ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಹಿನಿಯಾಟ್ಟಂ: ವಿವಾದದ ಕಿಡಿ ಹೊತ್ತಿಸಿದ ಕಲಾವಿದರ ಮೈಬಣ್ಣದ ಹೇಳಿಕೆ

Published 21 ಮಾರ್ಚ್ 2024, 15:23 IST
Last Updated 21 ಮಾರ್ಚ್ 2024, 15:23 IST
ಅಕ್ಷರ ಗಾತ್ರ

ತಿರುವನಂತಪುರ: ಮೋಹಿನಿಯಾಟ್ಟಂ ಕಲಾವಿದರೊಬ್ಬರನ್ನು ಗುರಿಯಾಗಿಸಿ ಕಲಾವಿದೆ ಕಲಾಮಂಡಲಂ ಸತ್ಯಭಾಮಾ ನೀಡಿರುವ ಹೇಳಿಕೆ ಕೇರಳದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ.

ಜನಾಂಗೀಯ ನಿಂದನೆ ಎಂಬ ಟೀಕೆಗಳು ಕೇಳಿಬಂದಿವೆ. ಇದನ್ನು ನಿರಾಕರಿಸಿರುವ ಸತ್ಯಭಾಮಾ ಅವರು, ‘ನಾನು ಯಾವ ಕಲಾವಿದರನ್ನೂ ಗುರಿಯಾಗಿಸಿ ಈ ಹೇಳಿಕೆ ನೀಡಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

‘ಕಾಗೆ ಬಣ್ಣದಂತಹ ಮೈಬಣ್ಣ ಹೊಂದಿದ ಪುರುಷ ಕಲಾವಿದನೊಬ್ಬ ನೀಡಿರುವ ಮೋಹಿನಿಯಾಟ್ಟಂ ಪ್ರದರ್ಶನ ಅಶ್ಲೀಲವೆನಿಸುತ್ತದೆ. ಪುರುಷ ತನ್ನ ಕಾಲುಗಳನ್ನು ಅಗಲಿಸಿ ನೃತ್ಯ ಮಾಡುವುದನ್ನು ನೋಡುವುದು ವಿಲಕ್ಷಣವೆನಿಸುತ್ತದೆ’ ಎಂದು ಸತ್ಯಭಾಮಾ ಹೇಳಿದ್ದಾರೆ.

ಯೂಟ್ಯೂಬ್‌ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಈ ಮಾತುಗಳನ್ನಾಡಿರುವ ಸತ್ಯಭಾಮಾ, ‘ಆ ಕಲಾವಿದನ ತಾಯಿ ಕೂಡ ಆತನ ನೃತ್ಯ ಪ್ರದರ್ಶನ ಸಹಿಸಲಾರಳು’ ಎಂದಿದ್ದಾರೆ.

ತಮ್ಮ ಮಾತುಗಳಲ್ಲಿ ಯಾವುದೇ ಕಲಾವಿದನ ಹೆಸರನ್ನು ಸತ್ಯಭಾಮಾ ಉಲ್ಲೇಖ ಮಾಡಿಲ್ಲವಾದರೂ, ಮೋಹಿನಿಯಾಟ್ಟಂ ಕಲಾವಿದ ಆರ್‌.ಎಲ್‌.ವಿ.ರಾಮಕೃಷ್ಣನ್ ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

‘ಚಾಲಕ್ಕುಡಿ ಮೂಲದ ಕಲಾವಿದನನ್ನು ಗುರಿಯಾಗಿಸಿ ಸತ್ಯಭಾಮಾ ಈ ಟೀಕೆ ಮಾಡಿದ್ದಾರೆ. ಚಾಲಕ್ಕುಡಿ ನನ್ನ ಸ್ವಂತ ಊರು. ಹೀಗಾಗಿ, ನನ್ನನ್ನೇ ಗುರಿಯಾಗಿಸಿ ಅವರು ಈ ಟೀಕೆ ಮಾಡಿರುವುದು ಸ್ಪಷ್ಟ’ ಎಂದು ರಾಮಕೃಷ್ಣನ್‌ ಹೇಳಿದ್ದಾರೆ.

ಮೋಹಿನಿಯಾಟ್ಟಂ ಕುರಿತು ಪಿಎಚ್‌.ಡಿ ಪದವಿ ಪಡೆದಿರುವ ರಾಮಕೃಷ್ಣನ್‌ ಅವರು, ದಿವಂಗತ ನಟ ಕಲಾಭವನ ಮಣಿ ಅವರ ಸಹೋದರ. 

‘ಈ ರೀತಿಯ ಜನಾಂಗೀಯ ನಿಂದನೆ ಮಾಡಿರುವುದಕ್ಕಾಗಿ ಸತ್ಯಭಾಮಾ ವಿರುದ್ಧ ಕಾನೂನುಕ್ರಮ ಕೈಗೊಳ್ಳುವೆ. ನನ್ನ ಕುರಿತು ಅವರು ದ್ವೇಷ ಸಾಧಿಸುತ್ತಲೇ ಬಂದಿದ್ದಾರೆ. ಈ ಹಿಂದೆಯೂ ಹಲವು ಬಾರಿ ನನ್ನನ್ನು ಅಮಾನಿಸಿದ್ದಾರೆ’ ಎಂದು ರಾಮಕೃಷ್ಣನ್ ಹೇಳಿದ್ದಾರೆ.

ಸತ್ಯಭಾಮಾ ಅವರ ಹೇಳಿಕೆಗೆ ಸಮಾಜದ ವಿವಿಧ ಸ್ತರದ ಜನರಿಂದಲೂ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಆದರೆ, ಸತ್ಯಭಾಮಾ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ‘ಮೋಹಿನಿಯಾಟ್ಟಂ ಪ್ರದರ್ಶಿಸುವವರಿಗೆ ಗೌರವರ್ಣ ಇರಬೇಕು. ಮೈಬಣ್ಣವೇ ಈ ನೃತ್ಯಪ್ರಕಾರದ ತಿರುಳು’ ಎಂದಿರುವ ಅವರು ‘ನಾನು ಎಲ್ಲಿಯೂ ರಾಮಕೃಷ್ಣನ್ ಅವರ ಹೆಸರು ಪ್ರಸ್ತಾಪಿಸಿಲ್ಲ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT