ಮಾಡಿದ ಸೋನಿಯಾ–ರಾಹುಲ್‌ ಗಾಂಧಿ ಅವರನ್ನೂ ಭಾರತವು ಶಿಕ್ಷಿಸಲಿದೆ

–ಜೆ.ಪಿ.ನಡ್ಡಾ,ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಮಹಾವಿಕಾಸ ಅಘಾಡಿ ಸರ್ಕಾರವು ಯಾರ ವಿರುದ್ಧವೂ ದ್ವೇಷ ರಾಜಕಾರಣ ಮಾಡಿಲ್ಲ. ಬಂಧನದ ವಿಚಾರದಲ್ಲಿ ರಾಜ್ಯ ಸರ್ಕಾರದ ಮಧ್ಯಪ್ರವೇಶವಿಲ್ಲ.

–ಸಂಜಯ್‌ ರಾವುತ್‌,ಶಿವಸೇನಾ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT