ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಮೂರ್ತಿಗಳು ವೈಯಕ್ತಿಕ ಅನಿಸಿಕೆಗಳನ್ನು ವ್ಯಕ್ತಪಡಿಸಬಾರದು: ಸುಪ್ರೀಂ ಕೋರ್ಟ್

Published 8 ಡಿಸೆಂಬರ್ 2023, 18:28 IST
Last Updated 8 ಡಿಸೆಂಬರ್ 2023, 18:28 IST
ಅಕ್ಷರ ಗಾತ್ರ

ನವದೆಹಲಿ: ನ್ಯಾಯಮೂರ್ತಿ ಸ್ಥಾನದಲ್ಲಿ ಇರುವವರು ತಮ್ಮ ವೈಯಕ್ತಿಕ ಅನಿಸಿಕೆಗಳನ್ನು ವ್ಯಕ್ತಪಡಿಸಬಾರದು, ಬೋಧನೆಗೆ ಮುಂದಾಗಬಾರದು ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಹೇಳಿದೆ. ಅಲ್ಲದೆ, ಯುವತಿಯರು ತಮ್ಮ ‘ಲೈಂಗಿಕ ಬಯಕೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು’ ಎಂದು ಕಲ್ಕತ್ತಾ ಹೈಕೋರ್ಟ್‌ ಹೇಳಿದ್ದನ್ನು ಟೀಕಿಸಿದೆ.

ಹೈಕೋರ್ಟ್‌ ಆಡಿದ ಮಾತುಗಳು ಬಹಳ ಆಕ್ಷೇಪಾರ್ಹವಾಗಿವೆ, ಅನಗತ್ಯವಾಗಿವೆ ಎಂದು ಹೇಳಿರುವ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ಪಂಜಕ್ ಮಿತ್ತಲ್ ಅವರಿದ್ದ ವಿಭಾಗೀಯ ಪೀಠವು, ಆ ಮಾತುಗಳು ಸಂವಿಧಾನದ 21ನೆಯ ವಿಧಿಯ ಅಡಿಯಲ್ಲಿ ಹದಿಹರೆಯದವರಿಗೆ ಇರುವ ಹಕ್ಕುಗಳ ಉಲ್ಲಂಘನೆ ಎಂದಿದೆ.

ಅಕ್ಟೋಬರ್ 18ರಂದು ನೀಡಿದ್ದ ಆದೇಶದಲ್ಲಿ ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಮೂರ್ತಿ ಚಿತ್ತರಂಜನ್ ದಾಸ್ ಮತ್ತು ಪಾರ್ಥಸಾರಥಿ ಸೆನ್ ಅವರಿದ್ದ ವಿಭಾಗೀಯ ಪೀಠವು ಈ ಮಾತು ಆಡಿತ್ತು. ಅಲ್ಲದೆ, ಹದಿಹರೆಯದ ಹುಡುಗಿಯರು ‘ಎರಡು ನಿಮಿಷಗಳ ಸುಖಕ್ಕೆ ಶರಣಾಗಬಾರದು’ ಎಂದು ಕೂಡ ಹೇಳಿತ್ತು.

ಹೈಕೋರ್ಟ್‌ನ ಮುಂದೆ ಇದ್ದುದು ಆದೇಶವೊಂದು ಕಾನೂನಿನ ದೃಷ್ಟಿಯಿಂದ ಎಷ್ಟು ಸರಿ ಎಂಬುದನ್ನು ಪರಿಶೀಲಿಸುವುದಾಗಿತ್ತು. ‘ಅಪರಾಧ ನಿರ್ಣಯವನ್ನು ಪ್ರಶ್ನಿಸಿದ ಅರ್ಜಿಯ ವಿಚಾರಣೆಯಲ್ಲಿ, ಆ ಅರ್ಜಿಯಲ್ಲಿ ವಾದಗಳ ಹುರುಳನ್ನು ತೀರ್ಮಾನಿಸುವ ಕೆಲಸವನ್ನು ಹೈಕೋರ್ಟ್‌ ಮಾಡಬೇಕಿತ್ತು. ಇಂತಹ ಪ್ರಕರಣಗಳಲ್ಲಿ ಗೌರವಾನ್ವಿತ ನ್ಯಾಯಮೂರ್ತಿಗಳು ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ವ್ಯಕ್ತಪಡಿಸುವಂತಿಲ್ಲ, ಬೋಧನೆಗೆ ತೊಡಗುವಂತೆ ಇಲ್ಲ ಎಂಬುದು ನಮ್ಮ ಅನಿಸಿಕೆ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT