ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ನ ಹಾರ್ಕಿವ್‌ ನಗರದಲ್ಲಿದ್ದ ವೈದ್ಯ ವಿದ್ಯಾರ್ಥಿ ಹಾವೇರಿಯ ನವೀನ್‌ ಬಲಿ

ರಷ್ಯಾದ ಶೆಲ್‌ ದಾಳಿಯಲ್ಲಿ ಸಾವು
Last Updated 1 ಮಾರ್ಚ್ 2022, 23:00 IST
ಅಕ್ಷರ ಗಾತ್ರ

ನವದೆಹಲಿ: ರಷ್ಯಾ–ಉಕ್ರೇನ್‌ ಸಂಘರ್ಷಕ್ಕೆ ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿಯೊಬ್ಬರು ಬಲಿಯಾಗಿದ್ದಾರೆ. ಹಾವೇರಿ ಜಿಲ್ಲೆ ಚಳಗೇರಿಯ ನವೀನ್‌ ಶೇಖರಪ್ಪ ಗ್ಯಾನಗೌಡರ್‌ ಉಕ್ರೇನ್‌ನ ಹಾರ್ಕಿವ್‌ನಲ್ಲಿ ನಾಲ್ಕನೇ ವರ್ಷದ ವೈದ್ಯ ಪದವಿ ಕಲಿಯುತ್ತಿದ್ದರು.ಹಾರ್ಕಿವ್‌ನಲ್ಲಿ ಬಂಕರ್‌ನಲ್ಲಿದ್ದ ನವೀನ್‌, ಹಣ ವಿನಿಮಯ ಮಾಡಲು ಮತ್ತು ಆಹಾರ ತರುವುದಕ್ಕಾಗಿ ಮಂಗಳವಾರ ಬೆಳಿಗ್ಗೆ ಹೊರ ಹೋಗಿದ್ದರು. ಈ ವೇಳೆ ರಷ್ಯಾ ನಡೆಸಿದ ಶೆಲ್‌ ದಾಳಿಗೆ ಅವರು ಸಿಲುಕಿದರು ಎಂದು ನವೀನ್‌ ಅವರ ಮಾವ ತಿಳಿಸಿದ್ದಾರೆ. ನವೀನ್‌ ಸಾವನ್ನು ವಿದೇಶಾಂಗ ಸಚಿವಾಲಯವೂ ದೃಢಪಡಿಸಿದೆ.

ಕೀವ್‌ನಲ್ಲಿರುವ ಎಲ್ಲ ಭಾರತೀಯರು ತಕ್ಷಣವೇ ಸಿಕ್ಕ ಸಿಕ್ಕ ಸಂಚಾರ ಸೌಲಭ್ಯ ಬಳಸಿ ನಗರ ತೊರೆದು ಹೋಗಬೇಕು ಎಂದು ಭಾರತ ಸರ್ಕಾರ ಹೇಳಿದ ಕೆಲವೇ ತಾಸಿನಲ್ಲಿ ನವೀನ್‌ ಹತ್ಯೆ ಆಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್‌–ರಷ್ಯಾ ಸಂಘರ್ಷಕ್ಕೆ ಸಂಬಂಧಿಸಿ 48 ತಾಸುಗಳಲ್ಲಿ ಉನ್ನತ ಮಟ್ಟದ ನಾಲ್ಕು ಸಭೆಗಳನ್ನು ನಡೆಸಿದ್ದಾರೆ. ಮಂಗಳವಾರವೂ ಅವರು ಸಭೆ ನಡೆಸಿದ್ದಾರೆ.

ಮೋದಿ ಅವರು ನವೀನ್‌ ಅವರ ತಂದೆಯ ಜತೆಗೆ ದೂರವಾಣಿ ಮೂಲಕ ಮಾತನಾಡಿ ಸಾಂತ್ವನ ಹೇಳಿದ್ದಾರೆ.

‘ಉಕ್ರೇನ್‌ನಲ್ಲಿ ಭಾರತದ ವಿದ್ಯಾರ್ಥಿ ನವೀನ್‌ ಬಲಿಯಾದ ದುರಂತ ಸುದ್ದಿ ಬಂದಿದೆ. ನವೀನ್ ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಸಾಂತ್ವನಗಳು. ಉಕ್ರೇನ್‌ನಿಂದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತೆರವು ಮಾಡಲು ಭಾರತ ಸರ್ಕಾರವು ವ್ಯವಸ್ಥಿತವಾದ ಯೋಜನೆ ಹಾಕಿಕೊಳ್ಳಬೇಕು ಎಂಬುದನ್ನು ನಾನು ಮತ್ತೆ ಹೇಳುತ್ತಿದ್ದೇನೆ. ಇಲ್ಲಿ ಪ್ರತಿಯೊಂದು ನಿಮಿಷವೂ ಮಹತ್ವದ್ದು’ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ತೆರವಿಗೆ ವಾಯುಪಡೆ: ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ತೆರವಿಗೆ ಭಾರತೀಯ ವಾಯುಪಡೆ ಕೂಡ ಕೈಜೋಡಿಸಬೇಕು ಎಂದು ಪ್ರಧಾನಿ ಮಂಗಳವಾರ ಹೇಳಿದ್ದಾರೆ. ವಾಯುಪಡೆಯು ಸಿ–17 ವಿಮಾನಗಳನ್ನು ಜನರ ತೆರವಿಗೆ ನಿಯೋಜಿಸುವ ಸಾಧ್ಯತೆ ಇದೆ. 300 ಜನರನ್ನು ಕರೆದೊಯ್ಯುವ ಸಾಮರ್ಥ್ಯ ಈ ವಿಮಾನಕ್ಕೆ ಇದೆ. ಈವರೆಗೆ ಖಾಸಗಿ ವಿಮಾನಯಾನ ಸಂಸ್ಥೆಗಳು ಮಾತ್ರ ತೆರವು ಕಾರ್ಯಾಚರಣೆ ‘ಆಪರೇಷನ್‌ ಗಂಗಾ’ದಲ್ಲಿ ಭಾಗಿಯಾಗಿದ್ದವು. ಉಕ್ರೇನ್‌ ಜತೆಗೆ ಭೂ ಗಡಿ ಹೊಂದಿರುವ ರೊಮೇನಿಯಾ ಮತ್ತು ಹಂಗೆರಿ ಮೂಲಕ ಭಾರತೀಯರ ತೆರವು ಕಾರ್ಯಾಚರಣೆ ನಡೆಯುತ್ತಿದೆ.

ರಾಯಭಾರಿಗಳ ಜತೆ ಮಾತು: ಭಾರತದಲ್ಲಿರುವ ರಷ್ಯಾ ಮತ್ತು ಉಕ್ರೇನ್‌ ರಾಯಭಾರಿಗಳನ್ನು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ ಅವರು ಕರೆಸಿಕೊಂಡು ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರು ಸುರಕ್ಷಿತವಾಗಿ ಹೊರ ಬರುವುದನ್ನು ಖಾತರಿಪಡಿಸಬೇಕು ಎಂದಿದ್ದಾರೆ.

ರಷ್ಯಾ ಮತ್ತು ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರಿಗಳಾದ ಪವನ್‌ ಕಪೂರ್‌ ಮತ್ತು ಪಾರ್ಥ ಸತ್ಪತಿ ಅವರು ಆಯಾ ದೇಶಗಳ ಸರ್ಕಾರದ ಜತೆಗೆ ಮಾತುಕತೆ ನಡೆಸಿದ್ದಾರೆ. ಭಾರತದ ವಿದ್ಯಾರ್ಥಿಗಳು ಸುರಕ್ಷಿತವಾಗಿ ಸ್ವದೇಶಕ್ಕೆ ಬರುವುದನ್ನು ಖಾತರಿಪಡಿಸಬೇಕು ಎಂದು ಕೋರಿದ್ದಾರೆ.

ಭಾರತಕ್ಕೆ ಹೊಸದಾಗಿ ನೇಮಕವಾಗಿರುವ ರಷ್ಯಾ ರಾಯಭಾರಿ ಡೆನಿಸ್‌ ಅಲಿಪೊವ್‌ ಮತ್ತು ಉಪ ರಾಯಭಾರಿ ರೋಮನ್‌ ಬಬುಷ್ಕಿನ್‌ ಅವರನ್ನು ಶೃಂಗ್ಲಾ ಅವರು ಕರೆಸಿಕೊಂಡಿದ್ದಾರೆ.

ಮಾಸ್ಕೊದ ಭಾರತೀಯ ರಾಯಭಾರ ಕಚೇರಿಯು ಉಕ್ರೇನ್‌ ಗಡಿಗೆ ಸಮೀಪದಲ್ಲಿರುವ ರಷ್ಯಾದ ನಗರ ಬೆಲ್‌ಗರೊಡ್‌ನಲ್ಲಿ ತಂಡವೊಂದನ್ನು ನಿಯೋಜಿಸಿದೆ. ಹಾರ್ಕಿವ್‌ ಮತ್ತು ಇತರ ಸ್ಥಳಗಳಿಂದ ಭಾರತೀಯರನ್ನು ತೆರವು ಮಾಡಲು ನೆರವಾಗಲು ಈ ಕ್ರಮ ಕೈಗೊಳ್ಳಲಾಗಿದೆ.

ನವೀನ್‌ ಶೇಖರಪ್ಪ ಗ್ಯಾನಗೌಡರ್‌
ನವೀನ್‌ ಶೇಖರಪ್ಪ ಗ್ಯಾನಗೌಡರ್‌

*ಉಕ್ರೇನ್‌ನ ಎರಡನೇ ಅತ್ಯಂತ ದೊಡ್ಡ ನಗರ ಹಾರ್ಕಿವ್‌ ಮೇಲೆ ರಷ್ಯಾದ ದಾಳಿ ತೀವ್ರಗೊಂಡಿದೆ. ಅಲ್ಲಿನ ಸ್ಥಳೀಯ ಆಡಳಿತ ಕಟ್ಟಡವು ದಾಳಿಯಲ್ಲಿ ಧ್ವಂಸವಾಗಿದೆ. ಹತ್ತು ಮಂದಿ ಈ ಕ್ಷಿಪಣಿ ದಾಳಿಗೆ ಬಲಿಯಾಗಿದ್ದಾರೆ.

*ಉಕ್ರೇನ್‌ನಲ್ಲಿ ಈವರೆಗೆ 536 ಮಂದಿ ನಾಗರಿಕರು ದಾಳಿಗೆ ಬಲಿಯಾಗಿದ್ದಾರೆ. ಅವರಲ್ಲಿ 13 ಮಕ್ಕಳು ಇದ್ದಾರೆ. 400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.

*ಉಕ್ರೇನ್‌ನ ಬಂದರು ನಗರ ಮರಿಯುಪೊಲ್‌ನಲ್ಲಿ ದಾಳಿಯಿಂದಾಗಿ ವಿದ್ಯುತ್‌ ಕಡಿತಗೊಂಡಿದೆ.

*6.60 ಲಕ್ಷ ಮಂದಿ ಕಳೆದ ಐದು ದಿನಗಳಲ್ಲಿ ಉಕ್ರೇನ್‌ ತೊರೆದು ನೆರೆಯ ದೇಶಗಳಲ್ಲಿ ಆಶ್ರಯ ಪಡೆದಿದ್ದಾರೆ. 10 ಲಕ್ಷಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿದ್ದಾರೆ ಎಂದು ವಿಶ್ವಸಂಸ್ಥೆ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT