ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲಿಂಗ ದಂಪತಿಗೆ ಸಾಮಾಜಿಕ ಸೌಲಭ್ಯ ನೀಡಿ: ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌

Published 27 ಏಪ್ರಿಲ್ 2023, 20:35 IST
Last Updated 27 ಏಪ್ರಿಲ್ 2023, 20:35 IST
ಅಕ್ಷರ ಗಾತ್ರ

ನವದೆಹಲಿ: ಸಲಿಂಗಿಗಳ ಮದುವೆಗೆ ಕಾನೂನಿನಡಿ ಮಾನ್ಯತೆ ಇಲ್ಲದಿದ್ದರೂ, ಅವರಿಗೆ ಜಂಟಿ ಬ್ಯಾಂಕ್‌ ಖಾತೆ, ವಿಮಾ ಪಾಲಿಸಿಗಳಲ್ಲಿ ನಾಮನಿರ್ದೇಶನದಂತಹ ಸಾಮಾಜಿಕ ಸೌಲಭ್ಯಗಳನ್ನು ನೀಡುವ ಕುರಿತು ಮಾರ್ಗೋಪಾಯಗಳನ್ನು ಕಂಡುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಗುರುವಾರ ಸೂಚಿಸಿದೆ.

ಸಲಿಂಗ ಮದುವೆಗೆ ಮಾನ್ಯತೆ ನೀಡುವುದಕ್ಕೆ ಸಂಬಂಧಿಸಿ ಸಂಸತ್‌ ನಿರ್ಧಾರ ಕೈಗೊಳ್ಳಬೇಕು ಎಂಬ ಕೇಂದ್ರದ ವಾದಕ್ಕೆ ಮೌಖಿಕವಾಗಿ ಸಮ್ಮತಿ ಸೂಚಿಸಿದ ನಂತರ ಸುಪ್ರೀಂಕೋರ್ಟ್‌ ಈ ಮಾತನ್ನು ಹೇಳಿತು.

ಈ ವಿಷಯಕ್ಕೆ ಸಂಬಂಧಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ಐವರು ಸದಸ್ಯರಿರುವ ಸಂವಿಧಾನ ಪೀಠ ನಡೆಸಿತು.

ಕೇಂದ್ರದ ಪರ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್ ತುಷಾರ್‌ ಮೆಹ್ತಾ, ‘ಕಾನೂನು ಮಾನ್ಯತೆ ಇಲ್ಲದಿದ್ದಾಗ ಸಲಿಂಗ ದಂಪತಿ ಎದುರಿಸಬಹುದಾದ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸರ್ಕಾರ ಕ್ರಮ ತೆಗೆದುಕೊಳ್ಳಬಹುದು’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಕಾನೂನು ಮಾನ್ಯತೆ ಇಲ್ಲದಿದ್ದಾಗಲೂ ಸಲಿಂಗ ದಂಪತಿಗೆ ನೀಡಬಹುದಾದ ಸಾಮಾಜಿಕ ಸೌಲಭ್ಯಗಳಿಗೆ ಸಂಬಂಧಿಸಿದ ಪ್ರತಿಕ್ರಿಯೆಯನ್ನು ಮೇ 3ರಂದು ಸಲ್ಲಿಸಬೇಕು’ ಎಂದು ಸೂಚಿಸಿತು.

ಇದಕ್ಕೂ ಮುನ್ನ ವಾದ ಮಂಡಿಸಿದ ಮೆಹ್ತಾ, ‘ಒಂದು ವೇಳೆ ಸಲಿಂಗಿಗಳ ಮದುವೆಗೆ ಕಾನೂನು ಮಾನ್ಯತೆ ನೀಡಿದರೆ, ಇಂಥ ವೈವಾಹಿಕ ಸಂಬಂಧವನ್ನು ಪ್ರಶ್ನಿಸಿ ಯಾರಾದರೂ ಕೋರ್ಟ್‌ ಮೆಟ್ಟಿಲೇರಬಹುದು. ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ಸರ್ಕಾರಕ್ಕೆ ಅಧಿಕಾರ ಇಲ್ಲ ಎಂಬುದಾಗಿ ವಾದಿಸಬಹುದು’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಒಟ್ಟಿಗೆ ಬಾಳುವ ಹಕ್ಕು ಮೂಲಭೂತ ಹಕ್ಕಾಗಿದೆ ಎಂಬುದನ್ನು ಒಪ್ಪಿಕೊಂಡ ಮೇಲೆ, ಇಂಥ ಸಂಬಂಧಗಳಿಂದ ಸಮಾಜದ ಮೇಲಾಗುವ ಪರಿಣಾಮಗಳಿಗೂ ಕಾನೂನು ಮಾನ್ಯತೆ ನೀಡುವುದು ಸರ್ಕಾರದ ಬಾಧ್ಯತೆಯಾಗಿರುತ್ತದೆ. ಅಂಥ ಸಂದರ್ಭದಲ್ಲಿ ನ್ಯಾಯಾಲಯವು (ಸಲಿಂಗ) ಮದುವೆ ವಿಷಯದಲ್ಲಿ ಏನೂ ನಿರ್ಣಯ ಕೈಗೊಳ್ಳುವುದಿಲ್ಲ’ ಎಂದು ಹೇಳಿತು.

‘ಇಂಥ ಸಂಬಂಧಗಳಿಗೆ ಸುರಕ್ಷಿತ ಭಾವನೆ ಮೂಡಬೇಕು. ಅವರ ಪ್ರಗತಿಗೂ ಅವಕಾಶ ಇರಬೇಕು. ಅಲ್ಲದೇ, ಅವರನ್ನು ಸಮಾಜವು ಬಹಿಷ್ಕರಿಸದಂತೆ ಮಾಡಲು ಏನು ಕ್ರಮ ತೆಗೆದುಕೊಳ್ಳಬೇಕು ಎಂಬ ಬಗ್ಗೆಯೂ ತಿಳಿಸಬೇಕು’ ಎಂದು ನ್ಯಾಯಪೀಠ ಸೂಚಿಸಿತು.

‘ದೇಶದಲ್ಲಿ ಪ್ರಾತಿನಿಧಿಕ ಪ್ರಜಾತಂತ್ರ ಇರಬೇಕು ಎಂಬ ಬಗ್ಗೆ ನ್ಯಾಯಾಲಯಕ್ಕೆ ಅರಿವಿದೆ. ಅಲ್ಲದೇ, ಇಂಥ ವಿಷಯಗಳಲ್ಲಿ ವ್ಯಾಪಕ ಸಹಮತವೂ ಅಗತ್ಯ’ ಎಂದು ನ್ಯಾಯಪೀಠ ಹೇಳಿತು.

ಆಗ, ‘ಸಲಿಂಗ ಮದುವೆಗೆ ವಿಶೇಷ ವಿವಾಹ ಕಾಯ್ದೆಯಡಿ ಮಾನ್ಯತೆ ನೀಡಿದಲ್ಲಿ, ಆಗ ವೈಯಕ್ತಿಕ ಕಾನೂನುಗಳಲ್ಲಿ ಮಾರ್ಪಾಡು ಸಾಧ್ಯವಾಗುವುದಿಲ್ಲ’ ಎಂದು ಮೆಹ್ತಾ ಹೇಳಿದರು.

‘ಸಲಿಂಗಿಗಳ ಸಂಬಂಧಕ್ಕೆ ಕೋರ್ಟ್‌ ಮಾನ್ಯತೆ ನೀಡುತ್ತದೆ ಎಂದ ಮಾತ್ರಕ್ಕೆ ಅದನ್ನು ಅವರ ಮದುವೆಗೆ ನೀಡಿದ ಮಾನ್ಯತೆ ಎಂದರ್ಥ ಮಾಡಿಕೊಳ್ಳುವಂತಿಲ್ಲ. ಕೆಲ ಸೌಲಭ್ಯಗಳನ್ನು ಪಡೆಯಲು ಈ (ಸಲಿಂಗ) ದಂಪತಿ ಅರ್ಹರಾಗಿರುತ್ತಾರೆ ಎಂದು ಅರ್ಥ. ಅಲ್ಲದೇ ಇಬ್ಬರು ಒಟ್ಟಿಗೆ ಬಾಳುತ್ತಿದ್ದಾರೆ ಎಂದರೆ ಅವರು ಮದುವೆಯಾಗಿದ್ದಾರೆ ಎನ್ನಬಾರದು’
ಡಿ.ವೈ. ಚಂದ್ರಚೂಡ್‌, ಸುಪ್ರೀಂಕೋರ್ಟ್‌ನ ಮು,ಖ್ಯ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT