ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಗವದ್ಗೀತೆಯಲ್ಲಿ ಸಮಾಜದ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಿದೆ: ಅಮಿತ್ ಶಾ

Published 23 ಡಿಸೆಂಬರ್ 2023, 4:05 IST
Last Updated 23 ಡಿಸೆಂಬರ್ 2023, 4:05 IST
ಅಕ್ಷರ ಗಾತ್ರ

ಕುರುಕ್ಷೇತ್ರ (ಹರಿಯಾಣ): ಸಮಾಜದ ಎಲ್ಲಾ ಸಮಸ್ಯೆಗಳಿಗೆ ಭಗವದ್ಗೀತೆಯಲ್ಲಿ ಪರಿಹಾರವಿದೆ. ಅದರ ಸಂದೇಶವು ದೇಶ ಹಾಗೂ ಪ್ರಪಂಚದ ಮೂಲೆ ಮೂಲೆಯನ್ನು ತಲುಪಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು.

ಹರಿಯಾಣದ ಕುರುಕ್ಷೇತ್ರದಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಗೀತಾ ಉತ್ಸವದಲ್ಲಿ ಸಂತ ಸಮ್ಮೇಳನವನ್ನು ಉದ್ದೇಶಿಸಿ ಅವರು ಮಾತನಾಡಿದರು. ‘ನಾನು ಪ್ರಪಂಚದಾದ್ಯಂತ ಅನೇಕ ವಿದ್ವಾಂಸರನ್ನು ಭೇಟಿ ಮಾಡಿದ್ದೇನೆ. ಪ್ರಪಂಚದ ಎಲ್ಲಾ ಸಮಸ್ಯೆಗಳಿಗೆ ಭಗವದ್ಗೀತೆಯಲ್ಲಿ ಸಾರಿರುವ ಸಂದೇಶದಲ್ಲಿ ಪರಿಹಾರವಿದೆ ಎಂದು ಎಲ್ಲರೂ ನಂಬುತ್ತಾರೆ’ ಎಂದು ಅವರು ತಿಳಿಸಿದರು.

ಮಹಾಭಾರತವನ್ನು ಉಲ್ಲೇಖಿಸಿ ಮಾತನಾಡಿದ ಶಾ ‘5,000 ವರ್ಷಗಳ ಹಿಂದೆ ಶ್ರೀಕೃಷ್ಣನು ಅರ್ಜುನನಿಗೆ ಗೀತೆಯ ಸಂದೇಶವನ್ನು ಬೋಧಿಸಿದ ಕುರುಕ್ಷೇತ್ರ ಪುಣ್ಯಭೂಮಿಯಲ್ಲಿ ಇಂದು ನಾವು ಕುಳಿತಿದ್ದೇವೆ. ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದವರು ಒಳಗೊಂಡಂತೆ ಕೆಲವು ಬುದ್ಧಿಜೀವಿಗಳು ಭಗವದ್ಗೀತೆಯ ಸಂದೇಶವನ್ನು ಎಲ್ಲೆಡೆ ಹರಡಲು ಯಶಸ್ವಿಯಾದರೆ, ಜಗತ್ತಿನಲ್ಲಿ ಎಂದಿಗೂ ಯುದ್ಧ ನಡೆಯುವುದಿಲ್ಲ’ ಎಂದು ಹೇಳಿದರು.

‘ನಾನು ಜೀವನದಲ್ಲಿ ಅನೇಕ ಏರಿಳಿತಗಳನ್ನು ಕಂಡಿದ್ದೇನೆ, ಆದರೆ ನನ್ನ ತಾಯಿ ನನಗೆ ಬಾಲ್ಯದಲ್ಲಿ ಭಗವದ್ಗೀತೆಯನ್ನು ಕಲಿಸಿದ ಕಾರಣ ನಾನು ಯಾವುದೇ ನಿರಾಶೆ ಮತ್ತು ನೋವನ್ನು ಅನುಭವಿಸಲಿಲ್ಲ’ ಎಂದು ಶಾ ಹೇಳಿದರು.

ಮೋದಿಯವರು ಪ್ರಧಾನಿಯಾದ ನಂತರ ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ಆತ್ಮ ಪ್ರಜ್ಞೆಯನ್ನು ಜಾಗೃತಗೊಳಿಸುವ ಕೆಲಸ ಮಾಡಿದ್ದಾರೆ. ದೇಶದ ಸಂಸ್ಕೃತಿಯನ್ನು ಸದಾ ಮುಂದಕ್ಕೆ ಕೊಂಡೊಯ್ಯಬೇಕು ಎಂಬ ನಂಬಿಕೆಯೊಂದಿಗೆ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಗಳನ್ನು ಹೊರತಂದಿದೆ ಮತ್ತು ಅದನ್ನು ಮಾರ್ಗದರ್ಶಿ ಶಕ್ತಿಯಾಗಿ ಇಟ್ಟುಕೊಂಡು ಸರ್ಕಾರ ನೀತಿಗಳನ್ನು ರೂಪಿಸಿದೆ ಎಂದು ಅವರು ತಿಳಿಸಿದರು.

ದೇಶದಲ್ಲಿ ಸಾಂಸ್ಕೃತಿಕ ಮತ್ತು ಧಾರ್ಮಿಕ ಪುನರುಜ್ಜೀವನದ ಆರಂಭಕ್ಕಾಗಿ, ರಾಮಮಂದಿರವನ್ನು ನಿರ್ಮಿಸಬೇಕು ಮತ್ತು 'ತ್ರಿವಳಿ ತಲಾಖ್' ಅನ್ನು ಕೊನೆಗೊಳಿಸಬೇಕು ಎಂಬ ಬಿಜೆಪಿ ಪ್ರಣಾಳಿಕೆಯಲ್ಲಿನ ಎರಡು ಭರವಸೆಗಳನ್ನು ಶಾ ಉಲ್ಲೇಖಿಸಿದರು.

2016ರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಗೀತಾ ಹಬ್ಬವನ್ನು ಆಯೋಜಿಸಲಾಗುತ್ತಿದೆ. ಇದಕ್ಕೂ ಎರಡು ವರ್ಷಗಳ ಹಿಂದೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಇಂತಹ ಕಾರ್ಯಕ್ರಮವನ್ನು ಆಯೋಜಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು ಎಂದು ಶಾ ಹೇಳಿದರು.

ಕಾರ್ಯಕ್ರಮದಲ್ಲಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್‌ ಖಟ್ಟರ್‌, ಯೋಗ ಗುರು ರಾಮದೇವ್‌ ಮತ್ತು ಸ್ವಾಮಿ ಜ್ಞಾನಾನಂದ ಮಹಾರಾಜ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT