ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಕಾಲೇಜು: ದಕ್ಷಿಣದ ರಾಜ್ಯಗಳ ಅಧಿಕಾರ ಮೊಟಕು

Published 27 ಸೆಪ್ಟೆಂಬರ್ 2023, 23:58 IST
Last Updated 27 ಸೆಪ್ಟೆಂಬರ್ 2023, 23:58 IST
ಅಕ್ಷರ ಗಾತ್ರ

ಚೆನ್ನೈ: ಪದವಿ ಕೋರ್ಸ್‌ಗಳಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ರೂಪಿಸಿರುವ ಮಾರ್ಗಸೂಚಿಗಳು ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ಬಂದಲ್ಲಿ ದಕ್ಷಿಣ ಭಾರತದ ಐದು ರಾಜ್ಯಗಳ ಪೈಕಿ ಯಾವ ರಾಜ್ಯವೂ ಹೊಸ ವೈದ್ಯಕೀಯ ಕಾಲೇಜು ತೆರೆಯಲು ಅಥವಾ ಇರುವ ಕಾಲೇಜುಗಳಲ್ಲಿ ಹೆಚ್ಚುವರಿಯಾಗಿ ಎಂಬಿಬಿಎಸ್‌ ಸೀಟುಗಳನ್ನು ನೀಡಲು ಸಾಧ್ಯವಾಗುವುದಿಲ್ಲ.

ಹೊಸ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರವು ಆಗಸ್ಟ್‌ 16ರಂದು ಅಧಿಸೂಚನೆಯಲ್ಲಿ ಪ್ರಕಟಿಸಿದೆ. ಇದು ಹಾಲಿ ಇರುವ ಖಾಸಗಿ ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿನ ಎಂಬಿಬಿಎಸ್ ಸೀಟುಗಳ ಸಂಖ್ಯೆಗೆ ಮಿತಿ ಹೇರುವುದಷ್ಟೇ ಅಲ್ಲದೆ, ರಾಜ್ಯಗಳಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಗೆ 100 ಎಂಬಿಬಿಎಸ್ ಸೀಟುಗಳು ಇರಬೇಕು ಎಂಬ ನಿಯಮವೊಂದನ್ನು ಜಾರಿಗೆ ತರುತ್ತದೆ.

ದಕ್ಷಿಣ ಭಾರತದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶವಾಗಿರುವ ಪುದುಚೇರಿಯು ಈ ಅನುಪಾತಕ್ಕಿಂತ (10 ಲಕ್ಷ ಜನಸಂಖ್ಯೆಗೆ 100 ಎಂಬಿಬಿಎಸ್‌ ಸೀಟುಗಳು) ಹೆಚ್ಚಿನ ಸೀಟುಗಳನ್ನು ಈಗಾಗಲೇ ಹೊಂದಿವೆ.

ಕರ್ನಾಟಕ 11,695 ಸೀಟುಗಳನ್ನು (6.76 ಕೋಟಿ ಜನಸಂಖ್ಯೆಗೆ) ಈಗಾಗಲೇ ಹೊಂದಿದೆ. ಹೊಸ ಮಾರ್ಗಸೂಚಿಗಳ ಅನ್ವಯ ಕರ್ನಾಟಕವು 6,770 ಸೀಟುಗಳನ್ನು ಮಾತ್ರ ಹೊಂದಲು ಅವಕಾಶವಿದೆ.

ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಪ್ರತಿ ಜಿಲ್ಲೆಗೆ ಒಂದು ವೈದ್ಯಕೀಯ ಕಾಲೇಜು ಆರಂಭಿಸುವ ಉದ್ದೇಶ ಹೊಂದಿವೆ. ಈ ಉದ್ದೇಶಕ್ಕೆ ಹೊಸ ಮಾರ್ಗಸೂಚಿ ಅಡ್ಡಿಯಾಗಲಿದೆ. ಅಷ್ಟೇ ಅಲ್ಲದೆ, ಇದು ಆರೋಗ್ಯಸೇವೆ ಮತ್ತು ಶಿಕ್ಷಣವನ್ನು ಒದಗಿಸುವ ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸುವಂತೆಯೂ ಇದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.

ಈ ಮಾರ್ಗಸೂಚಿಗಳನ್ನು ಒಪ್ಪಲು ಆಗದು. ಈ ಬಗ್ಗೆ ಕೇಂದ್ರಕ್ಕೆ ಪತ್ರ ಬರೆಯಲಾಗುವುದು ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ ಹೇಳಿದ್ದಾರೆ.

ರಾಜ್ಯಗಳ ಜನಸಂಖ್ಯೆಗೆ ಅನುಗುಣವಾಗಿ ವೈದ್ಯಕೀಯ ಸೀಟುಗಳು ಇಲ್ಲದಿದ್ದಲ್ಲಿ, ಹೆಚ್ಚುವರಿ ಸೀಟುಗಳಿಂದಾಗಿ ನಿರುದ್ಯೋಗ ಸೃಷ್ಟಿಯಾಗುತ್ತದೆ ಎಂಬುದು ಈ ಮಾರ್ಗಸೂಚಿಗಳ ಪರ ಇರುವ ವಾದ. ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶ ರಾಜ್ಯಗಳು ಹೊಸದಾಗಿ ವೈದ್ಯಕೀಯ ಕಾಲೇಜು ಆರಂಭಿಸುವ ಉದ್ದೇಶ ಹೊಂದಿವೆ. ಆದರೆ ಎನ್‌ಎಂಸಿ ಮಾರ್ಗಸೂಚಿಗಳು ಇದಕ್ಕೆ ಅಡ್ಡಿ ಉಂಟುಮಾಡಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT