ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Madras HC: ನ್ಯಾಯಮೂರ್ತಿಯಾಗಿ ಗೌರಿ ನೇಮಕಕ್ಕೆ ಆಕ್ಷೇಪ; CJI ಸ್ಪಷ್ಟನೆ

Published 16 ನವೆಂಬರ್ 2023, 11:08 IST
Last Updated 16 ನವೆಂಬರ್ 2023, 11:08 IST
ಅಕ್ಷರ ಗಾತ್ರ

ನವದೆಹಲಿ: ಮದ್ರಾಸ್ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡ ಲಕ್ಷ್ಮಣ ಚಂದ್ರ ವಿಕ್ಟೋರಿಯಾ ಗೌರಿ ಅವರ ನೇಮಕದಲ್ಲಿ ಕೊಲಿಜಿಯಂ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಸಮರ್ಥಿಸಿಕೊಂಡಿದ್ದಾರೆ.

'ವಕೀಲರೊಬ್ಬರು ತಮ್ಮ ವೃತ್ತಿಯ ಸಂದರ್ಭದಲ್ಲಿ ಹೊಂದಿರಬಹುದಾದ ಸ್ಥಾಪಿತ ಹಿತಾಸಕ್ತಿಯನ್ನು ಉನ್ನತ ಹುದ್ದೆಗೆ ನೇಮಕಗೊಂಡ ನಂತರ ಈಡೇರಿಸಿಕೊಳ್ಳುತ್ತಾರೆ ಎಂದು ಭಾವಿಸಬಾರದು’ ಎಂದಿದ್ದಾರೆ.

ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುತ್ತಿದ್ದ ವಕೀಲೆ ವಿಕ್ಟೋರಿಯಾ ಗೌರಿ ಅವರು ಬಿಜೆಪಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು.

ನ್ಯಾಯಮೂರ್ತಿಯಾಗಿ ವಿಕ್ಟೋರಿಯಾ ಗೌರಿ ಅವರ ನೇಮಕ ವಿರೋಧಿಸಿ ವಕೀಲರ ಸಂಘದ ಕೆಲ ಸದಸ್ಯರು ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದರು. ಇವರ ನೇಮಕವನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದ್ದರು. ಜತೆಗೆ ಕ್ರೈಸ್ತರು ಮತ್ತು ಮುಸ್ಲಿಮರ ವಿರುದ್ಧ ದ್ವೇಷ ಭಾಷಣಗಳನ್ನು ಮಾಡಿದ್ದಾರೆ ಎಂದೂ ಆರೋಪಿಸಲಾಗಿತ್ತು.

ಹಾರ್ವರ್ಡ್‌ ಶಾಲಾ ಕೇಂದ್ರದಲ್ಲಿ ಕಾನೂನು ವೃತ್ತಿಯಲ್ಲಿರುವವರಿಗಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಈ ಆರೋಪಗಳಿಗೆ ಪ್ರತಿಕ್ರಿಯಿಸಿದ್ದಾರೆ. ‘ನೇಮಕಗೊಂಡ ನ್ಯಾಯಮೂರ್ತಿ ಮಾಡಿರುವ ಭಾಷಣದ ಸ್ವರೂಪ ಕುರಿತು ಅತ್ಯಂತ ವಿವರವಾಗಿ ಮತ್ತು ಜಾಗರೂಕತೆಯಿಂದ ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ವೀಕ್ಷಿಸಿದೆ. ಜತೆಗೆ ಅದರ ಪ್ರತಿಕ್ರಿಯೆಯನ್ನು ಕೇಂದ್ರ ಸರ್ಕಾರವನ್ನೂ ಒಳಗೊಂಡಂತೆ ಸಂಬಂಧಿತ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಲಾಗಿದೆ’ ಎಂದಿದ್ದಾರೆ.

‘ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿರುತ್ತದೆ. ಒಕ್ಕೂಟ ವ್ಯವಸ್ಥೆಯ ತನಿಖಾ ಸಂಸ್ಥೆಗಳು, ವಕೀಲರು ಇದರಲ್ಲಿ ಇರುತ್ತಾರೆ. ಇದೊಂದು ಅತ್ಯಂತ ವಿಶಾಲವಾದ ಪ್ರಕ್ರಿಯೆಯಾಗಿದ್ದು, ಇಲ್ಲಿ ಯಾರೊಬ್ಬರ ಕೈವಾಡವೂ ನಡೆಯದು’ ಎಂದು ನ್ಯಾ. ಚಂದ್ರಚೂಡ್ ಸ್ಪಷ್ಟಪಡಿಸಿದ್ದಾರೆ.

‘ವೈವಿದ್ಯಮಯ ರಾಜಕೀಯ ದೃಷ್ಟಿಕೋನವುಳ್ಳ ವಕೀಲರು ಅದ್ಭುತ ನ್ಯಾಯಾಧೀಶರಾಗುತ್ತಾರೆ. ಅತ್ಯುತ್ತಮ ನ್ಯಾಯಮೂರ್ತಿಗಳಲ್ಲಿ ಒಬ್ಬರಾದ ನ್ಯಾ. ಕೃಷ್ಣ ಅಯ್ಯರ್ ಅವರು ರಾಜಕೀಯ ಹಿನ್ನೆಲೆ ಹೊಂದಿದ್ದರೂ ಅದ್ಭುತವಾದ ತೀರ್ಪುಗಳನ್ನು ನೀಡಿದ್ದರು. ವಕೀಲರೊಬ್ಬರು ನ್ಯಾಯಾಧೀಶರಾಗಿ ಪೀಠದಲ್ಲಿ ಕುಳಿತ ನಂತರ ಅವರು ತಟಸ್ಥ ಧೋರಣೆ ಹೊಂದುತ್ತಾರೆ. ಹಾಗೆಯೇ ವಕೀಲರಾಗಿದ್ದ ಸಂದರ್ಭದಲ್ಲಿ ಅವರು ಭಿನ್ನ ನೆಲೆಯ ಕಕ್ಷಿದಾರರನ್ನು ಪ್ರತಿನಿಧಿಸಿರುತ್ತಾರೆ’ ಎಂದರು.

‘ಯಾವುದೇ ವಕೀಲರು ತಮ್ಮ ಕಕ್ಷಿದಾರರು ಯಾರಾಗಿರಬೇಕು ಎಂದು ಹುಡುಕುವುದಿಲ್ಲ. ಬದಲಿಗೆ ನ್ಯಾಯ ಅರಸಿ ತಮ್ಮ ನೆರವು ಬಯಸಿ ಬರುವ ಯಾವುದೇ ಕಕ್ಷಿದಾರರಿಗೆ ನ್ಯಾಯ ಒದಗಿಸುವುದಕ್ಕೆ ವಕೀಲರು ಬದ್ಧರಾಗಿರಬೇಕು. ಚಿಕಿತ್ಸೆಗಾಗಿ ಬರುವ ಯಾರೊಬ್ಬರ ಹಿನ್ನೆಲೆಯನ್ನು ನೋಡದೆ ನಿಸ್ವಾರ್ಥದಿಂದ ಉಪಚರಿಸುವ ವೈದ್ಯರಂತೆಯೇ ವಕೀಲಿ ವೃತ್ತಿಯೂ ಆಗಿರಬೇಕು’ ಎಂದು ಅಭಿಪ್ರಾಯಪಟ್ಟರು.

ವಿಕ್ಟೋರಿಯಾ ಗೌರಿ ಅವರು ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸುವುದನ್ನು ತಡೆಯಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ಸುಪ್ರೀಂ ಕೋರ್ಟ್‌, ‘ಅವರ ನೇಮಕಕ್ಕೂ ಮೊದಲೇ ಕೊಲಿಜಿಯಂನಲ್ಲಿ ಸಮಾಲೋಚನಾ ಚರ್ಚೆಗಳು ನಡೆದಿದ್ದವು’ ಎಂದು ಹೇಳಿತ್ತು.

‘ಗೌರಿ ಅವರು ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ. ಒಂದೊಮ್ಮೆ ಅವರು ಪ್ರತಿಜ್ಞಾವಿಧಿ ಸ್ವೀಕರಿಸಿದಂತೆ ನಡೆದುಕೊಳ್ಳದಿದ್ದರೆ ಅಥವಾ ತಮ್ಮ ವೃತ್ತಿಯನ್ನು ಸಮರ್ಪಕವಾಗಿ ನಿರ್ವಹಿಸದಿದ್ದರೆ ಅವರ ನೇಮಕ ಕುರಿತು ಕೊಲಿಜಿಯಂ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ. ಹಿಂದೆಯೂ ಇಂಥ ಕ್ರಮಗಳನ್ನು ತೆಗೆದುಕೊಂಡ ಉದಾಹರಣೆಗಳಿವೆ’ ಎಂದು ನ್ಯಾ. ಚಂದ್ರಚೂಡ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT