ಗುರುವಾರ, 21 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2011ರಿಂದ ಭಾರತದ ಪೌರತ್ವ ತೊರೆದ 17 ಲಕ್ಷ ನಾಗರಿಕರು: ಈಗ ಅವರು ನೆಲೆಸಿದ್ದೆಲ್ಲಿ?

Published 22 ಜುಲೈ 2023, 10:58 IST
Last Updated 22 ಜುಲೈ 2023, 10:58 IST
ಅಕ್ಷರ ಗಾತ್ರ

ನವದೆಹಲಿ: ‘ಈ ವರ್ಷದಲ್ಲಿ ಜೂನ್‌ವರೆಗೆ ವಿದೇಶಗಳಲ್ಲಿ ನೆಲೆಸಿರುವ ಸುಮಾರು 87 ಸಾವಿರ ಮಂದಿ ಭಾರತದ ಪೌರತ್ವ ತೊರೆದಿದ್ದಾರೆ’ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್‌ ಲೋಕಸಭೆಗೆ ಶುಕ್ರವಾರ ಹೇಳಿದ್ದಾರೆ.

ಆ ಮೂಲಕ 2011ರಿಂದ ಇಲ್ಲಿಯವರೆಗೆ 17.5 ಲಕ್ಷ ಜನ ಭಾರತದ ಪೌರತ್ವ ತೊರೆದು, ವಿದೇಶಗಳಲ್ಲಿ ನೆಲೆಸಿದ್ದಾರೆ. ಕಳೆದ ಎರಡು ದಶಕಗಳಲ್ಲಿ ಜಾಗತಿಕ ಮಟ್ಟದಲ್ಲಿ ಸೃಷ್ಟಿಯಾಗಿರುವ ವಿಫುಲ ಉದ್ಯೋಗ ಅವಕಾಶಗಳನ್ನು ಬಹಳಷ್ಟು ಭಾರತೀಯರು ಆಯ್ಕೆ ಮಾಡಿಕೊಂಡಿದ್ದಾರೆ. ಹೀಗೆ ವಿದೇಶಗಳಿಗೆ ಹೋದವರು ತಮ್ಮ ಅನುಕೂಲಕ್ಕಾಗಿ ಅಲ್ಲಿ ನೆಲೆಸಲು ನಿರ್ಧರಿಸಿದ್ದೇ ಇಲ್ಲಿನ ಪೌರತ್ವ ತೊರೆಯಲು ಕಾರಣ. ಭಾರತೀಯರು ಹೊರದೇಶದಲ್ಲಿ ನೆಲೆಸಿರುವುದೂ ಭಾರತಕ್ಕೆ ಒಂದು ಆಸ್ತಿಯೇ ಸರಿ’ ಎಂದು ಜೈಶಂಕರ್ ಉತ್ತರ ರೂಪದಲ್ಲಿ ಲೋಕಸಭೆಗೆ ಹೇಳದ್ದಾರೆ.

‘ವಿವಿಧ ದೇಶಗಳ ಪೌರತ್ವ ಪಡೆದ ಯಶಸ್ವಿ ಹಾಗೂ ಪ್ರಭಾವ ಬೀರುವ ಭಾರತೀಯರಿಂದ ದೇಶಕ್ಕೆ ಲಾಭವೇ ಹೆಚ್ಚು. ಇದನ್ನು ಸಮರ್ಪಕವಾಗಿ ಬಳಸಿಕೊಂಡಲ್ಲಿ ದೇಶಕ್ಕೆ ಹೆಚ್ಚು ಅನುಕೂಲವಾಗಲಿದೆ’ ಎಂದಿದ್ದಾರೆ.

'2022ರಲ್ಲಿ 2.25 ಲಕ್ಷ, 2011ರಲ್ಲಿ 1.63 ಲಕ್ಷ, 2020ರಲ್ಲಿ 85 ಸಾವಿರ, 2019ರಲ್ಲಿ 1.44 ಲಕ್ಷ, 2018ರಲ್ಲಿ 1.34 ಲಕ್ಷ, 2017ರಲ್ಲಿ 1.33 ಲಕ್ಷ, 2016ರಲ್ಲಿ 1.41 ಲಕ್ಷ, 2015ರಲ್ಲಿ 1.31 ಲಕ್ಷ, 2014ರಲ್ಲಿ 1.29 ಲಕ್ಷ, 2013ರಲ್ಲಿ 1.31ಲಕ್ಷ, 2012ರಲ್ಲಿ 1.20 ಲಕ್ಷ, 2011ರಲ್ಲಿ 1.22 ಲಕ್ಷ ಜನ ಪೌರತ್ವ ತೊರೆದಿದ್ದಾರೆ.

ಪೌರತ್ವ ತೊರೆದವರು ಈಗ ನೆಲೆಸಿದ್ದೆಲ್ಲಿ...?

ಜಾಗತಿಕ ಮಟ್ಟದಲ್ಲಿ ಭವಿಷ್ಯ ಅರಸಿ ಹೋದವರು ಈ ಎರಡು ದಶಕದಲ್ಲೇ ಹೆಚ್ಚು. ಈ ವರ್ಷ ಜೂನ್‌ವರೆಗೆ ಪೌರತ್ವ ತೊರೆದ 87 ಸಾವಿರ ಜನರಲ್ಲಿ ಅಮೆರಿಕ ಮತ್ತು ಆಸ್ಟ್ರೇಲಿಯಾ ಆಯ್ಕೆ ಮಾಡಿಕೊಂಡವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಇದು ಸುಮಾರು 23 ಸಾವಿರ ಜನ. ನಂತರದ ಸ್ಥಾನಗಳಲ್ಲಿ ಕೆನಡಾ 21 ಸಾವಿರ, ಬ್ರಿಟನ್‌ 14 ಸಾವಿರ, ಇಟಲಿ 5,986, ನ್ಯೂಜಿಲೆಂಡ್‌ 2643, ಸಿಂಗಪುರ 2516, ಜರ್ಮನಿ 2318, ನೆದರ್‌ಲೆಂಡ್‌ 2187, ಸ್ವೀಡನ್‌ 1841, ಸ್ಪೇನ್‌ 1595 ದೇಶವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ವಿಶ್ವ ಸಂಸ್ಥೆಯ ವರದಿಯ ಪ್ರಕಾರ ಹೆಚ್ಚಿನ ಆದಾಯ ಇರುವ ಭಾರತದ ಮೇಲ್ಮಧ್ಯಮ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಗಳಲ್ಲಿ ನೆಲೆಸಿದ್ದಾರೆ. ಭಾರತದ ಪೌರತ್ವ ಹೊಂದಿರುವವರಲ್ಲಿ 2020ರವರೆಗೆ ಅಮೆರಿಕದಲ್ಲಿ 40 ಲಕ್ಷ ಜನ ಇದ್ದಾರೆ. ಅರಬ್ ಸಂಯುಕ್ತ ಸಂಸ್ಥಾನದಲ್ಲಿ 35ಲಕ್ಷ, ಸೌದಿ ಅರೇಬಿಯಾದಲ್ಲಿ 25ಲಕ್ಷ ಜನ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT