ವಯನಾಡ್: ವಯನಾಡ್ ಜಿಲ್ಲೆಯಲ್ಲಿ ಭೀಕರ ಭೂಕುಸಿತ ಸಂಭವಿಸಿರುವ ಕೆಲವು ಪ್ರದೇಶಗಳನ್ನು ಶಾಶ್ವತವಾಗಿ ವಾಸಯೋಗ್ಯವಲ್ಲ ಎಂದು ಘೋಷಿಸುವ ಸಾಧ್ಯತೆಗಳಿವೆ.
ಜುಲೈ 30ರಂದು ಸಂಭವಿಸಿದ್ದ ಭೀಕರ ಭೂಕುಸಿತದಲ್ಲಿ ಬದುಕುಳಿದ ಹಲವರು ಆಘಾತಕ್ಕೊಳಗಾಗಿದ್ದು, ತಮ್ಮ ಮನೆಗಳಿಗೆ ಮರಳಲು ಹಿಂಜರಿಯುತ್ತಿದ್ದಾರೆ. ಅವರು ಪರ್ಯಾಯ ವ್ಯವಸ್ಥೆಯ ನಿರೀಕ್ಷೆಯಲ್ಲಿದ್ದಾರೆ.
ತೀವ್ರವಾಗಿ ತತ್ತರಿಸಿರುವ ಪುಂಜಿರಿಮಟ್ಟಮ್, ಚೂರಲ್‌ಮಲ ಮತ್ತು ಮುಂಡಕ್ಕೈ ಗ್ರಾಮಗಳಲ್ಲಿ ಪುನವರ್ಸತಿ ಕಲ್ಪಿಸಲು ಪ್ರಯತ್ನಿಸುತ್ತಿರುವ ಅಧಿಕಾರಿಗಳು, ‘ಪುಂಜಿರಿಮಟ್ಟಮ್ ಮತ್ತು ಚೂರಲ್‌ಮಲದಲ್ಲಿ ಭವಿಷ್ಯದಲ್ಲಿ ಜನರು ವಾಸವಿರಲು ಸಾಧ್ಯವಿಲ್ಲ’ ಎಂದು ತಿಳಿಸಿದ್ದಾರೆ.
‘ಗಾಯತ್ರಿ ನದಿಯಲ್ಲಿ ದೊಡ್ಡ ದೊಡ್ಡ ಬಂಡೆಗಳು, ಮರಗಳು ಕೊಚ್ಚಿಬಂದ ಪರಿಣಾಮ ಕೆಲ ಪ್ರದೇಶಗಳಲ್ಲಿ ಈ ಹಿಂದೆ ಇದ್ದ ಭೌಗೋಳಿಕ ಸಂರಚನೆಯು ಸಂಪೂರ್ಣವಾಗಿ ಬದಲಾಗಿದೆ. ಮನೆ, ಶಾಲೆ. ದೇವಸ್ಥಾನ ಮತ್ತು ಇತರ ಸಾರ್ವಜನಿಕ ಕಟ್ಟಡಗಳು ನೆಲಸಮವಾಗಿವೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ನಮ್ಮ ಮನೆ, ಅಂಗಡಿ ಎಲ್ಲವನ್ನು ಕಳೆದುಕೊಂಡಿದ್ದೇವೆ. ಮತ್ತೆ ಅಲ್ಲಿ ಹೋಗಿ ಜೀವನ ನಡೆಸಲು ಸಾಧ್ಯವಿಲ್ಲ. ಸರ್ಕಾರ ನಮಗೆ ಸಹಾಯ ಮಾಡುತ್ತದೆ ಎಂಬ ನಿರೀಕ್ಷೆಯಲ್ಲಿದ್ದೇವೆ’ ಎಂದು ನಿರಾಶ್ರಿತರು ತಿಳಿಸಿದ್ದಾರೆ.