ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಟಿಐ: ಆರು ಆಯೋಗಗಳಿಗೆ ಮುಖ್ಯಸ್ಥರಿಲ್ಲ

ಮಾಹಿತಿ ಹಕ್ಕು ವ್ಯವಸ್ಥೆಯ ಪರಿಸ್ಥಿತಿ ಕುರಿತು ಎಸ್‌ಎನ್‌ಎಸ್‌ ವರದಿ
Published 11 ಅಕ್ಟೋಬರ್ 2023, 15:39 IST
Last Updated 11 ಅಕ್ಟೋಬರ್ 2023, 15:39 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಮಾಹಿತಿ ಹಕ್ಕು ವ್ಯವಸ್ಥೆಯು ಜಾರಿಗೆ ಬಂದು ಗುರುವಾರಕ್ಕೆ 18 ವರ್ಷಗಳು ತುಂಬುತ್ತಿದೆ. ಈ ಹೊತ್ತಿನಲ್ಲಿ ಮೂರು ರಾಜ್ಯ ಮಾಹಿತಿ ಆಯೋಗಗಳು ಕೆಲಸ ಮಾಡುತ್ತಿಲ್ಲ, ಕೇಂದ್ರ ಮಾಹಿತಿ ಆಯೋಗ (ಸಿಐಸಿ) ಸೇರಿದಂತೆ ಆರು ಆಯೋಗಗಳಿಗೆ ಮುಖ್ಯಸ್ಥರಿಲ್ಲ. 3.21 ಲಕ್ಷ ದೂರುಗಳು ಹಾಗೂ ಮೇಲ್ಮನವಿಗಳು ವಿಚಾರಣೆಯ ಹಂತದಲ್ಲಿ ಬಾಕಿ ಇವೆ.

‘2022ರಿಂದ 2023ರ ನಡುವೆ ದೇಶದ ಮಾಹಿತಿ ಆಯೋಗಗಳ ಸಾಧನೆಯ ವಿವರ’ ಹೆಸರಿನಲ್ಲಿ ‘ಸತರ್ಕ ನಾಗರಿಕ ಸಂಘಟನೆ’ (ಎಸ್‌ಎನ್‌ಎಸ್) ಸಿದ್ಧಪಡಿಸಿರುವ ವರದಿಯು ಆರ್‌ಟಿಐ ವ್ಯವಸ್ಥೆಯ ಸ್ಥಿತಿಯನ್ನು ತಿಳಿಸಿದೆ. 2022ರ ಜುಲೈನಿಂದ 2023ರ ಜೂನ್‌ವರೆಗಿನ ಪರಿಸ್ಥಿತಿಯನ್ನು ಈ ವರದಿಯಲ್ಲಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ.

ಮಾಹಿತಿ ಆಯೋಗವು ಕೆಲಸ ಮಾಡುತ್ತಿಲ್ಲದ ರಾಜ್ಯಗಳ ಸಂಖ್ಯೆ ಎರಡು ಪಟ್ಟಾಗಿದೆ, ಬಾಕಿ ಉಳಿದಿರುವ ಪ್ರಕರಣಗಳ/ಅರ್ಜಿಗಳ ಸಂಖ್ಯೆಯು ಏಳು ಸಾವಿರದಷ್ಟು ಹೆಚ್ಚಾಗಿದೆ ಮತ್ತು ಮುಖ್ಯಸ್ಥರು ಇಲ್ಲದ ಆಯೋಗಗಳ ಸಂಖ್ಯೆಯು ಶೇಕಡ 50ರಷ್ಟು ಹೆಚ್ಚಾಗಿದೆ ಎಂದು ವರದಿ ಹೇಳಿದೆ.

ಜಾರ್ಖಂಡ್‌ನಲ್ಲಿ 37 ತಿಂಗಳುಗಳಿಂದ, ತ್ರಿಪುರದಲ್ಲಿ 27 ತಿಂಗಳುಗಳಿಂದ, ತೆಲಂಗಾಣದಲ್ಲಿ ಏಳು ತಿಂಗಳುಗಳಿಂದ ಮತ್ತು ಮಿಜೋರಾಂನಲ್ಲಿ ಹತ್ತು ದಿನಗಳಿಂದ (ಜೂನ್‌ 30ಕ್ಕೆ ಅನ್ವಯವಾಗುವಂತೆ) ಮಾಹಿತಿ ಆಯೋಗಗಳು ಸಂಪೂರ್ಣವಾಗಿ ನಿಷ್ಕ್ರಿಯವಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ. ಅಕ್ಟೋಬರ್ 5ರಂದು ಮಿಜೋರಾಂನಲ್ಲಿ ಮುಖ್ಯ ಮಾಹಿತಿ ಆಯುಕ್ತ ಹಾಗೂ ಆಯುಕ್ತ ಅಧಿಕಾರ ವಹಿಸಿಕೊಂಡಿದ್ದಾರೆ.

ಐದು ರಾಜ್ಯಗಳಲ್ಲಿ ಮಾಹಿತಿ ಆಯೋಗಕ್ಕೆ ಮುಖ್ಯಸ್ಥರಿಲ್ಲ. ಮಣಿಪುರದಲ್ಲಿ 56 ತಿಂಗಳುಗಳಿಂದ, ಛತ್ತೀಸಗಢದಲ್ಲಿ 2022ರ ಡಿಸೆಂಬರ್‌ನಿಂದ, ಮಹಾರಾಷ್ಟ್ರದಲ್ಲಿ ಏಪ್ರಿಲ್‌ನಿಂದ, ಬಿಹಾರದಲ್ಲಿ ಮೇ ತಿಂಗಳಿನಿಂದ ಮತ್ತು ಪಂಜಾಬ್‌ನಲ್ಲಿ ಸೆಪ್ಟೆಂಬರ್‌ನಿಂದ ಮಾಹಿತಿ ಆಯೋಗಕ್ಕೆ ಮುಖ್ಯಸ್ಥರು ಇಲ್ಲ. ಆಯುಕ್ತರನ್ನು ಸಕಾಲದಲ್ಲಿ ನೇಮಕ ಮಾಡದೆ ಇರುವುದರಿಂದ ಮೇಲ್ಮನವಿಗಳು ಹಾಗೂ ದೂರುಗಳು ಬಾಕಿ ಉಳಿಯುವುದು ಹೆಚ್ಚುತ್ತ ಸಾಗುತ್ತದೆ ಎಂದು ವರದಿ ಹೇಳಿದೆ.

ಪಶ್ಚಿಮ ಬಂಗಾಳದಲ್ಲಿ ಒಟ್ಟು 11,871 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ. ಪ್ರತಿ ತಿಂಗಳು ಇತ್ಯರ್ಥವಾಗುವ ಮೇಲ್ಮನವಿಗಳ ಸರಾಸರಿ ಸಂಖ್ಯೆಯ ಆಧಾರದಲ್ಲಿ ಹೇಳುವುದಾದರೆ, ಈ ವರ್ಷದ ಜುಲೈ 1ರಂದು ಅಲ್ಲಿ ಸಲ್ಲಿಕೆಯಾದ ಮೇಲ್ಮನವಿಯು ಇನ್ನು 24 ವರ್ಷಗಳ ನಂತರದಲ್ಲಿ ವಿಲೇವಾರಿ ಕಾಣಲಿದೆ!

ಇದಕ್ಕೆ ಹೋಲಿಸಿದರೆ ಕರ್ನಾಟಕದ ಸ್ಥಿತಿ ಉತ್ತಮವಾಗಿದೆ. ಇಲ್ಲಿ 41,047 ಪ್ರಕರಣಗಳು ಬಾಕಿ ಇವೆಯಾದರೂ, ಈ ವರ್ಷದ ಜುಲೈ 1ರಂದು ಸಲ್ಲಿಕೆಯಾದ ಮೇಲ್ಮನವಿಯು ಒಂದು ವರ್ಷ ಹನ್ನೊಂದು ತಿಂಗಳುಗಳಲ್ಲಿ ಇತ್ಯರ್ಥವಾಗಬಹುದು ಎಂದು ವರದಿಯು ಅಂದಾಜು ಮಾಡಿದೆ. ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆಯ ಪಟ್ಟಿಯಲ್ಲಿ ಮಹಾರಾಷ್ಟ್ರವು ಮೊದಲ ಸ್ಥಾನದಲ್ಲಿದೆ. ಅಲ್ಲಿ ಒಟ್ಟು 1.11 ಲಕ್ಷ ಪ್ರಕರಣಗಳು ಇತ್ಯರ್ಥ ಆಗಬೇಕಿವೆ.

ದಂಡ ವಿಧಿಸುವ ಸಾಧ್ಯತೆ ಇದ್ದ ಶೇಕಡ 91ರಷ್ಟು ಪ್ರಕರಣಗಳಲ್ಲಿ ಮಾಹಿತಿ ಆಯೋಗಗಳು ದಂಡ ವಿಧಿಸಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT