ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು - ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿ ಸೇರಿ ಮೂವರು ಉಗ್ರರ ಬಂಧನ

Last Updated 12 ಜನವರಿ 2020, 7:32 IST
ಅಕ್ಷರ ಗಾತ್ರ

ನವದೆಹಲಿ: ದಕ್ಷಿಣ ಕಾಶ್ಮೀರದಕಣಿವೆಯಲ್ಲಿ ನಡೆದ ಪ್ರಮುಖ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಭಾಗವಾಗಿ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಡೆಪ್ಯುಟಿ ಸೂಪರಿಂಟೆಂಡೆಂಟ್ ಪೊಲೀಸ್ ಸೇರಿ ಹಿಜ್ಬುಲ್ ಮುಜಾಹಿದ್ದೀನ್ ಮತ್ತು ಲಷ್ಕರ್-ಎ- ತಯಬಾದಇಬ್ಬರು ಉಗ್ರರನ್ನು ಬಂಧಿಸಲಾಗಿದೆ.

ಹಿಜ್ಬುಲ್ ಭಯೋತ್ಪಾದಕ ಮತ್ತು ಮಾಜಿ ಪೊಲೀಸ್ ಅಧಿಕಾರಿಯಾದ ನವೀದ್ ಅಹ್ಮದ್ ಷಾ ಅಲಿಯಾಸ್ ನವೀದ್ ಬಾಬು ಮತ್ತು ರಫಿ ಅಹ್ಮದ್ ಎಂಬಾತನೊಂದಿಗೆ ಇದ್ದಾಗ ಡಿಎಸ್‌ಪಿ ದೇವಿಂದರ್ ಸಿಂಗ್ ಅವರನ್ನು ಬಂಧಿಸಲಾಗಿದೆ.

ನವೀದ್ ಬಾಬು ಅಡಿಯಲ್ಲಿ 30 ಭಯೋತ್ಪಾದಕರು ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಮತ್ತು ಕಾಶ್ಮೀರ ಕಣಿವೆಯಲ್ಲಿ ಒಂದು ಡಜನ್‌ಗೂ ಹೆಚ್ಚು ಪೊಲೀಸರನ್ನು ಕೊಂದಿರುವ ಪ್ರಮುಖ ಆರೋಪಿ ಎಂದು ಹೇಳಲಾಗಿದೆ. ಆದರೆ ಭಯೋತ್ಪಾದಕ ಕೃತ್ಯದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೇ ಸಂಬಂಧ ಹೊಂದಿರುವುದು ಆಘಾತಕ್ಕೆ ಕಾರಣವಾಗಿದೆ.

ಭದ್ರತಾ ಪಡೆಯ ಮೂಲಗಳ ಪ್ರಕಾರ, ಉಗ್ರರನ್ನು ಬಂಧಿಸಿದ ವೇಳೆ ಅವರು ಐ10 ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಪೊಲೀಸ್ ಅಧಿಕಾರಿಯು ಕೆಲ ದಿನಗಳಿಂದ ಕಣ್ಗಾವಲಿನಲ್ಲಿದ್ದರು. ಶನಿವಾರ ಮಧ್ಯಾಹ್ನ ಚೆಕ್‌ಪೋಸ್ಟ್‌ಗಳನ್ನು ಹಾಕಿದ್ದ ಪೊಲೀಸರು ಕಾರು ಶ್ರೀನಗರದಿಂದ ಜಮ್ಮುವಿಗೆ ತೆರಳುತ್ತಿದ್ದಾಗ ನಾಲ್ವರನ್ನು ಬಂಧಿಸಿದ್ದಾರೆ. ಕ್ವಾಜಿಗುಂಡ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಆರೋಪಿಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗಿದ್ದು, ಡಿಎಸ್‌ಪಿ ದೇವಿಂದರ್ ಸಿಂಗ್, ಇಬ್ಬರು ಹಿಜ್ಬುಲ್ ಉಗ್ರರನ್ನು ಶರಣಾಗುವಂತೆ ಮನವರಿಕೆ ಮಾಡಿರುವುದಾಗಿ ಹೇಳಿದ್ದಾರೆ. ಆದರೆ ಇಬ್ಬರು ಹಿಜ್ಬುಲ್ ಭಯೋತ್ಪಾದಕರು ಶರಣಾಗತಿಯ ಬಗ್ಗೆ ಏನನ್ನೂ ಹೇಳಿಲ್ಲ. ಆದರೆ ಇಬ್ಬರೂ ಎರಡು ತಿಂಗಳ ಕಾಲ ಜಮ್ಮುವಿನ ಶಿಬಿರಕ್ಕೆ ಹೋಗುವುದಾಗಿ ಹೇಳಿದ್ದಾರೆ.

ಕಾರಿನ ಚಾಲಕ ಇರ್ಫಾನ್ ಕೂಡ ಉಗ್ರ ಚಟುವಟಿಕೆಯ ಸಂಬಂಧ ಹೊಂದಿರುವುದಾಗಿ ಶಂಕಿಸಲಾಗಿದೆ.
ಕಾರಿನಲ್ಲಿ ಶಸ್ತ್ರಾಸ್ತ್ರಗಳೊಂದಿಗಿದ್ದ ಗುಂಪು ಗಣರಾಜ್ಯೋತ್ಸವ ದಿನದಂದು ಉಗ್ರ ದಾಳಿ ನಡೆಸಲು ಯೋಜನೆ ರೂಪಿಸಿರಬಹುದೆಂಬ ಆತಂಕವಿದೆ ಎಂದು ಮೂಲಗಳು ತಿಳಿಸಿವೆ. ಉಗ್ರ ಘಟಕದಲ್ಲಿ ಪೊಲೀಸ್ ಅಧಿಕಾರಿ ಸಿಂಗ್ ಅವರ ಪಾತ್ರವಿರುವ ಕುರಿತು ಇನ್ನಷ್ಟು ತನಿಖೆ ಮಾಡಲಾಗುತ್ತಿದೆ.

ಡಿಎಸ್‌ಪಿ ಸಿಂಗ್ ಅವರು 1990ರ ದಶಕದಿಂದಲೂ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ಭಾಗವಾಗಿದ್ದವರು. ಟ್ರಾಲ್ ನಿವಾಸಿಯಾಗಿರುವ ಸಿಖ್ ಅಧಿಕಾರಿ, ಕಾಶ್ಮೀರ ಕಣಿವೆಯಲ್ಲಿ ಹೋರಾಡುವಲ್ಲಿ ಮುಂಚೂಣಿಯಲ್ಲಿದ್ದರು. ಆದರೆ ಇಬ್ಬರು ಭಯೋತ್ಪಾದಕರೊಂದಿಗೆ ಸಿಂಗ್ ಇರುವ ವಿಚಾರ ಬಹಿರಂಗಗೊಂಡ ನಂತರ ಶ್ರೀನಗರದ ಇಂದ್ರಾನಗರದಲ್ಲಿರುವ ಟ್ರಾಲ್ ಮತ್ತು ಸಿಂಗ್ ಅವರ ನಿವಾಸದಲ್ಲಿ ದಾಳಿ ನಡೆಸಿ 5 ಗ್ರೆನೇಡ್ ಮತ್ತು 3 ಎಕೆ- 47 ರೈಫಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಾಲ್ಕು ಜನರನ್ನು ಆಲ್ಸ್‌ಟಾಪ್ ಮಿರ್ಬಜಾರ್ ಕುಲ್ಗಾಂನಲ್ಲಿ ಬಂಧಿಸಲಾಗಿದೆ. ಹೆಚ್ಚಿನ ಮಾಹಿತಿ ನೀಡಲು ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಿರಾಕರಿಸಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT