ನವದೆಹಲಿ: ಪೂರ್ವ ಲಡಾಖ್‌ನ ವಾಸ್ತವ ಗಡಿನಿಯಂತ್ರಣ ರೇಖೆಯಲ್ಲಿನ (ಎಲ್‌ಎಸಿ) ಪರಿಸ್ಥಿತಿ ಸ್ಥಿರವಾಗಿದೆಯಾದರೂ, ಅನಿಶ್ಚಿತತೆ ಮುಂದುವರಿದಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಮಂಗಳವಾರ ಹೇಳಿದ್ದಾರೆ.
ಈ ಪ್ರದೇಶದಲ್ಲಿ ಭಾರತ– ಚೀನಾ ನಡುವಣ ಮಿಲಿಟರಿ ಬಿಕ್ಕಟ್ಟಿನ ಕುರಿತು ಮಾತನಾಡಿದ ಅವರು, ‘ಗಡಿಯಲ್ಲಿ ಪರಿಸ್ಥಿತಿ ತುಂಬಾ ಬಿಗುವಿನಿಂದ ಕೂಡಿದೆ. 2020ರ ಏಪ್ರಿಲ್ 20ಕ್ಕೆ ಮೊದಲು ಇದ್ದಂತಹ ಪರಿಸ್ಥಿತಿಯನ್ನು ನಾವು ಪುನಃ ಸ್ಥಾಪಿಸಲು ಬಯಸುತ್ತೇವೆ’ ಎಂದು ತಿಳಿಸಿದರು.
ಪರಿಸ್ಥಿತಿ ತಿಳಿಗೊಳಿಸಲು ನಡೆದಿರುವ ಮಾತುಕತೆಗಳು ‘ಸಕಾರಾತ್ಮಕ ಸೂಚನೆ’ಗಳನ್ನು ನೀಡಿವೆ ಎಂದು ಅವರು ಹೇಳಿದರು. ಅನಿಶ್ಚಿತತೆಗೆ ತೆರೆ ಎಳೆಯುವ ನಿಟ್ಟಿನಲ್ಲಿ ಉಭಯ ದೇಶಗಳು ರಾಜತಾಂತ್ರಿಕ ಹಂತದಲ್ಲಿ ಎರಡು ಸುತ್ತಿನ ಮಾತುಕತೆಯನ್ನು ಜುಲೈ ಮತ್ತು ಆಗಸ್ಟ್‌ನಲ್ಲಿ ನಡೆಸಿವೆ.
‘ರಾಜತಾಂತ್ರಿಕ ಹಂತದ ಮಾತುಕತೆಗಳು ಬಿಕ್ಕಟ್ಟು ಬಗೆಹರಿಸಲು ಬೇಕಾದ ಅವಕಾಶಗಳು ಮತ್ತು ಸಾಧ್ಯತೆಗಳನ್ನು ನಮ್ಮ ಮುಂದಿಡುತ್ತವೆ. ಆದರೆ ವಾಸ್ತವ ಪರಿಸ್ಥಿತಿಯನ್ನು ನೋಡಿಕೊಂಡು ಅವುಗಳನ್ನು ಕಾರ್ಯರೂಪಕ್ಕಿಳಿಸುವ ನಿರ್ಧಾರವನ್ನು ಎರಡೂ ಕಡೆಯ ಸೇನಾ ಕಮಾಂಡರ್‌ಗಳು ತೆಗೆದುಕೊಳ್ಳುವರು’ ಎಂದು ಸ್ಪಷ್ಟಪಡಿಸಿದರು.
ಪೂರ್ವ ಲಡಾಖ್‌ನ ಎಲ್‌ಎಸಿ ಬಳಿ ಭಾರತ– ಚೀನಾ ನಡುವಣ ಮಿಲಿಟರಿ ಬಿಕ್ಕಟ್ಟು 2020ರ ಮೇ ನಲ್ಲಿ ಆರಂಭವಾಗಿತ್ತು. ಹಲವು ಸುತ್ತುಗಳ ಮಾತುಕತೆಗಳ ಬಳಿವೂ ಬಿಕ್ಕಟ್ಟು ಶಮನಗೊಳಿಸಲು ಸಾಧ್ಯವಾಗಿಲ್ಲ.
‘ಅನಿಶ್ಚಿತತೆ ದೂರವಾಗುವವರೆಗೂ, ನಮಗೆ ಸಂಬಂಧಿಸಿದಂತೆ ಅಲ್ಲಿನ ಪರಿಸ್ಥಿತಿಯು ಸೂಕ್ಷ್ಮವಾಗಿಯೇ ಇರುತ್ತದೆ. ಆದ್ದರಿಂದ ಯಾವುದೇ ಸವಾಲನ್ನು ಎದುರಿಸಲು ಕಾರ್ಯಾಚರಣೆಗೆ ಸದಾ ಸಿದ್ಧರಾಗಿಯೇ ಇರುತ್ತೇವೆ’ ಎಂದು ಸೇನಾ ಮುಖ್ಯಸ್ಥರು ತಿಳಿಸಿದರು.